ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳ ವಿರುದ್ಧ ಮಹಾಭಿಯೋಗ ಮಂಡಿಸುವ ಕುರಿತು ಮನವಿಯನ್ನು ಸಲ್ಲಿಸದಿರಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸೋನಿಯಾ ಅವರಿಗೆ ತಿಳಿಸಿದ್ದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ಕುರಿತು ಮಂಗಳವಾರ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಮಹಾಭಿಯೋಗಕ್ಕೆ ಅನುಮತಿ ಕೋರಿ ಉಪರಾಷ್ಟ್ರಪತಿಗಳಿಗೆ ಸಲ್ಲಿಸಿದ್ದ ಮನವಿ ಪತ್ರಕ್ಕೆ ತೃಣಮೂಲ ಕಾಂಗ್ರೆಸ್ ಸಹಿ ಮಾಡಿರಲಿಲ್ಲ. ಅಲ್ಲದೇ ಈ ಮುನ್ನವೇ ರಾಹುಲ್ ಗಾಂಧಿ ಹಾಗೂ ಸೋನಿಯಾ ಅವರಿಗೆ ಮನವಿ ಸಲ್ಲಿಸದಂತೆ ತಿಳಿಸಿದ್ದೆ ಎಂದು ಹೇಳಿದ್ದಾರೆ.
Advertisement
Advertisement
ಮಹಾಭಿಯೋಗ ಪತ್ರಕ್ಕೆ ಬೆಂಬಲ ನೀಡುವಂತೆ ಕಾಂಗ್ರೆಸ್ ಪಕ್ಷದ ನಾಯಕರು ಮನವಿ ಮಾಡಿದ್ದರು. ಆದರೆ ನಾವು ಬೆಂಬಲ ನೀಡಿರಲಿಲ್ಲ. ನಮ್ಮ ಪಕ್ಷ ನ್ಯಾಯಾಂಗ ವಿಚಾರದಲ್ಲಿ ಮಧ್ಯಪ್ರವೇಶಕ್ಕೆ ಇಚ್ಛಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
Advertisement
ಕಳೆದ ವಾರ ಕಾಂಗ್ರೆಸ್ ಮುಂದಾಳತ್ವದಲ್ಲಿ ಸಂಸತ್ತಿನ ಏಳು ವಿರೋಧ ಪಕ್ಷಗಳು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಸುಪ್ರೀಂ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಮಹಾಭಿಯೋಗ ನಿಲುವಳಿಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದವು. ಆದರೆ ಉಪರಾಷ್ಟ್ರಪತಿಗಳು ಈ ಮನವಿಯನ್ನು ತಿರಸ್ಕರಿಸಿದ್ದರು. ಅಲ್ಲದೇ ಮನವಿಯಲ್ಲಿ ಪತ್ರದಲ್ಲಿ ಹೇಳಲಾದ ಯಾವುದೇ ಅಂಶಗಳಿಗೆ ಸೂಕ್ತ ಸಾಕ್ಷಿಗಳಾಗಲಿ, ಆಧಾರಗಳಾಗಲಿ ಇಲ್ಲ. ಕಾನೂನು ಮತ್ತು ಸಂವಿಧಾನ ತಜ್ಞರ ಜೊತೆ ಚರ್ಚೆ ಮಾಡಿದ್ದೇನೆ. ನಿಲುವಳಿ ನೋಟಿಸ್ ಸ್ವೀಕರಿಸಲು ಅನರ್ಹವಾಗಿದೆ. ಹಾಗಾಗಿ ನಿರಾಕರಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು.
Advertisement
ಕಾಂಗ್ರೆಸ್ ಪಕ್ಷದ ಈ ನಡೆಯ ಕುರಿತು ಪ್ರತಿಕ್ರಿಯೆ ನೀಡಿದ್ದ ಬಿಜೆಪಿ, ಕಾಂಗ್ರೆಸ್ ನ್ಯಾಯಾಂಗದ ವಿಚಾರದಲ್ಲಿ ರಾಜಕೀಯ ಮಾಡಲು ಮುಂದಾಗಿದೆ ಎಂದು ಆರೋಪಿಸಿತ್ತು. ಉಪರಾಷ್ಟ್ರಪತಿಗಳು ವಿರೋಧಿ ಪಕ್ಷಗಳ ಮನವಿಯನ್ನು ತಿರಸ್ಕರಿದ ಬಳಿಕ ಕಾಂಗ್ರೆಸ್ ನಾಯಕರಿಗೆ ತೀವ್ರ ಮುಜುಗರ ಉಂಟಾಗಿತ್ತು. ಈ ವಿಚಾರದ ಚರ್ಚೆಯಾಗುತ್ತಿರುವ ಬೆನ್ನಲ್ಲೆ ಮಹಾಭಿಯೋಗ ವಿಚಾರದಲ್ಲಿ ಮುಂದಾಳತ್ವ ವಹಿಸಿದ್ದ ಕೈ ನಾಯಕ ಕಪಿಲ್ ಸಿಬಲ್ ಈ ಹಿಂದೆ ಖಾಸಗಿ ವಾಹಿನಿಯಲ್ಲಿ ನ್ಯಾಯಾಮೂರ್ತಿಗಳ ವಿರುದ್ಧ ಮಹಾಭಿಯೋಗ ನಿಲುವಳಿ ಸೂಚಿಸುವುದು ತಪ್ಪು ಎಂದು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು.