ನಗದಿನ ಮೂಲಕ ಸಂಭಾವನೆ – ಮಹೇಶ್‌ ಬಾಬುಗೆ ಇಡಿ ನೋಟಿಸ್‌

Public TV
2 Min Read
mahesh babu

ಹೈದರಾಬಾದ್: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು (Mahesh Babu) ಅವರಿಗೆ ಏ.28ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

ಹೈದರಾಬಾದ್ ಮೂಲದ ರಿಯಲ್ ಎಸ್ಟೇಟ್ (Real Estate) ಸಂಸ್ಥೆಗಳಾದ ಸಾಯಿ ಸೂರ್ಯ ಡೆವಲಪರ್ಸ್ ಮತ್ತು ಸುರಾನಾ ಗ್ರೂಪ್ ಮೇಲೆ ಹಣ ಅಕ್ರಮ ವಹಿವಾಟು ತಡೆ ಕಾಯ್ದೆ (PMLA) ಅಡಿ ಇಡಿ ಪ್ರಕರಣ ದಾಖಲಿಸಿ ದಾಳಿ ನಡೆಸಿತ್ತು. ಈ ಕಂಪನಿಗಳ ಜಾಹೀರಾತಿನಲ್ಲಿ (Advertisement) ಮಹೇಶ್‌ ಬಾಬು ನಟಿಸಿದ್ದರು.

ನಟಿಸಿದ್ದಕ್ಕೆ ಮಹೇಶ್‌ ಬಾಬು ಅವರಿಗೆ 5.9 ಕೋಟಿ ರೂ. ಸಂಭಾವನೆ ಸಿಕ್ಕಿತ್ತು. ಈ ಪೈಕಿ 3.4 ಕೋಟಿ ರೂ. ಚೆಕ್ ಮೂಲಕ ಮತ್ತು 2.5 ಕೋಟಿ ರೂ. ನಗದು ಮೂಲಕ ಪಾವತಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ನಗದು ವಹಿವಾಟಿನ ಬಗ್ಗೆ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ  ಮಹೇಶ್‌ ಬಾಬು ಅವರಿಗೆ ಇಡಿ ಸಮನ್ಸ್‌ ಜಾರಿ ಮಾಡಿದೆ. ಇದನ್ನೂ ಓದಿ: ಹೊಸ ಪೋಪ್ ಆಯ್ಕೆ ಹೇಗೆ ಮಾಡಲಾಗುತ್ತೆ? ಹೊಗೆ ಹಾಕೋದು ಯಾಕೆ?

mahesh babu add
ಸಾಯಿ ಸೂರ್ಯ ರಿಯಲ್‌ ಎಸ್ಟೇಟ್‌ ಕಂಪನಿಯ ಪ್ರಚಾರದ ಜಾಹೀರಾತಿನಲ್ಲಿ ಮಹೇಶ್‌ ಬಾಬು

ತೆಲಂಗಾಣ ಪೊಲೀಸರು ಹೈದರಾಬಾದ್ ಪ್ರಾಪರ್ಟೀಸ್ ಲಿಮಿಟೆಡ್‌ನ ನರೇಂದ್ರ ಸುರಾನಾ ಮತ್ತು ಸಾಯಿ ಸೂರ್ಯ ಡೆವಲಪರ್ಸ್‌ನ ಸತೀಶ್ ಚಂದ್ರ ಗುಪ್ತಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಅನಧಿಕೃತ ಲೇಔಟ್‌ಗಳಲ್ಲಿ ಪ್ಲಾಟ್‌ಗಳನ್ನು ಮಾರಾಟ ಮಾಡುವ ಮೂಲಕ ಖರೀದಿದಾರರನ್ನು ವಂಚಿಸಿದ್ದಾರೆ. ಒಂದೇ ಪ್ಲಾಟ್ ಅನ್ನು ಹಲವು ಬಾರಿ ಮಾರಾಟ ಮಾಡಿದ ಮತ್ತು ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ ಸುಳ್ಳು ಭರವಸೆಗಳನ್ನು ನೀಡಿದ ಆರೋಪ ಕಂಪನಿಯ ಮೇಲಿದೆ. ಇದನ್ನೂ ಓದಿ: ಖರ್ಗೆ ಕಾರ್ಯಕ್ರಮಕ್ಕೆ ಬಾರದ ಜನ – ಪಕ್ಷದಿಂದಲೇ ಜಿಲ್ಲಾಧ್ಯಕ್ಷ ಅಮಾನತು

ನಿಯಮ ಏನು ಹೇಳುತ್ತೆ?
ಯಾವುದೇ ವ್ಯಕ್ತಿಯು ಒಂದೇ ವಹಿವಾಟಿಗೆ ಅಥವಾ ಒಂದು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯಿಂದ ದಿನದಲ್ಲಿ 2 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಸ್ವೀಕರಿಸುವಂತಿಲ್ಲ. ಈ ನಿಯಮವು ಶುಲ್ಕಗಳು, ದೇಣಿಗೆ, ಸಂಭಾವನೆ ಎಲ್ಲದ್ದಕ್ಕೂ ಅನ್ವಯವಾಗುತ್ತದೆ. ಈ ಮಿತಿಯನ್ನು ಉಲ್ಲಂಘಿಸಿದರೆ ಆದಾಯ ತೆರಿಗೆ ಕಾಯ್ದೆ 271DA ಅಡಿಯಲ್ಲಿ ಸ್ವೀಕರಿಸಿದ ಮೊತ್ತಕ್ಕೆ ಸಮಾನವಾದ ದಂಡ ವಿಧಿಸಲಾಗುತ್ತದೆ. 2 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವನ್ನು UPI, NEFT ಮತ್ತು RTGS ಮೂಲಕ ಪಾವತಿಸಬೇಕಾಗುತ್ತದೆ.

Share This Article