ಬೆಂಗಳೂರು: ರಾಜ್ಯದಲ್ಲಿ ಮಳೆ ಕಾಣದೇ ಬಿಸಿಲ ಬೇಗೆಗೆ ಕಂಗೆಟ್ಟಿದ್ದ ಕರುನಾಡಿಗೆ ವರುಣದೇವನ (Rain In Karnataka) ಆಗಮನದ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹೌದು. ಇಂದಿನಿಂದ ಮುಂದಿನ 7 ದಿನಗಳ ಕಾಲ ರಾಜ್ಯದ ಬಹುತೇಕ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ಬರದಿಂದ ಕೃಷಿ ಚಟುವಟಿಕೆಗಳೆಲ್ಲ ಸಂಪೂರ್ಣ ಸ್ಥಬ್ದವಾಗಿದ್ದು, ಮಳೆಯಾದ್ರೆ ಮತ್ತೆ ಚಟುವಟಿಕೆಗಳು ಗರಿಗೆದರುವ ಸಾಧ್ಯತೆ ಇದೆ. ಇಂದಿನಿಂದ ಮುಂದಿನ 7 ದಿನಗಳ ಪೈಕಿ ಕೊನೆಯ 3 ದಿನ ಕರಾವಳಿ ಪ್ರದೇಶಕ್ಕೆ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಬಾಕಿ 7 ದಿನವು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಿಗೆ ಮಳೆಯಾಗುವ ಸಾಧ್ಯತೆ ಇದೆ. ಇದೇ ತಿಂಗಳ 12 ಮತ್ತು 13ರಂದು ಬೆಂಗಳೂರು ಸೇರಿದಂತೆ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಬಹುದೆಂದು ಹವಾಮಾನ ಇಲಾಖೆ (Weather Department) ಸೂಚನೆ ನೀಡಿದೆ.
Advertisement
Advertisement
ಯಾವ ದಿನ..ಎಲ್ಲೆಲ್ಲಿ ಮಳೆ ಮುನ್ಸೂಚನೆ?:
* ಏ.11: ಬೀದರ್, ಕಲಬುರಗಿ, ವಿಜಯಪುರ, ಕೊಡಗು, ಮೈಸೂರು, ಮಂಡ್ಯ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ.
* ಏ.12: ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಬೆಂಗಳೂರು ನಗರ, ಚಿಕ್ಕಬಳಾಪುರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ವಿಜಯನಗರ, ತುಮಕೂರು.
Advertisement
Advertisement
* ಏ.13: ದಕ್ಷಿಣ ಕನ್ನಡ, ಉಡುಪಿ, ಬೀದರ್, ಕಲ್ಬುರ್ಗಿ, ರಾಯಚೂರು, ವಿಜಯಪುರ, ಯಾದಗಿರಿ, ಕೊಪ್ಪಳ, ಬಳ್ಳಾರಿ, ದಾವಣಗೆರ , ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಿತ್ರದುರ್ಗ, ತುಮಕೂರು ಮಂಡ್ಯ.
* ಏ.14: ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೀದರ್ ಗದಗ, ಕಲ್ಬುರ್ಗಿ ರಾಯಚೂರು, ವಿಜಯಪುರ, ಯಾದಗಿರಿ, ಕೊಪ್ಪಳ, ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ.
* ಏ.15: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್, ಕಲಬುರಗಿ, ವಿಜಯಪುರ, ಚಿತ್ರದುರ್ಗಾ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂಬುದಾಗಿ ಹವಾಮಾನ ಇಲಾಖೆ ತಿಳಿಸಿದೆ.
ಬಿಸಿಲಿನ ತಾಪಮಾನ ಇಳಿಯೋ ಸಾಧ್ಯತೆ: ಈ ಮಧ್ಯೆ ಮತ್ತೊಂದು ಗಮನಾರ್ಹ ವಿಚಾರ ಅಂದ್ರೆ, ಕಳೆದ ಒಂದು ತಿಂಗಳಿನಿಂದ ಕಾಡಿದ್ದ ಬಿಸಿಲಿನ ತಾಪಮಾನ ಕೂಡ ಇಳಿಕೆ ಕಾಣುವ ಸಾಧ್ಯತೆ ಇದೆ. ವಾಡಿಕೆಗಿಂತ ಹೆಚ್ಚಾಗಿ ಅಬ್ಬರಿಸುತ್ತಿದ್ದ ಬಿಸಿಲು, ಸದ್ಯ ಮುಂದಿನ ಒಂದು ವಾರಗಳ ಕಾಲ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಾಣಲಿದೆ. ಸದ್ಯ ಬೆಂಗಳೂರು ಸೇರಿದಂತೆ ಇತರೆ ಭಾಗದಲ್ಲಿ ಸಾಮಾನ್ಯ ವರ್ಷಗಳಂತೆ ವಾಡಿಕೆಯಷ್ಟು ಬಿಸಿಲು ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದರ ಜೊತೆ ಮುಂದಿನ ಒಂದು ವಾರ ಮಳೆಯಾದರೂ ವಾಡಿಕೆಯಷ್ಟು ಮಳೆಯಾಗುವ ಸಾಧ್ಯತೆ ಕಡಿಮೆ. ಉತ್ತರ ಒಳನಾಡು ಪ್ರದೇಶಗಳಿಗೆ ಮಾತ್ರ ವಾಡಿಕೆ ಮಳೆಯಾಗುವ ಸಾಧ್ಯತೆ ಇದ್ದು, ಉಳಿದಂತೆ ದಕ್ಷಿಣ ಒಳನಾಡು, ಮತ್ತು ಕರಾವಳಿ ಪ್ರದೇಶಗಳಲ್ಲಿ ಏಪ್ರಿಲ್ ತಿಂಗಳು ಕೂಡ ವಾಡಿಕೆಗಿಂತ ಕಡಿಮೆ ಮಳೆ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಪ್ರಸಾದ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.