ಮುಂಬೈ: ಎರಡು ವರ್ಷಗಳ ಬಳಿಕ ಐಪಿಎಲ್ ಗೆ ರೀ ಎಂಟ್ರಿ ಕೊಟ್ಟ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನೊಂದಿಗೆ ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದ್ದು, ಅಭಿಮಾನಿಗಳಿಗೆ ಆರಂಭದಲ್ಲೇ ಸಂತಸ ನೀಡಿದೆ.
ವಾಂಖೇಡೆಯಲ್ಲಿ ಶನಿವಾರ ನಡೆದ ಐಪಿಎಲ್ 11ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಬ್ರಾವೋ ಚೆನ್ನೈ ಗೆಲುವಿಗೆ ಕಾರಣರಾದರು. ಕೇವಲ 30 ಎಸೆತಗಳಲ್ಲಿ 68 ರನ್ ಸಿಡಿಸಿ ಭರ್ಜರಿ ಪ್ರದರ್ಶನ ನೀಡಿದರು.
Advertisement
Advertisement
ಪಂದ್ಯದ ಬಳಿಕ ಮಾತನಾಡಿದ ಬ್ರಾವೋ, ತಾನು ಯಾವುದೇ ಟೂರ್ನಿಯನ್ನು ಗೆಲುವಿನೊಂದಿಗೆ ಆರಂಭಿಸಲು ಇಷ್ಟ ಪಡುತ್ತೇನೆ. ಹಾಗೆಯೇ ಐಪಿಎಲ್‍ನಲ್ಲೂ ತಂಡದ ಗೆಲುವಿನೊಂದಿಗೆ ಶುಭಾರಂಭವಾಗಿದೆ. ಚೆನ್ನೈ ಮತ್ತು ಭಾರತೀಯ ಕ್ರಿಕೆಟ್ ಅಭಿಮಾನಿಗಳು ತನ್ನ ಪ್ರದರ್ಶನಕ್ಕೆ ಪ್ರೇರಣೆ ಎಂದು ಹೇಳಿದರು.
Advertisement
25 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ್ದರೂ ಸಂಭ್ರಮಾಚರಣೆ ಮಾಡಿಲ್ಲ ಯಾಕೆ ಎನ್ನುವ ಪ್ರಶ್ನೆಗೆ, ಬ್ಯಾಟಿಂಗ್ ವೇಳೆ ಪಂದ್ಯದ ಕೊನೆಯ ಓವರ್ ವರೆಗೂ ಆಡಲು ನಿರ್ಧರಿಸಿದ್ದೆ. ಅದರಂತೆ ಅರ್ಧ ಶತಕ ಪೂರೈಸಿದ ವೇಳೆಯೂ ಯಾವುದೇ ಸಂಭ್ರಮಾಚರಣೆ ಮಾಡಿಲ್ಲ. ತಂಡದ ಗೆಲುವು ಮುಖ್ಯವಾಗಿತ್ತು ಎಂದು ಉತ್ತರಿಸಿದರು.
Advertisement
ಚೆನ್ನೈ ತಂಡ 75 ರನ್ ಗಳಿಗೆ 5 ಪ್ರಮುಖ ವಿಕೆಟ್ ಕಳೆದುಕೊಂಡ ವೇಳೆ ಭರ್ಜರಿ ಬ್ಯಾಟಿಂಗ್ ನಡೆಸಿ ಬ್ರಾವೋ ತಂಡಕ್ಕೆ ಆಸರೆಯಾದರು. ಕೊನೆಯ 18 ಎಸೆತಗಳಲ್ಲಿ 47 ರನ್ ಗಳ ಅಗತ್ಯವಿತ್ತು. ಮಿಚೆಲ್ ಮೆಕ್‌ಕ್ಲೆನಗನ್ ಬೌಲಿಂಗ್ ನಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ಸಿಡಿಸಿ 18ನೇ ಓವರ್ ನಲ್ಲಿ 20 ರನ್ ಕಲೆ ಹಾಕಿದರು. ಬಳಿಕ ಬೆಸ್ಟ್ ಡೆತ್ ಬೌಲರ್ ಎಂದು ಹೆಗ್ಗಳಿಕೆ ಪಡೆದ ಬುಮ್ರಾ ಬೌಲಿಂಗ್ ನಲ್ಲಿ 3 ಸಿಕ್ಸರ್ ಸಿಡಿಸಿ ತಂಡದ ಗೆಲುವು ಖಚಿತ ಪಡಿಸಿದರು. ಈ ಮೂಲಕ ಬುಮ್ರಾ ಬೌಲಿಂಗ್ ಓವರ್ ಒಂದರಲ್ಲಿ 3 ಸಿಕ್ಸರ್ ಸಿಡಿಸಿದ ಮೊದಲಿಗ ಎಂಬ ಹೆಗ್ಗಳಿಗೆ ಬ್ರಾವೋ ಪಾತ್ರರಾದರು.
Dwayne Bravo is the first player to hit 3 sixes in an over off Bumrah in T20s. #MIvsCSK #IPL2018
— Bharath Seervi (@SeerviBharath) April 7, 2018
ಅಂತಿಮವಾಗಿ ಚೆನ್ನೈ ಒಂದು ಎಸೆತ ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು. ಎರಡು ವರ್ಷಗಳ ಬಳಿಕ ಐಪಿಎಲ್ ಗೆ ಪ್ರವೇಶ ಪಡೆದ ಮೊದಲ ಪಂದ್ಯಲ್ಲೇ ಚೆನ್ನೈ ತಂಡ ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ನೀಡಿದೆ. ಸ್ಫೋಟಕ ಬ್ಯಾಟಿಂಗ್ ನಡೆಸಿ 68 ರನ್(30 ಎಸೆತ, 3 ಬೌಂಡರಿ, 7 ಸಿಕ್ಸರ್) ಚಚ್ಚಿದ ಬ್ರಾವೋ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಮುಂಬೈ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತ್ತು. ತಂಡದ ಪರ ಸೂರ್ಯ ಕುಮಾರ್ ಯಾದವ್ 43, ಕೃಷ್ಣ 40, ಕೃಣಲ್ ಪಾಂಡ್ಯ 41 ರನ್ ನೇರವಿನಿಂದ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು.