Connect with us

Cinema

ಟಾಮ್ ಆಂಡ್ ಜೆರ್ರಿ ಸೃಷ್ಟಿಕರ್ತನ ಅಚ್ಚರಿಯ ಕಹಾನಿ!

Published

on

ಟಾಮ್ ಆಂಡ್ ಜೆರ್ರಿ ಅಂತೊಂದು ಹೆಸರು ಕೇಳಿದಾಕ್ಷಣವೇ ತುಟಿಯಂಚಿಗೆ ಮಂದಹಾಸ ತಂದುಕೊಂಡು ಕಣ್ಣರಳಿಸುವ ದೊಡ್ಡ ದಂಡೇ ವಿಶ್ವಾದ್ಯಂತ ತುಂಬಿಕೊಂಡಿದೆ. ಅದಾಗತಾನೇ ಕಣ್ಣು ತೆರೆದ ಎಳೆ ಮಕ್ಕಳಿಂದ ಹಿಡಿದು ಹಣ್ಣಣ್ಣು ಮುದುಕರವರೆಗೂ ಟಾಮ್ ಆಂಡ್ ಜೆರ್ರಿಯ ಕಣ್ಣಾಮುಚ್ಚಾಲೆಯಾಟದ ಆನಿಮೇಟೆಡ್ ಕಾಮಿಡಿ ಎಪಿಸೋಡುಗಳು ಮುದ ನೀಡುತ್ತವೆ. ದೇಶ ಭಾಷೆಗಳ ಗಡಿಯ ಹಂಗಿಲ್ಲದೆ ಎಲ್ಲರನ್ನೂ ಆವರಿಸಿಕೊಂಡ ಟಾಮ್ ಆಂಡ್ ಜೆರ್ರಿಯ ನಿರ್ದೇಶಕರಲ್ಲೊಬ್ಬರಾಗಿದ್ದವರು ಜೆನಿ ಡಿಚ್. ಎಲ್ಲರ ಮನಸುಗಳಿಗೂ ಮುದ ನೀಡುವಂಥ ಈ ಸೀರೀಸ್ ಮೂಲಕ ವಿಶ್ವ ವಿಖ್ಯಾತಿ ಗಳಿಸಿಕೊಂಡಿದ್ದ ಜೆನಿ ಡಿಚ್ ಭರ್ತಿ ತೊಂಬತೈದು ವಸಂತಗಳ ತುಂಬು ಜೀವನ ನಡೆಸಿ ನಿರ್ಗಮಿಸಿದ್ದಾರೆ.

ಟಾಮ್ ಆಂಡ್ ಜೆರ್ರಿ ಅಮೆರಿಕದ ಯಶಸ್ವಿ ಆನಿಮೇಷನ್ ಸೀರೀಸ್. 1940ರ ದಶಕದಿಂದ ಆರಂಭವಾಗಿದ್ದ ಇದು ಅದ್ಯಾವ ಥರದಲ್ಲಿ ಖ್ಯಾತಿ ಗಳಿಸಿಕೊಂಡಿತ್ತೆಂದರೆ ಅತ್ಯಂತ ಕಡಿಮೆ ಕಾಲಾವಧಿಯಲ್ಲಿಯೇ ವಿಶ್ವಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಮಕ್ಕಳನ್ನು ಮುದಗೊಳಿಸುತ್ತಾ ಮನೆ ತುಂಬಾ ಈ ಸೀರೀಸ್‍ನ ಹವಾ ಹಬ್ಬಿಕೊಳ್ಳಲಾರಂಭಿಸಿತ್ತು. ಇದನ್ನು 1940ರಿಂದ 1967ರವರೆಗೆ ಎಂಟು ಮಂದಿ ನಿರ್ದೇಶಕರು ನಿರ್ದೇಶನ ಮಾಡಿದ್ದರು. ಇದೀಗ ನಿಧನರಾಗಿರುವ ಜೆನಿ ಡಿಚ್ ಅದರಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದಾರೆ.

1961ರಿಂದ 62ರವರೆಗೆ ಸರಿಸುಮಾರು ಹದಿಮೂರು ಟಾಮ್ ಆಂಡ್ ಜೆರ್ರಿ ಎಪಿಸೋಡುಗಳನ್ನು ಜೆನಿ ಡಿಚ್ ನಿರ್ದೇಶನ ಮಾಡಿದ್ದರು. ಅಷ್ಟೂ ಎಪಿಸೋಡುಗಳು ಬೇರೆಲ್ಲವನ್ನು ಮೀರಿಸಿ ಖ್ಯಾತಿ ಗಳಿಸಿ ಈಗಲೂ ಮಾಸದಂತೆ ಉಳಿದುಕೊಂಡಿವೆ. ಒಂದು ಬಲಾಢ್ಯ ಬೆಕ್ಕಿನೊಂದಿಗೆ ಕಣ್ಣಾಮುಚ್ಚಾಲೆಯಾಡಿ, ಥರ ಥರದಲ್ಲಿ ಕ್ವಾಟಲೆ ಕೊಡುತ್ತಲೇ ಪುಟ್ಟ ಇಲಿಯೊಂದು ಹೇಗೆ ತಪ್ಪಿಸಿಕೊಳ್ಳುತ್ತದೆಂಬುದನ್ನು ನಾನಾ ಥರದಲ್ಲಿ ಪ್ರಚುರಪಡಿಸೋ ಟಾಮ್ ಆಂಡ್ ಜೆರ್ರಿ ಸೀರೀಸ್‍ಗೆ ಡೆನಿ ಡಿಚ್ ಅವರ ನಿರ್ದೇಶನ ಮತ್ತಷ್ಟು ಖ್ಯಾತಿ ತಂದು ಕೊಟ್ಟಿತ್ತು. ಕಾಮಿಕ್ ಆರ್ಟಿಸ್ಟ್ ಆಗಿ ಹಲವಾರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ಸ್ಟಾರ್ ಅನ್ನಿಸಿಕೊಂಡಿದ್ದ ಜೆನಿ ಡಿಚ್ ಈ ಸೀರೀಸ್ ಮೂಲಕ ಆನಿಮೇಟರ್ ಆಗಿ, ನಿರ್ದೇಶಕರಾಗಿಯೂ ವಿಶ್ವಾದ್ಯಂತ ಹೆಸರು ಮಾಡಿದ್ದರು.

ಬಹುಶಃ ಟಾಮ್ ಆಂಡ್ ಜೆರ್ರಿ ಆಟವನ್ನು ಕಣ್ತುಂಬಿಕೊಂಡು ಖುಷಿಗೊಳ್ಳುವ ಬಹುಪಾಲು ಜನರಿಗೆ ಅದರ ಸೃಷ್ಟಿಯ ಹಿಂದಿರುವ ಡೆನಿ ಡಿಚ್‍ರಂಥಾ ನಿರ್ದೇಶಕರ ಬಗ್ಗೆ ಗೊತ್ತಿರಲಿಕ್ಕಿಲ್ಲ. ಆದರೆ ಒಂದು ಸುದೀರ್ಘ ಹಾದಿಯಲ್ಲಿ ಪಾದ ಸವೆಸದೇ ಹೋದರೆ ಇಂಥಾ ಸಾರ್ವಕಾಲಿಕ ಅದ್ಭುತಗಳು ಸೃಷ್ಟಿಯಾಗಲು ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ನೋಡ ಹೋದರೆ, ಜೆನಿ ಡಿಚ್ ಅವರ ಕಲೆಯ ಹಾದಿ ಕೂಡಾ ಕುತೂಹಲಕರವಾಗಿದೆ. ಅಂದಹಾಗೆ ಅವರು 1924ರಲ್ಲಿ ಚಿಕಾಗೋದ ಸಾಮಾನ್ಯ ಕುಟುಂಬವೊಂದರ ಕೂಸಾಗಿ ಕಣ್ತೆರೆದಿದ್ದರು. ಡಿಚ್ ಐದು ವರ್ಷದ ಮಗುವಾಗಿದ್ದಾಗಲೇ ಅವರ ಇಡೀ ಕುಟುಂಬ ಕ್ಯಾಲಿಫೋರ್ನಿಯಾಗೆ ಸ್ಥಳಾಂತರಗೊಂಡಿತ್ತು. ಆದ ಕಾರಣ ಅವರ ವಿದ್ಯಾಭ್ಯಾಸವೂ ಅಲ್ಲಿಯೇ ಮುಂದುವರೆದಿತ್ತು.

