ಟೋಕಿಯೊ: ಕೊರೊನಾ ವೈರಸ್ ಭೀತಿ ಇದ್ದರೂ ಒಲಿಂಪಿಕ್ ಜ್ಯೋತಿ ವೀಕ್ಷಿಸಲು 50 ಸಾವಿರಕ್ಕೂ ಹೆಚ್ಚು ಜನರು ಅರ್ಧ ಕಿ.ಮೀ. ಕ್ಯೂ ನಿಂತಿದ್ದ ಪ್ರಸಂಗ ಜಪಾನ್‍ನಲ್ಲಿ ನಡೆದಿದೆ.
ಕೊರೊನಾ ವೈರಸ್ ಭೀತಿ ಹೆಚ್ಚುತ್ತಿರುವ ಮಧ್ಯೆ ಟೋಕಿಯೊ ಕ್ರೀಡಾಕೂಟವನ್ನು ಮುಂದೂಡಲು ಅಂತರರಾಷ್ಟ್ರೀಯ ಒಲಿಂಪಿಕ್ ಅಸೋಸಿಯೇಷನ್ (ಐಒಸಿ) ಮೇಲೆ ಒತ್ತಡ ಹೆಚ್ಚಾಗಿದೆ. ಈ ಬಗ್ಗೆ ವಿಶ್ವ ಅಥ್ಲೆಟಿಕ್ಸ್ ಫೆಡರೇಶನ್‍ನ ಅಧ್ಯಕ್ಷ ಸೆಬಾಸ್ಟಿಯನ್ ಕೋ ಅವರು, ಒಲಿಂಪಿಕ್ಸ್ ಕುರಿತು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಶನಿವಾರ ಸ್ಪಷ್ಟನೆ ನೀಡಿದ್ದಾರೆ.
Advertisement
ಒಂದೆಡೆ ರಾಯಲ್ ಸ್ಪ್ಯಾನಿಷ್ ಅಥ್ಲೆಟಿಕ್ಸ್ ಫೆಡರೇಶನ್, ಬ್ರೆಜಿಲಿಯನ್ ಒಲಿಂಪಿಕ್ ಸಮಿತಿ (ಸಿಒಬಿ) ಮತ್ತು ಯುಎಸ್ ಟ್ರ್ಯಾಕ್ ಮತ್ತು ಫೀಲ್ಡ್ ಫೆಡರೇಶನ್ (ಯುಎಸ್‍ಎಟಿಎಫ್) ಕ್ರೀಡಾಕೂಟವನ್ನು ಮುಂದೂಡಲು ಕರೆ ನೀಡಿವೆ. ಮತ್ತೊಂದೆಡೆ ಜಪಾನ್‍ಗೆ ಶುಕ್ರವಾರ ಒಲಿಂಪಿಕ್ ಜ್ಯೋತಿ ಬಂದಿದ್ದು, ಅದನ್ನು ನೋಡಲು 50 ಸಾವಿರಕ್ಕೂ ಅಧಿಕ ಜನರು ಉತ್ತರ ಜಪಾನ್‍ನ ಮಿಯಾಗಿಯಲ್ಲಿರುವ ಸೆಂಡೈ ವಿಮಾನ ನಿಲ್ದಾಣಕ್ಕೆ ಜಮಾಯಿಸಿದ್ದರು.
Advertisement
ಮಾಸ್ಕ್ ಹಾಕಿಕೊಂಡು ಅರ್ಧ ಕಿ.ಮೀ ಉದ್ದದ ಸಾಲಿನಲ್ಲಿ ಸುಮಾರು ಗಂಟೆಗಳ ಕಾಲ ನಿಂತಿದ್ದರು. ಅಪಾರ ಜನಸಂದಣಿಯಿಂದಾಗಿ ಜಪಾನ್‍ನ ಒಲಿಂಪಿಕ್ ಸಮಿತಿಯು ಕಳವಳ ವ್ಯಕ್ತಪಡಿಸಿದೆ. ಇದೇ ರೀತಿಯ ಪರಿಸ್ಥಿತಿಗಳು ಇದ್ದಲ್ಲಿ ಸಮಾರಂಭವನ್ನು ರದ್ದುಗೊಳಿಸಬಹುದು. 2011ರ ಸುನಾಮಿಯಲ್ಲಿ ಪರಮಾಣು ಸ್ಥಾವರ ಹಾನಿಗೊಳಗಾದ ನಗರ ಫುಕುಶಿಮಾದಿಂದ ಮಾರ್ಚ್ 26ರಂದು ದೇಶದಲ್ಲಿ ಒಲಿಂಪಿಕ್ ಜ್ಯೋತಿ ರಿಲೇ ಪ್ರಾರಂಭವಾಗಲಿದೆ.
