ಬೆಂಗಳೂರು: ಸೋಮವಾರ ರೋಡ್‍ಗಿಳಿಯುವ ಮುನ್ನ ಜೋಪಾನ. ಯಾಕೆಂದರೆ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ನಾಳೆ(ಸೋಮವಾರ) ಬಂದ್ ಆಗಲಿದೆ.
ಹೌದು. ರಾಷ್ಟ್ರೀಯ ಹೆದ್ದಾರಿಯನ್ನು ರೈತರು ಒಂದು ದಿನ ಬಂದ್ ಮಾಡಲಿದ್ದಾರೆ. ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೇರಿದಂತೆ ನಾನಾ ಬೇಡಿಕೆ ಮುಂದಿಟ್ಟು ರೈತರು ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಬೀದಿಗಿಳಿಯಲಿದ್ದಾರೆ.
ಸೋಮವಾರ ರೈತರು ಬಂದ್ ಮಾಡಲಿರುವ ರಾಷ್ಟ್ರೀಯ ಹೆದ್ದಾರಿಗಳು:
1. ಬೊಮ್ಮಸಂದ್ರ ಹೆದ್ದಾರಿ
2. ದೇವನಹಳ್ಳಿ ಟೋಲ್ ಎಂಟ್ರೆನ್ಸ್
3. ಚಿಕ್ಕಬಳ್ಳಾಪುರ ಟೋಲ್ ಎಂಟ್ರೆನ್ಸ್
4. ತುಮಕೂರು
5. ಕೋಲಾರ
6. ಚಿತ್ರದುರ್ಗ
7. ಅನೇಕಲ್
8. ಹಾವೇರಿ
ಕಾರಣವೇನು:
ಸರ್ಕಾರ 2013 ರಲ್ಲಿ ಭೂ ಸ್ವಾಧೀನ ಕಾಯ್ದೆ ಜಾರಿಗೆ ತಂದಿತ್ತು. ಈ ಕಾಯ್ದೆ ಪ್ರಕಾರ ರೈತರ ಜಮೀನು ಪಡೆಯುವಾಗ ಅವರ ಅನುಮತಿ ಪಡೆದು ಭೂಸ್ವಾಧೀನ ಮಾಡಬೇಕು. ಅವರಿಗೆ ನೀಡಿದ ಹಣ ತೃಪ್ತಿಕರವಾಗಿರಬೇಕು. ಒಂದು ವೇಳೆ ಆಗದೆ ಇದ್ದರೆ ನ್ಯಾಯಲಯದ ಮೊರೆ ಹೋಗಬಹುದಾಗಿತ್ತು. ಈಗ ಈ ಕಾಯ್ದೆಯನ್ನು ಸರ್ಕಾರ ಬದಲಾಯಿಸಿದೆ. ಸಾಲ ಮನ್ನಾದ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲ, ಬರಗಾಲದ ಸಮಸ್ಯೆ ನೀಗಿಸುವಲ್ಲಿ ಕೂಡ ಸರ್ಕಾರ ಎಡವುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಬೆಳಗ್ಗೆ 9 ಗಂಟೆಯಿಂದ ಪ್ರತಿಭಟನೆ ಶುರು ಆಗಲಿದ್ದು, ಇಡೀ ದಿನ ಮಾಡುತ್ತೇವೆ ಎಂದು ರೈತರು ಹೇಳುತ್ತಿದ್ದಾರೆ. ಆದರೆ ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತದೆ ಎಂದು ಇದಕ್ಕೆ ಪೊಲೀಸರು ಅವಕಾಶ ಮಾಡಿಕೊಡುವ ಸಾಧ್ಯತೆ ಕಡಿಮೆ ಇದೆ.