ಟೋಕಿಯೋ: ಮುಂದಿನ ವರ್ಷ ಜಪಾನಿನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಪರಿಸರ ಸ್ನೇಹಿ ಪದಕಗಳನ್ನು ಅನಾವರಣಗೊಳಿಸಲಾಗಿದೆ. 1976ರಲ್ಲಿ ಒಲಿಂಪಿಕ್ ಕೂಟದ ಕತ್ತಿವರಸೆ(ಫೆನ್ಸಿಂಗ್) ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದ ಜರ್ಮನಿಯ ಕ್ರೀಡಾಪಟು ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಚ್ ಪದಕಗಳನ್ನು ಅನಾವರಣಗೊಳಿಸಿದರು.
ಎಲೆಕ್ಟ್ರಾನಿಕ್ಸ್ ತ್ಯಾಜ್ಯಗಳನ್ನು ಬಳಸಿ ಪದಕಗಳನ್ನು ತಯಾರಿಸಿದ್ದು ಟೋಕಿಯೋ ಒಲಿಂಪಿಕ್ಸ್ ವಿಶೇಷತೆಗಳಲ್ಲಿ ಒಂದು. 1 ವರ್ಷದ ಮೊದಲೇ ಪಂದ್ಯದ ಆಯೋಜಕರ ಸಮಿತಿ ಪದಕಗಳ ವಿನ್ಯಾಸವನ್ನು ಬಿಡುಗಡೆಗೊಳಿಸಿತ್ತು. ಅದೇ ವಿನ್ಯಾಸದಲ್ಲಿ ಪದಕಗಳನ್ನು 62 ಲಕ್ಷದ ಹಳೆಯ ಎಲೆಕ್ಟ್ರಾನಿಕ್ಸ್ ವಸ್ತುಗಳಿಂದ (ಮೊಬೈಲ್ ಮತ್ತು ಟ್ಯಾಬ್ಲೆಟ್ಸ್) ತಯಾರಿಸಲಾಗಿದೆ.
Advertisement
2017 ಏಪ್ರಿಲ್ ನಲ್ಲಿ ಟೋಕಿಯೋ ಒಲಿಂಪಿಕ್ ಆಯೋಜಕ ಸಮಿತಿ ಹಳೆಯ ಇಲೆಕ್ಟ್ರಾನಿಕ್ ಉತ್ಪನ್ನಗಳ ಸಂಗ್ರಹಣೆಯ ಅಭಿಯಾನವನ್ನು ಆರಂಭಿಸಿತ್ತು. ಈ ವಿಶೇಷ ಅಭಿಯಾನದಲ್ಲಿ ಸಮಿತಿಗೆ 78,895 ಟನ್ ಹಳೆಯ ಎಲೆಕ್ಟ್ರಾನಿಕ್ಸ್ ತ್ಯಾಜ್ಯಗಳು ಸಿಕ್ಕಿತ್ತು. ಇವುಗಳಲ್ಲಿ 62.1 ಲಕ್ಷ ಮೊಬೈಲ್ ಫೋನ್ ಒಳಗೊಂಡಿದ್ದವು. ವಿಶೇಷ ಅಭಿಯಾನದಲ್ಲಿ ಲಭ್ಯವಾದ ಲೋಹಗಳಿಂದಲೇ ಒಲಿಂಪಿಕ್ ಪಂದ್ಯದಲ್ಲಿ ವಿಜೇತರಿಗೆ ನೀಡಲಾಗುವ ಪದಕಗಳ ತಯಾರಿಕೆಗೆ ಸಮಿತಿ ಸೂಚಿಸಿತ್ತು.
Advertisement
ಈ ಹಳೆಯ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಲ್ಲಿ 32 ಕೆಜಿ ಬಂಗಾರ, 3,500 ಕೆಜಿ ಬೆಳ್ಳಿ ಮತ್ತು 2,200 ಕೆಜಿ ಕಂಚು ಲಭ್ಯವಾಗಿತ್ತು. ಶುದ್ಧ ಬೆಳ್ಳಿಗೆ 6 ಗ್ರಾಂಗಿಂತ ಹೆಚ್ಚಿನ ಚಿನ್ನದ ಲೇಪನವನ್ನು ಬಳಸಿ ಚಿನ್ನದ ಪದಕವನ್ನು ತಯಾರಿಸಲಾಗಿದ್ದರೆ, ಬೆಳ್ಳಿ ಪದಕವನ್ನು ಶುದ್ಧ ಬೆಳ್ಳಿಯಿಂದ ತಯಾರಿಸಲಾಗಿದೆ. ಶೇ.95ರಷ್ಟು ತಾಮ್ರ ಹಾಗೂ ಶೇ.5ರಷ್ಟು ಸತುವನ್ನು ಬಳಸಿ ಕಂಚಿನ ಪದಕ ತಯಾರಿಸಲಾಗಿದೆ.
Advertisement
Advertisement
ಪದಕದ ವಿನ್ಯಾಸ:
ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ನಿಯಮಾವಳಿಯಲ್ಲಿ ಇರುವಂತೆ ಪದಕದ ಮುಂಭಾಗದಲ್ಲಿ ಒಲಿಂಪಿಕ್ ಲಾಂಛನವಾದ ಐದು ರಿಂಗ್ಗಳು, ಗೇಮ್ಸ್ನ ಅಧಿಕೃತ ಹೆಸರು ಹಾಗೂ ಪಂಥಾನಿಯಕ್ ಸ್ಟೇಡಿಯಂನ ಮುಂಭಾಗದಲ್ಲಿರುವ ಗ್ರೀಕ್ ವಿಜಯ ದೇವತೆ, ಪದಕದ ಹಿಂಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್ನ ಲಾಂಛನವಿದೆ. ಹೊಸ ವಿನ್ಯಾಸಕ್ಕಾಗಿ ಕರೆದ ಸ್ಪರ್ಧೆಯಲ್ಲಿ 400 ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಹೊಸ ಹೊಸ ಡಿಸೈನ್ ಸಮಿತಿಗೆ ನೀಡಿದ್ದರು. ಇವುಗಳಲ್ಲಿ ಜುನಿಚಿ ಕಾವಾನಿಶಿ ಅವರ ವಿನ್ಯಾಸವನ್ನು ಪಂದ್ಯದ ಆಯೋಜಕ ಸಮಿತಿ ಅಂತಿಮಗೊಳಿಸಿದೆ.
85 ಎಂಎಂ ಸುತ್ತಳತೆಯಲ್ಲಿರುವ ಪದಕದ ಅತ್ಯಂತ ತೆಳವಾದ ಭಾಗ 7.7ಎಂಎಂ ಇದ್ದು, ಗರಿಷ್ಠ ದಪ್ಪ 12.1 ಎಂಎಂ ಇದೆ. ಬ್ರೆಜಿಲ್ ದೇಶದ ರಿಯೋ ಡಿ ಜನೈರೋದಲ್ಲಿ ಕಳೆದ ಬಾರಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲೂ ಮರು ಬಳಕೆಯಾದ ಲೋಹವನ್ನು ಬಳಸಿ ಪದಕಗಳನ್ನು ತಯಾರಿಸಲಾಗಿತ್ತು. ಟೋಕಿಯೋ ಒಲಿಂಪಿಕ್ ಕ್ರೀಡಾಕೂಟ 2020ರ ಜುಲೈ 24 ರಿಂದ ಆರಂಭವಾಗಿ ಆಗಸ್ಟ್ 9 ರವರೆಗೆ ನಡೆಯಲಿವೆ.