Advertisement
ಒಲಿಂಪಿಕ್ಸ್ ನಡೆಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸ್ಪ್ಯಾನಿಷ್ ಅಥ್ಲೆಟಿಕ್ಸ್ ಫೆಡರೇಶನ್, ನಾವು ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸುವ ಪರವಾಗಿದ್ದೇವೆ. ಆದರೆ ಇಂದಿನ ಪರಿಸ್ಥಿತಿಗಳಲ್ಲಿ ಕ್ರೀಡಾಪಟುಗಳಿಗೆ ಸುರಕ್ಷತೆಯೊಂದಿಗೆ ಕ್ರೀಡಾ ಸಾಮಾಗ್ರಿ ಖಾತರಿಪಡಿಸುವಂತಹ ಯಾವುದೇ ಪರಿಸ್ಥಿತಿ ಇಲ್ಲ ಎನ್ನುವುದನ್ನ ನಾವು ಅರ್ಥಮಾಡಿಕೊಂಡಿದ್ದೇವೆ. ಕ್ರೀಡಾಪಟುಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕ್ರೀಡಾಕೂಟವನ್ನು ಮುಂದೂಡಬೇಕೆಂದು ನಾವು ಸಲಹೆ ನೀಡಿದ್ದೇವೆ ಎಂದು ತಿಳಿಸಿದೆ.
Advertisement
ಹಿಂದಿನ ಒಲಿಂಪಿಕ್ಸ್‌ನ ಆತಿಥೇಯ ಬ್ರೆಜಿಲ್‍ನ ಒಲಿಂಪಿಕ್ ಸಮಿತಿ (ಸಿಒಬಿ) ಸಹ ಶನಿವಾರ ಇಂತಹ ಪರಿಸ್ಥಿತಿಯಲ್ಲಿ ಒಲಿಂಪಿಕ್ಸ್ ಅನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದೆ. 2021ರಲ್ಲಿ ಕ್ರೀಡಾಕೂಟ ನಡೆಸಲು ಸಿಒಬಿ ಪ್ರಸ್ತಾಪಿಸಿದೆ.
ಅಂತರರಾಷ್ಟ್ರೀಯ ಒಲಿಂಪಿಕ್ ಅಸೋಸಿಯೇಷನ್ (ಐಒಸಿ) ಈ ಹಿಂದೆ ಇದೇ ರೀತಿಯ ಪರಿಸ್ಥಿತಿಗಳನ್ನು ಎದುರಿಸಿದೆ. ವಿಶ್ವ ಸಮರದಿಂದಾಗಿ 1916 ಮತ್ತು 1940 ರಲ್ಲಿ ಒಲಿಂಪಿಕ್ಸ್ ರದ್ದುಗೊಳ್ಳಬೇಕಾಯಿತು. ಆದರೆ 1984ರಲ್ಲಿ ಸೋವಿಯತ್ ಒಕ್ಕೂಟ ಮತ್ತು ಪೂರ್ವ ಜರ್ಮನಿ ಸೇರಿದಂತೆ 14 ದೇಶಗಳು ಲಾಸ್ ಏಂಜಲೀಸ್ ಕ್ರೀಡಾಕೂಟದಲ್ಲಿ ಕ್ರೀಡಾಕೂಟವನ್ನು ಬಹಿಷ್ಕರಿಸಿತ್ತು ಎಂದು ಸಿಬಿಒ ಎಂದು ತಿಳಿಸಿದೆ.
ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ (ಐಒಎ), ಒಲಿಂಪಿಕ್ಸ್ ಮುಂದೂಡದಿದ್ದರೆ ಕ್ರೀಡಾಪಟುಗಳನ್ನು ಕಳುಹಿಸಲು ಕೆನಡಾ ನಿರಾಕರಿಸಿದೆ. ಆಸ್ಟ್ರೇಲಿಯಾ ಕೂಡ ಪ್ರಶ್ನೆಗಳನ್ನು ಎತ್ತಿದೆ. ಆದರೆ ನಾವು ಸದ್ಯ ಏನನ್ನೂ ನಿರ್ಧರಿಸಿಲ್ಲ. ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದೆ.