Connect with us

Bengaluru Rural

ಟನ್ ಗಟ್ಟಲೆ ಕೊಳೆಯುತ್ತಿವೆ ಅನ್ನಭಾಗ್ಯ ಯೋಜನೆಯ ಆಹಾರ ಪದಾರ್ಥಗಳು!

Published

on

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಆಹಾರ ಪದಾರ್ಥಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಗೋದಾಮುಗಳಲ್ಲೇ ಕೊಳೆಯುತ್ತಿದ್ದು, ಸರ್ಕಾರ ನೂರಾರು ಕೋಟಿ ರೂ. ನೀಡಿ ಖರೀದಿಸಿದ್ದ ಪಡಿತರ ವ್ಯರ್ಥವಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆಯಾಗಿ ಆನೇಕಲ್, ಜಿಗಣಿ ಹಾಗೂ ಸರ್ಜಾಪುರದಲ್ಲಿರುವ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಗೋದಾಮುಗಳಲ್ಲಿ ಟನ್‍ಗಟ್ಟಲೇ ಗೋಧಿ ಕೊಳೆಯುತ್ತಿದೆ.

ಆನೇಕಲ್ ತಾಲೂಕಿನ ಕೇಂದ್ರ ಭಾಗವಾಗಿರುವ ಆನೇಕಲ್ ಪಟ್ಟಣದ ಗೋದಾಮಿನಲ್ಲಿ 331 ಕ್ವಿಂಟಾಲ್, ಜಿಗಣಿಯಲ್ಲಿ 125 ಕ್ವಿಂಟಲ್ ಹಾಗೂ ಸರ್ಜಾಪುರದಲ್ಲಿ 100 ಕ್ವಿಂಟಾಲ್ ಗೋಧಿ ಪತ್ತೆಯಾಗಿದ್ದು ಸಂಪೂರ್ಣವಾಗಿ ಹಾಳಾಗಿದ್ದು ಮನುಷ್ಯ ತಿನ್ನಲು ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ.

ರಾಜ್ಯ ಸರ್ಕಾರ ಒಂದು ವರ್ಷದ ಹಿಂದೆಯೇ ಈ ಗೋಧಿಯನ್ನು ಖರಿದೀ ಮಾಡಿದ್ದು, ಫಲಾನುಭವಿಗಳಿಗೆ ಸಿಗಬೇಕಾದ ಆಹಾರ ಇಲಿಗಳ ಪಾಲಾಗಿದೆ. ರಾಜ್ಯ ಸರ್ಕಾರ ಗೋಧಿ ವಿತರಣೆಯನ್ನು ಅವೈಜ್ಞಾನಿಕವಾಗಿ ನಿಲ್ಲಿಸಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಇಲಾಖೆಯ ಮೂಲಗಳ ಪ್ರಕಾರ ರಾಜ್ಯಾದ್ಯಂತ 1,25 ಲಕ್ಷ ಕ್ವಿಂಟಾಲ್ ಗೋಧಿ ಹೀಗೆ ಕೊಳೆಯುತ್ತಿದೆ ಎಂದು ತಿಳಿದುಬಂದಿದೆ.

ಅನ್ನಭಾಗ್ಯ ಯೋಜನೆಯಲ್ಲಿ ನೀಡುವ ಇತರೇ ಆಹಾರ ಪದಾರ್ಥಗಳಾದ ರಾಗಿಯೂ ಇದೇ ರೀತಿ ಕೊಳೆಯುತ್ತಿದೆ. ಬಡ ಜನರ ಹಸಿವನ್ನು ನೀಗಿಸುವ ಪ್ರಮುಖ ಯೋಜನೆಯಾಗಿ ರಾಜ್ಯ ಸರ್ಕಾರ ಹೆಮ್ಮೆಯಿಂದ ಜಾರಿಗೆ ತಂದಿರುವ ಯೋಜನೆ ಇದಾಗಿದ್ದು, ಬಡವರ ಹಸಿವನ್ನು ನೀಗಿಸ ಬೇಕಾದ ಆಹಾರ ಕೊಳೆಯುತ್ತಿರುವ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರವೇ ಆಹಾರ ಪದಾರ್ಥಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಅಧಿಕಾರಿಗಳನ್ನು ಕೇಳಿದರೆ ನಾವು ಈಗಾಗಲೇ ಆಹಾರ ಪದಾರ್ಥದ ಸ್ಯಾಂಪಲ್‍ಗಳನ್ನು ಪರೀಕ್ಷೆ ಮಾಡಲು ಲ್ಯಾಬ್‍ಗೆ ಕಳುಹಿಸಿಕೊಟ್ಟಿದ್ದೇವೆ. ವರದಿ ಬಂದ ನಂತರ ಆಹಾರ ಜನರು ತಿನ್ನಲು ಯೋಗ್ಯವಾಗಿದ್ದಲ್ಲಿ ಅದನ್ನು ವಿತರಣೆ ಮಾಡುತ್ತೇವೆ. ಮುಂದಿನ ಕ್ರಮವನ್ನು ಉನ್ನತ ಅಧಿಕಾರಿಗಳು ಕೈಗೊಳ್ಳುತ್ತಾರೆ ಎಂಬ ಉತ್ತರವನ್ನು ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *