ನವದೆಹಲಿ: ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರನ್ನು ಪಕ್ಷದಿಂದ ಅಮಾನತು ಮಾಡಿರುವ ವಿಚಾರ ಗೊತ್ತಿಲ್ಲ. ಇಂದು ಬೆಳಗ್ಗೆ ಯಾರೋ ಹೇಳಿದ್ರು. ಆ ಬಳಿಕ ವಿಷಯ ತಿಳಿಯಿತು ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲ ಗಾಂಧಿ ಕುಟುಂಬ, ಕಾಂಗ್ರೆಸ್‍ಗೆ ನಿಷ್ಠೆಯುಳ್ಳವರಿಗೆ ವ್ಯಕ್ತಿ ನಿಷ್ಠೆ ಇರಬಾರದು. ಪಕ್ಷ ನಿಷ್ಠೆ ಇರಬೇಕು ಎಂದು ಮೊದಲಿಂದಲೂ ಹೇಳುತ್ತಿದ್ದೇನೆ. ಸಿದ್ದರಾಮಯ್ಯ ನಮ್ಮ ಸಿಎಲ್‍ಪಿ(ಕಾಂಗ್ರೆಸ್ ಶಾಸಕಾಂಗ ಪಕ್ಷ) ನಾಯಕರು. ಅವರಿಗೆ ಎಷ್ಟು ಗೌರವ ಕೊಡಬೇಕೋ ಅಷ್ಟನ್ನು ಕೊಡಲೇಬೇಕು. ಪಕ್ಷದ ಅಧ್ಯಕ್ಷರಿಗೂ ಕೊಡಬೇಕು. ಹಾಗೆಯೇ ಶಾಸಕರಿಗೂ ಗೌರವ ಕೊಡಬೇಕು. ಶಿಸ್ತು ಕಾಪಾಡುವುದು ಅನಿವಾರ್ಯವಾಗಿದೆ. ನನಗೆ ಏನನ್ನೂ ಮಾತನಾಡಬೇಡಿ ಎಂದಿದ್ದಾರೆ, ನಾನು ಮಾತನಾಡೋಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದ ಕೇಂದ್ರ ಸಚಿವರನ್ನು ಭೇಟಿಯಾಗಿದ್ದೆ. ಮಹಾದಾಯಿ, ಮೇಕೆದಾಟು ವಿಷಯ ಪ್ರಸ್ತಾಪಿಸಿದ್ದೇನೆ. ಕಾವೇರಿ ರೀತಿ ಮಹಾದಾಯಿ ತೀರ್ಪಿನ ಬಗ್ಗೆ ಅಧಿಸೂಚನೆ ಆಗಬೇಕು. ಈ ಬಗ್ಗೆ ರಾಜ್ಯದ ಪರ ನಿಲ್ಲುವಂತೆ ಮನವಿ ಮಾಡಿದೆ. ಮೇಕದಾಟು ಯೋಜನೆ ವಿಷಯದಲ್ಲಿ ಕೆಲವು ಗೊಂದಲಗಳಿವೆ. ಅವುಗಳ ಬಗ್ಗೆ ಕೇಂದ್ರ ಸಚಿವರಿಗೆ ಮಾಹಿತಿ ನೀಡಿದ್ದೇನೆ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಅನುಕೂಲವಿದೆ. ಹೆಚ್ಚು ನೀರು ಸಂಗ್ರಹಣೆಗೆ ಅವಕಾಶ ಸಿಗಲಿದೆ. ಇದನ್ನು ತಮಿಳುನಾಡು, ಕೇಂದ್ರ ಸರ್ಕಾರಕ್ಕೆ ತಿಳಿಸಲು ಹೇಳಿದ್ದೇನೆ ಎಂದರು.
ಮಹಾದಾಯಿ ವಿಷಯದಲ್ಲಿ ಸದಾನಂದಗೌಡರು ಕೇಂದ್ರ ಜಲಶಕ್ತಿ ಸಚಿವರ ಜೊತೆ ಚರ್ಚಿಸಿದ್ದಾರೆ. ಕೇಂದ್ರ ಜಲಶಕ್ತಿ ಸಚಿವರು 3 ರಾಜ್ಯಗಳ ಸಿಎಂಗಳ ಜೊತೆ ಮಾತನಾಡಿದ್ದಾರೆ. ಮೊದಲು ಮಂತ್ರಿಗಳು ಚರ್ಚೆ ಮಾಡಲಿ ಎಂದು ಹೇಳಿದ್ದಾರೆ. ನಂತರ 3 ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಯಲಿದೆ ಎಂದು ಅವರು ವಿವರಿಸಿದ್ದಾರೆ.
ಮಂಗಳವಾರ ದಿಲ್ಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ @nsitharaman ಅವರನ್ನು ಭೇಟಿ ಮಾಡಿ ಕೃಷ್ಣ ಜಲವಿವಾದ-ll, ಮೇಕೆದಾಟು ಸಮತೋಲನ ಅಣೆಕಟ್ಟು ಯೋಜನೆ, ಮಹದಾಯಿ ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆ ಯೋಜನೆಗಳಿಗೆ ಕೇಂದ್ರದಿಂದ ಅನುಮತಿ ಪಡೆಯಲು ಸಹಕಾರ ನೀಡುವಂತೆ ಮನವಿ ಮಾಡಿದೆನು https://t.co/74YDBIjqx6 pic.twitter.com/PJckJ73wSw
— DK Shivakumar (@DKShivakumar) June 18, 2019