• ಅರಣ್ಯ ಇಲಾಖೆಯಿಂದ 1,000 ಕೆಜಿ ಶ್ರೀಗಂಧ ಕಟ್ಟಿಗೆ ಪೂರೈಕೆ
ಮಂಡ್ಯ: ಮಾಜಿ ಸಿಎಂ ಎಸ್.ಎಂ ಕೃಷ್ಣ (SM Krishna) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ತಮ್ಮ ಹುಟ್ಟೂರು ಸೋಮನಹಳ್ಳಿಯಲ್ಲಿ (Somanahalli) ನಡೆಯಲಿದ್ದು, ಡಿಕೆ ಶಿವಕುಮಾರ್ ಅವರ ಅಳಿಯನೂ ಆಗಿರುವ ಎಸ್‌ಎಂಕೆ ಮೊಮ್ಮಗ ಅಮರ್ಥ್ಯ ಸಿದ್ಧಾರ್ಥ್ ಚಿತೆಗೆ ಅಗ್ನಿಸ್ಪರ್ಶ ನೆರವೇರಿಸಲಿದ್ದಾರೆ.
1,000 ಕೆಜಿ ಶ್ರೀಗಂಧ ಕಟ್ಟಿಗೆ ಪೂರೈಕೆ:
ಎಸ್‌ಎಂಕೆ ಅಂತ್ಯಕ್ರಿಯೆ ನೆರವೇರಿಸಲು ಅರಣ್ಯ ಇಲಾಖೆಯಿಂದ ಶ್ರೀಗಂಧದ ಕಟ್ಟಿಗಗಳನ್ನು ಪೂರೈಕೆ ಮಾಡಲಾಗಿದ್ದು, ಚಿತೆಗೆ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲಿ ಡಿಐಜಿ ಬೋರಲಿಂಗಯ್ಯ, ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ನಿಯೋಜಿಸಲಾಗಿದೆ. 700ಕ್ಕೂ ಹೆಚ್ಚು ಸಿಬ್ಬಂದಿ, ಕೆಎಸ್‌ಆರ್‌ಪಿ, ಡಿಎಆರ್ ತುಕಡಿ ಸೇರಿ 1,000ಕ್ಕೂ ಹೆಚ್ಚು ಪೊಲೀಸ್ ನಿಯೋಜನೆ ಮಾಡಲಾಗಿದೆ. ಅಗತ್ಯ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನೂ ಅಳವಡಿಸಲಾಗಿದೆ.
ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ:
ಸಂಜೆ 3 ಗಂಟೆ ಸುಮಾರಿಗೆ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಲಿದೆ. ಸಿಎಂ ಸಿದ್ದರಾಮಯ್ಯ, ಸಚಿವರು, ಕೇಂದ್ರದ ಪರವಾಗಿ ಪ್ರಹ್ಲಾದ್ ಜೋಶಿ, ಕುಮಾರಸ್ವಾಮಿ ಸೇರಿ ರಾಜಕೀಯ ಗಣ್ಯರು, ಸ್ವಾಮೀಜಿಗಳು, ಅಪಾರ ಅಭಿಮಾನಿಗಳು ಭಾಗವಹಿಸಲಿದ್ದಾರೆ. ಇಂದು ಅಗತ್ಯ ತಯಾರಿಗಳು ನಡೆದಿವೆ. ಡಿಸಿಎಂ ಶಿವಕುಮಾರ್ ಸೇರಿ ಪ್ರಮುಖರು ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.
ಮೃತದೇಹ ಇಡಲಾಗುವ ಜಾಗದಲ್ಲಿ ಜರ್ಮನ್ ಟೆಂಟ್ ಹಾಕಲಾಗಿದ್ದು ಬ್ಯಾರೀಕೇಡ್ ಅಳವಡಿಕೆ ಮಾಡಲಾಗಿದೆ. ಮೂರು ಸರತಿ ಮೂಲಕ ದರ್ಶನಕ್ಕೆ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ. ವಿಐಪಿಗಳಿಗೆ ಜಿಲ್ಲಾಡಳಿತ ವಿಶೇಷ ಗ್ಯಾಲರಿ ನಿರ್ಮಾಣ ಮಾಡಿದೆ. ಎಸ್.ಎಂ ಕೃಷ್ಣರ ಕುಟುಂಬಸ್ಥರಿಗೆ ಕಾಫಿ ಡೇ ಕಟ್ಟಡದ ಪಕ್ಕದಲ್ಲೇ ಆಸನದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಯಿಂದ ಅಂತ್ಯಕ್ರಿಯೆ ಪ್ರಕ್ರಿಯೆ ಆರಂಭವಾಗಲಿದ್ದು 5 ಗಂಟೆ ಒಳಗೆ ಮುಕ್ತಾಯವಾಗಲಿದೆ.