ರಾಮನಗರ: ಭಾರೀ ವಿರೋಧದ ನಡುವೆಯೂ ಪಟ್ಟು ಬಿಡದ ಹೆದ್ದಾರಿ ಪ್ರಾಧಿಕಾರ ಮಂಗಳವಾರದಿಂದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ (Bengaluru Mysuru Expressway) ಟೋಲ್ (Toll) ಸಂಗ್ರಹ ಆರಂಭಿಸಿದೆ. ಟೋಲ್ ಆರಂಭಕ್ಕೆ ವಿವಿಧ ಕನ್ನಡಪರ ಸಂಘಟನೆಗಳೂ ಸೇರಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ (Protest) ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ರಸ್ತೆ ತಡೆದು ಪ್ರತಿಭಟನೆಗೆ ಮುಂದಾದ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಶುಲ್ಕ ವಸೂಲಾತಿ ಮುಂದುವರಿದಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮೊದಲ ಹಂತದ 55.63 ಕಿ.ಮೀ ರಸ್ತೆಯ ಟೋಲ್ ವಸೂಲಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಬಿಡದಿ ಬಳಿಯ ಕಣಮಿಣಕಿ ಗ್ರಾಮ ಹಾಗೂ ಶೇಷಗಿರಿಹಳ್ಳಿ ಬಳಿಯ ಟೋಲ್ ಕಾರ್ಯಾಚರಣೆ ಆರಂಭವಾಗಿದೆ. ವಿವಿಧ ಬಗೆಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿ ಮಾಡಿ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಆದರೆ ಟೋಲ್ ವಸೂಲಿಗೆ ಭಾರೀ ವಿರೋಧ ವ್ಯಕ್ತವಾಗಿದ್ದು ಸರ್ವಿಸ್ ರಸ್ತೆ ಪೂರ್ಣಗೊಳಿಸದೇ ಶುಲ್ಕ ವಸೂಲಿ ವಿರೋಧಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡಿ ಹೈಡ್ರಾಮಾ ನಡೆಸಿವೆ.
ದಶಪಥ ಹೆದ್ದಾರಿಯ ಕಾಮಗಾರಿ ಇನ್ನೂ ಮುಗಿದಿಲ್ಲ. ಅಲ್ಲದೇ ಹಲವೆಡೆ ಸಮರ್ಪಕ ಸರ್ವಿಸ್ ರಸ್ತೆ ಆಗದೇ ಟೋಲ್ ವಸೂಲಿ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶ ಹೆಚ್ಚಿಸಿದೆ. ಜೊತೆಗೆ ದುಬಾರಿ ಟೋಲ್ ದರದ ವಿರುದ್ಧವೂ ಜನಸಾಮಾನ್ಯರು ಕಿಡಿಕಾರಿದ್ದಾರೆ. ಸರಿಯಾದ ಮೂಲಭೂತ ಸೌಕರ್ಯಗಳನ್ನು ನೀಡದೇ ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಬಿಡದಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಶೇಷಗಿರಿಹಳ್ಳಿ ಟೋಲ್ ಬಳಿ ರಸ್ತೆ ತಡೆಗೆ ಮುಂದಾಗಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು, ಪ್ರತಿಭಟನಾಕಾರರ ಜೊತೆ ವಾಗ್ವಾದ ನಡೆಸಿದರು. ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪ್ರತಿಭಟನಾಕಾರರನ್ನು ಬಂಧಿಸಿ ಸಂಚಾರಕ್ಕೆ ಅನುವುಮಾಡಿಕೊಟ್ಟರು. ಇದನ್ನೂ ಓದಿ: ಯುಗಾದಿಗೆ ಊರಿಗೆ ಹೋಗುವವರಿಗೆ ಬಿಗ್ ಶಾಕ್ – ರಾಜ್ಯಾದ್ಯಂತ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ
ಕಣಮಿಣಕಿ ಗ್ರಾಮದ ಟೋಲ್ ಬಳಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ನವನಿರ್ಮಾಣ ವೇದಿಕೆ, ಜನ ಸೈನ್ಯ ವೇದಿಕೆ, ಕನ್ನಡಿಗರ ರಕ್ಷಣಾ ವೇದಿಕೆ, ಕರುನಾಡ ಸೇನೆ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಟೋಲ್ ಬೂಮರ್ ಮುರಿದು ಆಕ್ರೋಶ ಹೊರಹಾಕಿದರು.
ಇಷ್ಟು ಮಾತ್ರವಲ್ಲದೇ ಟೋಲ್ ಆರಂಭವಾದ ಮೊದಲ ದಿನವೇ ಸೆನ್ಸಾರ್ ವೈಫಲ್ಯದಿಂದ ಕೆಲ ವಾಹನಗಳಿಗೆ ಹಾನಿಯಾಗಿದ್ದು, ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಯಿತು. ಬೂಮರ್ ಸೆನ್ಸಾರ್ ವೈಫಲ್ಯದಿಂದ ಐದಾರು ಕಾರುಗಳ ಗಾಜು ಒಡೆದು ಹೋಗಿದ್ದು, ಕಾರಿನ ಮಾಲೀಕರು ಹೆದ್ದಾರಿ ಪ್ರಾಧಿಕಾರ ವಿರುದ್ಧ ತಿರುಗಿಬಿದ್ದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ವಾಹನ ಸವಾರರನ್ನು ಸಮಾಧಾನಪಡಿಸಿದರು. ಇದನ್ನೂ ಓದಿ: Bengaluru Mysuru Expressway- ಟೋಲ್ ಸಂಗ್ರಹ ಪ್ರಾರಂಭವಾದ ಮೊದಲ ದಿನವೇ ತಾಂತ್ರಿಕ ದೋಷ
ಒಟ್ಟಾರೆ ದಶಪಥ ಹೆದ್ದಾರಿಯ ಟೋಲ್ ಬಳಿ ಇಂದು ಭಾರೀ ಹೈಡ್ರಾಮಾ ಏರ್ಪಟ್ಟಿತು. ಒಂದೆಡೆ ಪೊಲೀಸ್ ಭದ್ರತೆಯಲ್ಲಿ ಟೋಲ್ ವಸೂಲಿ ಮಾಡುತ್ತಿದ್ದರೆ, ಮತ್ತೊಂದೆಡೆ ದುಬಾರಿ ಟೋಲ್ ಕಟ್ಟಿದ ವಾಹನ ಸವಾರರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿದ್ದಾರೆ.