ಬೆಂಗಳೂರು: ವಾಹನಗಳಿಗೆ ಹೆಚ್‍ಎಸ್‍ಆರ್‌ಪಿ ನಂಬರ್ ಪ್ಲೇಟ್ (HSRP number plate) ಹಾಕಿಸಲು ನೀಡಿದ್ದ ಗಡವು ಇಂದು ಮುಕ್ತಾಯವಾಗಲಿದೆ. ಈ ಹಿನ್ನೆಲೆ `ಪಬ್ಲಿಕ್ ಟಿವಿ’ ರಿಯಾಲಿಟಿ ಚೆಕ್ ನಡೆಸಿದ್ದು ವಿಧಾನಸೌಧದ ಎದುರು ನಿಂತಿರುವ ಸರ್ಕಾರಿ ವಾಹನಗಳಲ್ಲೇ ಹೆಚ್‍ಎಸ್‍ಆರ್‌ಪಿ ನಂಬರ್ ಪ್ಲೇಟ್ ಹಾಕಿಸದೇ ಇರುವುದು ಪತ್ತೆಯಾಗಿದೆ.
ಸೋಮವಾರದಿಂದ ಹೆಚ್‍ಎಸ್‍ಆರ್‌ಪಿ ಇಲ್ಲದೇ ಇದ್ದರೆ ಮೊದಲ ಬಾರಿಗೆ 500 ರೂ. ದಂಡ ಎರಡನೇ ಬಾರಿ ಸಿಕ್ಕಿಬಿದ್ದರೆ 1,000 ರೂ. ದಂಡವನ್ನ ಹಾಕಲು ಸಾರಿಗೆ ಇಲಾಖೆ ತಯಾರಿ ನಡೆಸಿದೆ. ಅಲ್ಲದೇ ಟ್ರಾಫಿಕ್ ಪೊಲೀಸರು ಸಹ ಈ ದಂಡವನ್ನ ಹಾಕಲಿದ್ದಾರೆ. ಇದಕ್ಕಾಗಿಯೇ ವಿಶೇಷ ಕಾರ್ಯಚರಣೆ ಮಾಡುವ ತಯಾರಿ ಕೂಡ ನಡೆದಿದೆ.
Advertisement
Advertisement
ವಿಧಾನಸೌಧದದ ಎದುರು ನಿಂತಿರುವ ಹಲವು ಸರ್ಕಾರದ ವಾಹನಗಳಿಗೆ ಹೆಚ್‍ಎಸ್‍ಆರ್‌ಪಿ ಆಗಿಲ್ಲ. ಜೊತೆಗೆ ಅಲ್ಲೇ ಇರುವ ಅಗ್ನಿಶಾಮಕ ಠಾಣೆಯ ವಾಹನಗಳಿಗೂ ಇನ್ನೂ ಹೆಚ್‍ಎಸ್‍ಆರ್‍ಪಿ ಆಗಿಲ್ಲ ಅನ್ನೋದು ರಿಯಾಲಿಟಿ ಚೆಕ್‍ನಲ್ಲಿ ಕಂಡುಬಂದಿದೆ. ಇನ್ನೂ ವಿಕಾಸಸೌಧದ ಬಿಲ್ಡಿಂಗ್‍ನಲ್ಲೂ ಅನೇಕ ಇಲಾಖೆಯ ವಾಹನಗಳನ್ನು ಪಾರ್ಕ್ ಮಾಡಿದ್ದು, ಅದರಲ್ಲೂ ಅನೇಕ ವಾಹನಗಳಿಗೆ ಹೆಚ್‍ಎಸ್‍ಆರ್‍ಪಿ ಹಾಕಿಸಿಲ್ಲ ಎಂಬುದು ಗೊತ್ತಾಗಿದೆ.
Advertisement
Advertisement
HSRP ನಂಬರ್ ಪ್ಲೇಟ್ ಎಂದರೇನು?
ಸಾಮಾನ್ಯ ನಂಬರ್ ಪ್ಲೇಟ್‍ಗಳಿಗಿಂತಲೂ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (HSRP) ಭಿನ್ನವಾಗಿರುತ್ತವೆ. ಇವು ಅಲ್ಯೂಮಿನಿಯಂ ಲೋಹದಿಂದ ತಯಾರಿಸಲ್ಪಟ್ಟ ಪ್ಲೇಟ್‍ಗಳು. ಈ ಪ್ಲೇಟ್‍ನ ಮೇಲ್ಭಾಗದ ಎಡಬದಿಯಲ್ಲಿ ಅಶೋಕ ಚಕ್ರದ ಮುದ್ರೆಯ 20ಘಿ20 ಮಿ.ಮೀ ಅಳತೆಯ ಕ್ರೋಮಿಯಂ ಹೋಲೋಗ್ರಾಮ್ ಇರುತ್ತದೆ. ಇಂಗ್ಲಿಷ್ ಅಕ್ಷರದೊಂದಿಗೆ ಉಬ್ಬಿಕೊಂಡಿರುವ ರೀತಿ ನಂಬರ್‍ಗಳು ಅಚ್ಚಾಗಿರುತ್ತವೆ. ಇದರ ಕೆಳಗಡೆ 10 ನಂಬರಿನ ವಿಶಿಷ್ಟ ಗುರುತಿನ ಸಂಖ್ಯೆ ಇರುತ್ತದೆ. ಅಂಕಿಗಳ ಮೇಲೆ ಇಂಗ್ಲಿಷ್‍ನಲ್ಲಿ ಇಂಡಿಯಾ ಎಂಬ ಪದ ಹಲವೆಡೆ ಇರುತ್ತದೆ. ಈ ನಂಬರ್ ಪ್ಲೇಟ್‍ಗಳನ್ನು ಎರಡು ಲಾಕ್ ಪಿನ್‍ಗಳನ್ನು ಬಳಸಿ ಅಳವಡಿಸುತ್ತಾರೆ. ವಾಹನಗಳ ಕಳವು, ಅವುಗಳನ್ನು ಬಳಸಿ ಅಪರಾಧ ಚಟುವಟಿಕೆ ಮಾಡಿದಾಗ ಪರಿಶೀಲಿಸಲು ಹೆಚ್‍ಎಸ್‍ಆರ್‌ಪಿ ಸಹಕಾರಿಯಾಗಲಿದೆ. ಇದರಿಂದಾಗಿ ಅಸಲಿ ಹಾಗೂ ನಕಲಿ ನಂಬರ್ ಪ್ಲೇಟ್‍ಗಳನ್ನು ಗುರುತಿಸಲು ಸುಲಭವಾಗಿರುತ್ತದೆ. ಇವುಗಳನ್ನು ಬದಲಿಸುವುದು, ವಿರೂಪಗೊಳಿಸುವುದು ಸಾಧ್ಯವಿರುವುದಿಲ್ಲ.