ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಇಂದು 86ನೇ ವಂಸತಕ್ಕೆ ಕಾಲಿಟ್ಟಿದ್ದು, ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಕೃಷ್ಣ ಮತ್ತು ಅವರು ಕುಟುಂಬಸ್ಥರು ಮುಂಬೈನಲ್ಲಿದ್ದು ಅಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಮೇ 3 ರಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಸಮಾವೇಶ ಆಯೋಜನೆಗೊಂಡಿದೆ. ಈ ಸಮಾವೇಶದಲ್ಲಿ ಎಸ್.ಎಂ.ಕೃಷ್ಣ ಅವರು ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ ಬುಧವಾರ ಸಂಜೆ ಮುಂಬೈನಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾರೆ.
ಎಸ್.ಎಂ. ಕೃಷ್ಣ ಅವರಿಗೆ ಪ್ರಧಾನಿ ಮೋದಿ ಅವರ ಸಮಾವೇಶದಲ್ಲಿ ಭಾಗಿಯಾಗುವಂತೆ ಬಿಜೆಪಿಯಿಂದ ಆಹ್ವಾನ ನೀಡಲಾಗಿದೆ. ಬೆಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಿ ಭಾಷಣವನ್ನು ಕೂಡ ಕೃಷ್ಣ ಅವರು ಮಾಡಲಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಎಸ್.ಎಂ.ಕೆ ಪಾತ್ರ ಕಡೆಗಣನೆಯಾಗುತ್ತಿದೆ ಎಂಬ ಮಾತು ಕೇಳಿ ಬಂದಿತ್ತು. ಎಸ್.ಎಂ.ಕೃಷ್ಣ ಅವರು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡುವಂತೆ ಯಡಿಯೂರಪ್ಪಗೆ ಪತ್ರ ಬರೆದಿದ್ದರು. ಆದರೆ ಬಿಜೆಪಿ ನಾಯಕರು ಅವರು ಹೇಳಿದ್ದ 6 ಮಂದಿಯ ಪೈಕಿ ಮೂವರಿಗೆ ಮಾತ್ರ ಟಿಕೆಟ್ ನೀಡಿದ್ದಾರೆ. ಆದ್ದರಿಂದ ಬಿಜೆಪಿ ಪ್ರಚಾರದಲ್ಲಿ ಸಕ್ರೀಯವಾಗಿ ತೊಡಿಗಿಸಿಕೊಳ್ಳುವಂತೆ ಕೃಷ್ಣ ಅವರಿಗೆ ಬಿಜೆಪಿ ನಾಯಕರು ಮನವಿ ಮಾಡಿಕೊಂಡಿದ್ದರು. ಬಿಜೆಪಿ ರಾಜ್ಯ ನಾಯಕರು ನೀಡಿರುವ ಆಹ್ವಾನವನ್ನು ಮನ್ನಿಸಿ ಎಸ್.ಎಂ.ಕೃಷ್ಣ ಪ್ರಚಾರಕ್ಕೂ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.