ಶ್ರೀಹರಿಕೋಟಾ: ಸ್ವದೇಶಿ ಕ್ರಯೋಜನಿಕ್ ಸಿ-25 ಇಂಜಿನ್ ಹೊಂದಿರುವ ಜಿಎಸ್‍ಎಲ್‍ವಿ ಮಾರ್ಕ್-3 ರಾಕೆಟ್ ಉಡಾವಣೆ ಯಶಸ್ವಿಯಾಗಿದ್ದು, ಜಿಸ್ಯಾಟ್ 19 ಉಪಗ್ರಹ ನಿಗದಿತ ಕಕ್ಷೆಗೆ ಸೇರುವ ಮೂಲಕ ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಬರೆದಿದೆ.
ಉಡಾವಣೆ ಯಶಸ್ವಿಯಾಗುತ್ತಿದ್ದಂತೆ ಇಸ್ರೋ ವಿಜ್ಞಾನಿಗಳು ಪರಸ್ಪರ ಅಭಿನಂದಿಸಿದರು. ಬಳಿಕ ಮಾತನಾಡಿದ ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್, ಇವತ್ತು ನಮಗೆ ಐತಿಹಾಸಿಕ ದಿನ. ಮೊದಲ ಪ್ರಯತ್ನದಲ್ಲೇ ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ ಮೂಲಕ ಜಿಸ್ಯಾಟ್ -19 ಉಪಗ್ರಹ ಕಕ್ಷೆಗೆ ಸೇರಿದೆ. 2002ರಿಂದ ಹಗಲು ಇರುಳು ಈ ಯೋಜನೆಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿದರು.
Advertisement
ರಾಕೆಟ್ ಉಡಾವಣೆ ವೇಳೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಉಪಸ್ಥಿತರಿದ್ದರು.
Advertisement
https://www.youtube.com/watch?v=T7_8MtGxyN8
Advertisement
Advertisement
The GSLV – MKIII D1/GSAT-19 mission takes India closer to the next generation launch vehicle and satellite capability. The nation is proud!
— Narendra Modi (@narendramodi) June 5, 2017
Congratulations to the dedicated scientists of ISRO for the successful launch of GSLV – MKIII D1/GSAT-19 mission.
— Narendra Modi (@narendramodi) June 5, 2017
GSLV Mk III-D1 Successfully launches GSAT-19https://t.co/1d7H5rWOEY pic.twitter.com/EiZsEVf70C
— ISRO (@isro) June 5, 2017
ಏನಿದು ಜಿಎಸ್‍ಎಲ್‍ವಿ ಮಾರ್ಕ್-3?
ಇಸ್ರೋ ವಿಜ್ಞಾನಿಗಳ 25 ವರ್ಷಗಳ ಪರಿಶ್ರಮದ ಫಲದಿಂದ ಜಿಎಸ್‍ಎಲ್‍ವಿ ರಾಕೆಟ್ ತಯಾರಾಗಿದೆ. 640 ಟನ್ ತೂಕದ ಈ ರಾಕೆಟ್‍ಗೆ ಸ್ವದೇಶಿ ನಿರ್ಮಿತ ಕ್ರಯೋಜನಿಕ್ ಎಂಜಿನ್ ಬಳಕೆಯಾಗಿದೆ. 43.43 ಮೀಟರ್ ಉದ್ದ, 4 ಮೀಟರ್ ಸುತ್ತಳತೆಯನ್ನು ಈ ರಾಕೆಟ್ ಹೊಂದಿದ್ದು, 200 ಕ್ಕೂ ಹೆಚ್ಚು ಬಾರಿ ಪರೀಕ್ಷೆಗೊಳಪಡಿಸಲಾಗಿದೆ.
ಸ್ವದೇಶಿ ಕ್ರಯೋಜನಿಕ್ ಎಂಜಿನ್ ರೂಪುಗೊಂಡಿದ್ದು ಹೇಗೆ?
1999ರ ಭಾರತ ಪಾಕ್ ಯುದ್ಧದ ವೇಳೆ ಅಮೆರಿಕ ಜಿಪಿಎಸ್ ಮಾಹಿತಿ ನೀಡಲು ನಿರಾಕರಿಸಿದ್ದಕ್ಕೆ ಇಸ್ರೋ ವಿಜ್ಞಾನಿಗಳು ಈಗ ಸ್ವದೇಶಿ ಜಿಪಿಎಸ್ ವ್ಯವಸ್ಥೆಯನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದರೆ. ಇದೇ ರೀತಿಯ ಕಥೆ ಸ್ವದೇಶಿ ಕ್ರಯೋಜನಿಕ್ ಎಂಜಿನ್ ತಯಾರಿಕೆಯಲ್ಲೂ ಇದೆ. ಕ್ರಯೋಜನಿಕ್ ಎಂಜಿನ್ ಗಾಗಿ ಭಾರತ ರಷ್ಯಾವನ್ನು ಅವಲಂಬಿಸಿತ್ತು ಅಷ್ಟೇ ಅಲ್ಲದೇ ಒಪ್ಪಂದ ಸಹ ಮಾಡಿಕೊಂಡಿತ್ತು. ಆದರೆ ಈ ಕ್ರಯೋಜನಿಕ್ ಎಂಜಿನ್ ಭಾರತ ಕ್ಷಿಪಣಿಗಳಿಗೆ ಬಳಸುತ್ತದೆ ಎನ್ನುವ ಭೀತಿಯನ್ನು ಅಮೆರಿಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಷ್ಯಾ ಭಾರತಕ್ಕೆ ನೀಡಲು ನಿರಾಕರಿಸಿತು. ಇದರಿಂದಾಗಿ ಇಸ್ರೋ ವಿಜ್ಞಾನಿಗಳು ಸ್ವದೇಶಿ ಕ್ರಯೋಜನಿಕ್ ಎಂಜಿನ್ ತಯಾರಿಸಲು ಮುಂದಾದರು. 15 ವರ್ಷದ ಪರಿಶ್ರಮವಾಗಿ ಕ್ರಯೋಜನಿಕ್ ಎಂಜಿನ್ ಹೊಂದಿರುವ ರಾಕೆಟ್ ಈಗ ಅಭಿವೃದ್ಧಿಯಾಗಿದೆ. 2014ರ ಡಿಸೆಂಬರ್ 18ರಂದು ಜಿಎಸ್‍ಎಲ್‍ವಿ ಮಾರ್ಕ್-3ಯ ಪ್ರಾಯೋಗಿಕ ಉಡಾವಣೆ ಮಾಡಲಾಗಿತ್ತು. ಆದರೆ ಇದರಲ್ಲಿ ಕ್ರಯೋಜನಿಕ್ ಎಂಜಿನ್ ಬಳಕೆ ಮಾಡಿರಲಿಲ್ಲ.
ಈಗಾಗಲೇ ಕೇವಲ 454 ಕೋಟಿ ರೂ. ಮಂಗಳಯಾನ ಕೈಗೊಳ್ಳುವ ಮೂಲಕ ಇಸ್ರೋ ವಿಶ್ವದಲ್ಲೇ ಕಡಿಮೆ ವೆಚ್ಚದಲ್ಲಿ ಮಂಗಳನ ಅಂಗಳಕ್ಕೆ ಉಪಗ್ರಹ ಕಳುಹಿಸಿದ ದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಸ್ರೋದಿಂದ ಉಪಗ್ರಹ ಉಡಾವಣೆ ವೆಚ್ಚ ಉಳಿದ ಏಜೆನ್ಸಿಗಳಿಗಿಂತ 11 ಪಟ್ಟು ಅಗ್ಗವಾಗಿದ್ದು, ಈ ಕ್ರಯೋಜನಿಕ್ ಎಂಜಿನ್ ಇರುವ ಈ ರಾಕೆಟ್ ತಯಾರಿಕೆಗೆ ಇಸ್ರೋ 300 ಕೋಟಿ ರೂ. ವೆಚ್ಚ ಮಾಡಿದೆ.
ಪವರ್‍ಫುಲ್ ರಾಕೆಟ್:
ಇಸ್ರೋ ಹೆಚ್ಚಾಗಿ ತನ್ನ ಉಪಗಹಗಳನ್ನು ಉಡಾವಣೆ ಮಾಡಲು ಪಿಎಸ್‍ಎಲ್‍ವಿ(ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್), ಮತ್ತು ಜಿಎಸ್‍ಎಲ್‍ವಿ(ಜಿಯೋಸಿಂಕ್ರೋನಾಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಬಳಕೆ ಮಾಡುತ್ತದೆ. ಪಿಎಸ್‍ಎಲ್‍ವಿ 1500 ಕೆಜಿ ತೂಕ ಸಾಮರ್ಥ್ಯದ ಉಪಗ್ರಹವನ್ನು ಕಕ್ಷಗೆ ಸೇರಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, ಈ ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ 4 ಸಾವಿರ ಕೆಜಿ ತೂಕದ ಉಪಗ್ರಹವನ್ನು ಒಯ್ಯುವ ಸಾಮರ್ಥ್ಯ ಹೊಂದಿದೆ. 640 ಟನ್ ತೂಕದ ಈ ರಾಕೆಟ್ ಪ್ರಯಾಣಿಕರಿಂದ ತುಂಬಿರುವ 5 ಜಂಬೋ ವಿಮಾನಗಳ ತೂಕಕ್ಕೆ ಸಮವಾಗಿದೆ.
