– ಸರ್ಕಾರಿ ಶಾಲಾ,ಕಾಲೇಜಿಗೆ ರಜೆ
ಮಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ಬಿಟ್ಟರೆ ಮಂಗಳೂರೇ ದೊಡ್ಡ ಮಹಾನಗರ ಪಾಲಿಕೆ. ಇವತ್ತು ಮಂಗಳೂರು ಮಹಾನಗರ ಪಾಲಿಕೆಗೆ ಎಲೆಕ್ಷನ್ ನಡೆಯಲಿದ್ದು, ಅಧಿಕಾರ ಹಿಡಿಯೋದು ಯಾರೆನ್ನುವುದು ಇಂದು ನಿಶ್ಚಯವಾಗಲಿದೆ. ಎರಡು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹರಡಿರುವ ಪಾಲಿಕೆಯ ಗದ್ದುಗೆ ಕಳೆದ ಬಾರಿ ಕಾಂಗ್ರೆಸ್ ಕೈಲಿತ್ತು. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಕಾರಣ ಪಕ್ಷದ ಮುಖಂಡರು ತಮ್ಮದೇ ಗೆಲುವು ಅನ್ನೋ ನೆಲೆಯಲ್ಲಿ ಬೀಗುತ್ತಿದ್ದಾರೆ. ನಗರ ಭಾಗದ ಜನರ ಒಲವು ಯಾರ ಕಡೆಗಿದೆ ಅನ್ನುವುದು ಇಂದೇ ದಾಖಲಾಗಲಿದೆ.
Advertisement
ಮೆಟ್ರೋಪಾಲಿಟನ್ ಸಿಟಿಯಾಗಲು ಕಾತರಿಸುತ್ತಿರುವ ಮಂಗಳೂರು ಸದ್ಯಕ್ಕೆ ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿದೆ. ಇದೇ ವೇಳೆಯಲ್ಲಿ ಮಂಗಳೂರು ಮಹಾನಗರದ ಅಧಿಕಾರದ ಗದ್ದುಗೆಗಾಗಿ ಚುನಾವಣೆ ಏರ್ಪಟ್ಟಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರಾನೇರ ಸ್ಪರ್ಧೆ ಕಾಣಿಸಿಕೊಂಡಿದೆ. ಯಾರು ಗದ್ದುಗೆ ಹಿಡಿಯಲಿದ್ದಾರೆ ಅನ್ನೋ ಪ್ರಶ್ನೆಗೆ ಇಂದೇ ಮತದಾರ ಉತ್ತರ ಸಿಗಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯ ಶಾಲೆ, ಕಾಲೇಜುಗಳು, ಸರ್ಕಾರಿ ಕಚೇರಿ, ಬ್ಯಾಂಕುಗಳಿಗೂ ರಜೆ ನೀಡಲಾಗಿದೆ.
Advertisement
Advertisement
ಕಳೆದ ಬಾರಿ ಮಹಾನಗರ ಪಾಲಿಕೆಯ ಆಡಳಿತ ಕಾಂಗ್ರೆಸ್ ಕೈಲಿತ್ತು. 2013ರಲ್ಲಿ ನಡೆದ ಚುನಾವಣೆಯಲ್ಲಿ 60 ವಾರ್ಡ್ ಗಳಲ್ಲಿ ಕಾಂಗ್ರೆಸ್ 35 ಸ್ಥಾನ ಗೆದ್ದು ನಿರಾಯಾಸವಾಗಿ ಅಧಿಕಾರ ಗಳಿಸಿತ್ತು. ಆದರೆ, ಅವತ್ತು ಕೂಡ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿತ್ತು. ಮಂಗಳೂರಿನಲ್ಲಿ ಬಿಜೆಪಿ ಶಾಸಕರೇ ಇದ್ದರೂ, ಬಿಜೆಪಿ ಕೇವಲ 20 ಸ್ಥಾನ ಗಳಿಸಿತ್ತು. ಜೆಡಿಎಸ್ 2 ಮತ್ತು ಎಸ್ ಡಿಪಿಐ, ಸಿಪಿಐ ಮತ್ತು ಪಕ್ಷೇತರ ಅಭ್ಯರ್ಥಿಗಳು ತಲಾ ಒಂದು ಸ್ಥಾನ ಪಡೆದಿದ್ದರು. ಈ ಬಾರಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದು, ಮಂಗಳೂರಿನಲ್ಲೂ ಬಿಜೆಪಿ ಶಾಸಕರೇ ಇದ್ದಾರೆ. ಹೀಗಾಗಿ ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಕಣವಾಗಿದ್ದು, ಗೆಲ್ಲಲೇಬೇಕೆಂಬ ಹಠದಲ್ಲಿದ್ದಾರೆ.
Advertisement
ಈ ಬಾರಿಯೂ ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲ 60 ವಾರ್ಡ್ ಗಳಿಗೂ ಅಭ್ಯರ್ಥಿ ನಿಲ್ಲಿಸಿದ್ದು, ನೇರಾನೇರ ಸ್ಪರ್ಧೆ ಇದೆ. ವಿಶೇಷ ಅಂದ್ರೆ, ಜೆಡಿಎಸ್ ಈ ಬಾರಿ 12 ಸ್ಥಾನಗಳಿಗೆ ಸ್ಪರ್ಧಿಸಿದ್ದು, ಕನಿಷ್ಠ ಐದು ಸ್ಥಾನ ಗೆದ್ದರೂ ಕಿಂಗ್ ಮೇಕರ್ ಆಗುವ ಸಾಧ್ಯತೆಯಿದೆ. ಇದಲ್ಲದೆ, ಎಸ್ ಡಿಪಿಐ ಆರು ಸ್ಥಾನ ಮತ್ತು ಸಿಪಿಐಎಂ ಏಳು ಸ್ಥಾನಗಳಲ್ಲಿ ಸ್ಪರ್ಧೆ ಒಡ್ಡಿದೆ. 27 ಮಂದಿ ಪಕ್ಷೇತರರು ಸೇರಿ ಒಟ್ಟು 180 ಮಂದಿ ಕಣದಲ್ಲಿದ್ದಾರೆ. ಒಟ್ಟು 448 ಮತಗಟ್ಟೆಗಳಿದ್ದು, 3,87,517 ಮತದಾರರು ಮತ ಚಲಾಯಿಸಲಿದ್ದಾರೆ. ಹೀಗಾಗಿ ಮಂಗಳೂರು ನಗರ ಭಾಗದ ಜನ ಯಾರನ್ನು ಅಧಿಕಾರಕ್ಕೇರಿಸಲಿದ್ದಾರೆ ಅನ್ನುವುದು ಇಂದು ನಿರ್ಧಾರವಾಗಲಿದೆ.