ಹಾಗೆ ಬೆಳೆದ ಜೆನಿ ಡಿಚ್‍ಗೆ ಬಾಲ್ಯದಿಂದಲೇ ಬಣ್ಣಗಳತ್ತ ಬಣ್ಣಿಸಲಾಗದಂಥಾ ಬೆರಗು ಮೂಡಿಕೊಂಡಿತ್ತು. ಕುಂಚದಲ್ಲಿಯೇ ಖುಷಿ ಕಾಣಲಾರಂಭಿಸಿದ್ದ ಅವರು ಅದೇ ಆಸಕ್ತಿಯನ್ನು ಮನದಲ್ಲಿಟ್ಟುಕೊಂಡೇ 1942ರ ಸುಮಾರಿಗೆ ವಿದ್ಯಾಭ್ಯಾಸ ಪೂರ್ಣಗೊಳಿಸಿಕೊಂಡಿದ್ದರು. ಆ ಹೊತ್ತಿನಲ್ಲಿ ಅಮೆರಿಕನ್ ಆವಿಗೇಷನ್‍ನಲ್ಲಿ ವಿಮಾನಗಳ ನೀಲನಕ್ಷೆ ಸಿದ್ಧಪಡಿಸುವ ಕೆಲಸವೂ ಸಿಕ್ಕಿತ್ತು. ಅದು ಅವರ ಆಸಕ್ತಿಗೆ ತಕ್ಕುದಾಗಿ ಒಲಿದಿದ್ದ ಮಹಾ ಅವಕಾಶ. ಅದನ್ನು ಸದುಪಯೋಗಪಡಿಸಿಕೊಂಡ ಡೆನಿ ಡಿಚ್ ನಂತರ ಅಮೆರಿಕಾದ ಪ್ರಖ್ಯಾರ ಜಝ್ ಮ್ಯಾಗಜೈನಿನಲ್ಲಿ ಕಾಮಿಕ್ ಆರ್ಟಿಸ್ಟ್ ಆಗಿ ಕೆಲಸ ಗಿಟ್ಟಿಸಿಕೊಂಡಿದ್ದರು. ಆ ಹಂತದಲ್ಲಿ ಅದರ ದಾಖಲಾರ್ಹ ಕವರ್‍ಗಳಲ್ಲಿ ಅವರದ್ದೇ ಕಲೆ ನಾಟ್ಯವಾಡಿತ್ತು. ಅದರಿಂದಲೇ ಭಾರೀ ಜನಪ್ರಿಯತೆಯೂ ಸಿಕ್ಕಿತ್ತು. ಆ ಪತ್ರಿಕೆ ಅದ್ಯಾವ ಪಾಟಿ ಜನಪ್ರಿಯಗೊಂಡಿತ್ತೆಂದರೆ, ಹಾಲಿವುಡ್ ಮಟ್ಟದಲ್ಲಿಯೂ ಅದಕ್ಕೆ ಅಭಿಮಾನಿಗಳಿದ್ದರು.