ಭಾರತಕ್ಕೆ ಲಾಭ ಏನು?
ಇಸ್ರೋ ಇಲ್ಲಿಯವರೆಗೆ ಭಾರದ ಉಪಗ್ರಹಗಳನ್ನು ವಿದೇಶಿ ರಾಕೆಟ್‍ಗಳ ಮೂಲಕ ಉಡಾವಣೆ ಮಾಡುತಿತ್ತು. ಇನ್ನು ಮುಂದೆ ಈ ಯಶಸ್ಸಿನಿಂದ ಅನ್ಯದೇಶಗಳ ಅವಲಂಬನೆ ತಪ್ಪಲಿದೆ. ಅಷ್ಟೇ ಅಲ್ಲದೇ ಮಾನವ ಸಹಿತ ಬಾಹ್ಯಾಕಾಶ ಯಾತ್ರೆ ಕೈಗೊಳ್ಳಲು ಈ ರಾಕೆಟ್ ಸಹಾಯವಾಗಲಿದೆ.
ಉಪಗ್ರಹದ ವಿಶೇಷತೆ ಏನು?
ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ 3136 ಕೆಜಿ ತೂಕವಿರುವ ಜಿಸ್ಯಾಟ್ -19 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ. ಇದು ಇಸ್ರೋ ಉಡಾಯಿಸಿದ ತೂಕದ ಉಪಗ್ರಹವಾಗಿದೆ. ಕಳೆದ ತಿಂಗಳ 5 ರಂದು ಜಿಎಸ್‍ಎಲ್‍ವಿ ಮಾರ್ಕ್ 2 ರಾಕೆಟ್‍ನೊಂದಿಗೆ 2,230 ಕೆಜಿ ತೂಕದ ದಕ್ಷಿಣ ಏಷ್ಯಾ ಉಪಗ್ರಹ ಜಿಸ್ಯಾಟ್ 9 ಉಡಾವಣೆಯನ್ನು ಇಸ್ರೋ ಮಾಡಿತ್ತು. ಇದು ಇದೂವರೆಗಿನ ಇಸ್ರೋ ಉಡಾಯಿಸಿದ ಅತಿಹೆಚ್ಚು ತೂಕದ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಉಪಗ್ರಹದ ಲಾಭ ಏನು?
ಈ ಹಿಂದೆ ಉಡಾವಣೆಯಾಗಿರುವ ಹಳೆಯ 6,7 ಸಂವಹನ ಉಪಗ್ರಹಗಳಿಗೆ ಜಿಸ್ಯಾಟ್-19 ಸಮವಾಗಿದ್ದು ಕೆ-ಎ ಮತ್ತು ಕೆ-ಯು ಬ್ಯಾಂಡ್‍ನ ಟ್ರಾನ್ಸ್ ಪಾಂಡರ್ ಅಳವಡಿಸಲಾಗಿದೆ. ಇದರ ಬಳಕೆಯಿಂದ ಇಂಟರ್ನೆಟ್, ದೂರವಾಣಿ ಮತ್ತು ವಿಡಿಯೋ ಸೇವೆಗಳ ಗುಣಮಟ್ಟ ಸುಧಾರಣೆಯಾಗಲಿದೆ. ಕಕ್ಷೆ ಸೇರಿದ ಬಳಿಕ ಇಂಟರ್ನೆಟ್ ವೇಗ ಮತ್ತು ಕನೆಕ್ಟಿವಿಟಿ ಹೆಚ್ಚಾಗಲಿದೆ. ಇಸ್ರೋ ಇದರಲ್ಲಿ ಮಲ್ಟಿಪಲ್ ಸ್ಪಾಟ್ ಬೀಮ್ ಅಳವಡಿಸಿದೆ. ಉಪಗ್ರಹದಲ್ಲಿ ವಿಕಿರಣ ಸ್ಪೆಕ್ಟ್ರೋಮೀಟರ್(ಜಿಆರೆಎಸ್‍ಪಿ) ಅಳವಡಿಸಲಾಗಿದ್ದು ಇದು ಪ್ರಕೃತಿ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ವಿಕಿರಣಗಳ ಪ್ರಭಾವವನ್ನೂ ಅಧ್ಯಯನ ನಡೆಸಲಿದೆ. ಅಷ್ಟೇ ಅಲ್ಲದೇ ಮೊದಲ ಬಾರಿಗೆ ಸ್ವದೇಶಿ ಲಿಥಿಯಾಂ ಆಯಾನ್ ಬ್ಯಾಟರಿಯನ್ನು ಇಸ್ರೋ ಬಳಕೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಬ್ಯಾಟರಿಗಳನ್ನು ಎಲೆಕ್ಟ್ರಿಕ್ ಬಸ್, ಕಾರುಗಳಲ್ಲಿ ಬಳಸಬಹುದಾಗಿದೆ.