ಡಿಚ್ ಅವರ ಕಲೆ ಅದೆಷ್ಟು ಪ್ರಭಾವಶಾಲಿಯಾಗಿತ್ತೆಂದರೆ ಅದರತ್ತ ಆ ಕಾಲಕ್ಕೆ ಹಾಲಿವುಡ್ ನಿರ್ದೇಶಕರುಗಳ ಕಣ್ಣು ಬಿದ್ದಿತ್ತು. ಅದರ ಫಲವಾಗಿಯೇ ಅವರು 1940ರ ಹೊತ್ತಿಗೆಲ್ಲ ಯುನೈಟೈಡ್ ಪ್ರೊಡಕ್ಷನ್ಸ್ ಆಫ್ ಅಮೆರಿಕಾ ಸಂಸ್ಥೆ ಸೇರಿಕೊಂಡಿದ್ದರು. ಅಲ್ಲಿಂದಾಚೆಗೆ ಆನಿಮೇಷನ್‍ನತ್ತ ಆಸಕ್ತಿ ಕೇಂದ್ರೀಕರಿಸಿಕೊಂಡ ಡಿಚ್ ಅಲ್ಲಿಯೇ ಒಂದಷ್ಟು ಕಾಲ ಕಾರ್ಯ ನಿರ್ವಹಿಸಿದ್ದರು. ನಂತರ 1961ರಲ್ಲಿ ಹನ್ನಾ ಬರ್ಬೇರಾ ರಚನೆಯ ಟಾಮ್ ಆಂಡ್ ಜೆರ್ರಿ ಸೀರೀಸ್‍ನ ಎಪಿಸೋಡ್‍ಗಳನ್ನು ನಿರ್ದೇಶಿಸುವ ಜವಾಬ್ದಾರಿಯೂ ಅವರನ್ನು ಅರಸಿ ಬಂದಿತ್ತು. ಅದು ಅವರ ವೃತ್ತಿ ಬದುಕಿನ ಮಹತ್ತರ ಘಟ್ಟ. ಅದಾಗಲೇ ಪ್ರಸಿದ್ಧಿ ಪಡೆದಿದ್ದ ಆ ಸೀರೀಸ್ ಅನ್ನು ಹದಿಮೂರು ಎಪಿಸೋಡುಗಳಲ್ಲಿಯೇ ಮತ್ತಷ್ಟು ಉತ್ತುಂಗಕ್ಕೇರಿಸಿದ ಕೀರ್ತಿ ಜೆನಿ ಡಿಚ್ ಹೆಸರಿಗೆ ಶಾಶ್ವತವಾಗಿ ಅಂಟಿಕೊಂಡಿದೆ.

ಹಾಗೆ ಟಾಮ್ ಆಂಡ್ ಜೆರ್ರಿ ಮೂಲಕ ಖ್ಯಾತಿಯ ಉತ್ತುಂಗಕ್ಕೇರಿದ್ದ ಡಿಚ್, ಆ ನಂತರದಲ್ಲಿಯೂ ಕಲೆಯ ಸಂಗದಲ್ಲಿಯೇ ಲವಲವಿಕೆಯಿಂದ ಮುಂದುವರೆಯುತ್ತಾ ಬಂದಿದ್ದರು. ವಯಸ್ಸು ಸಂಧ್ಯಾ ಕಾಲವನ್ನು ಸಂಧಿಸಿದ್ದರೂ ಸದಾ ಹೊಸಾ ಸೃಷ್ಟಿಯತ್ತ ಗಮನ ನೆಟ್ಟಿದ್ದ ಅವರು ಕಡೆಯವರೆಗೂ ಕ್ರಿಯಾಶೀಲರಾಗಿಯೇ ಗುರುತಿಸಿಕೊಂಡಿದ್ದರು. ನಿರ್ದೇಶಕನಾಗಿ ಆಸ್ಕರ್ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದ ಜೆನಿ ಡಿಚ್ ಓರ್ವ ಅಪ್ರತಿಮ ಕಲೆಗಾರ. ಸೀಮಿತ ತಂತ್ರಜ್ಞಾನದಲ್ಲಿಯೇ ಮಹತ್ತರವಾದ ಸೃಷ್ಟಿಗಳನ್ನು ಮಾಡಿದ ಪ್ರತಿಭಾವಂತ. ಇದೀಗ ಆ ಇತಿಹಾಸವನ್ನು ಸಂಪನ್ನವಾಗುಳಿಸಿ ಅವರು ನಿರ್ಗಮಿಸಿದ್ದಾರೆ. ಆದರೆ ಅವರ ಕೈಚಳಕದಲ್ಲಿ ಮೂಡಿ ಬಂದಿರೋ ಟಾಮ್ ಆಂಡ್ ಜೆರ್ರಿ ಮಾತ್ರ ತಲೆಮಾರುಗಳಾಚೆಗೂ ಜನರನ್ನು ಆವರಿಸಿಕೊಳ್ಳುತ್ತಲೇ ಇರುತ್ತದೆ.

Click to comment

Leave a Reply

Your email address will not be published. Required fields are marked *