ನವದೆಹಲಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ಸಿಎಂ ಬಿ.ಎಸ್ ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ. ಗುರುವಾರ ಮಧ್ಯಾಹ್ನ ದೆಹಲಿಗೆ ತೆರಳಿರುವ ಸಿಎಂ ಸಂಜೆ ಹೈಕಮಾಂಡ್ ನಾಯಕರನ್ನ ಭೇಟಿಯಾದರೂ ಪ್ರಯೋಜವಾಗಿಲ್ಲ.
ಹಳೆ ಚಾಳಿಯನ್ನ ಮುಂದುವರಿಸಿರುವ ಹೈಕಮಾಂಡ್ ನಾಳೆ ಬಾ ಎನ್ನುವ ಸಿದ್ಧ ಉತ್ತರವನ್ನ ಬಿಎಸ್‍ವೈಗೆ ರವಾನಿಸಿದೆ. ಗುರುವಾರ ರಾತ್ರಿ ಚರ್ಚೆ ಸಾಧ್ಯವಾಗದ ಹಿನ್ನೆಲೆ ಇಂದು ಸಂಸತ್ತಿನ ಜಂಟಿ ಅಧಿವೇಶನ ಬಳಿಕ ಗೃಹ ಸಚಿವ ಅಮಿತ್ ಶಾ ಅವರನ್ನು ಬಿಎಸ್‍ವೈ ಭೇಟಿ ಮಾಡಲಿದ್ದು, ಅಂತಿಮ ಚರ್ಚೆ ನಡೆಸುವ ಸಾಧ್ಯತೆ ಇದೆ.
Advertisement
Advertisement
ಆದರೆ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಇಂದೇ ಗ್ರೀನ್ ಸಿಗ್ನಲ್ ನೀಡುವುದು ಅನುಮಾನ ಎನ್ನಲಾಗಿದೆ. ಸಂಸತ್ತಿನ ಅಧಿವೇಶನ ಹಾಗೂ ದೆಹಲಿ ಚುನಾವಣೆಯಲ್ಲಿ ಅಮಿತ್ ಶಾ ನಿರತವಾಗಿದ್ದು, ಇಂದು ಸಂಜೆ 4 ಗಂಟೆಯಿಂದ ಚುನಾವಣಾ ರ‍್ಯಾಲಿಗಳಲ್ಲಿ ಭಾಗಿಯಾಗಲಿದ್ದಾರೆ. ಇದಕ್ಕೂ ಮೊದಲು ಬೆಳಗ್ಗೆ 11 ಗಂಟೆಯಿಂದ 1 ಗಂಟೆವರೆಗೂ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಅವರು ಭಾಗಿಯಾಗಲಿದ್ದಾರೆ. ಈ ಒತ್ತಡಗಳ ನಡುವೆ ಬಿಎಸ್‍ವೈ ಭೇಟಿಯಾಗಿ ಸಂಪೂರ್ಣವಾಗಿ ಚರ್ಚಿಸಿ ಒಪ್ಪಿಗೆ ನೀಡುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.
Advertisement
Advertisement
ಒಂದು ವೇಳೆ ಒಪ್ಪಿಗೆ ಸಿಗದಿದ್ದರೂ ಬಿಎಸ್‍ವೈ ಅವರಿಂದ ಅಮಿತ್ ಶಾ ಸಚಿವ ಸ್ಥಾನದ ಪಟ್ಟಿ ಪಡೆದುಕೊಂಡು ಅವರ ಅಭಿಪ್ರಾಯ ಕೇಳಲಿದ್ದಾರೆ. ಬಳಿಕ ತಮ್ಮ ಅಭಿಪ್ರಾಯ ತಿಳಿಸುವ ಭರವಸೆ ನೀಡಿ ವಾಪಸ್ ಕಳುಹಿಸುವ ಸಾಧ್ಯತೆ ಕೂಡ ಇದೆ. ಹೀಗಾಗಿ ಇಂದೇ ಸಂಪುಟ ಕಗ್ಗಂಟು ಬಗೆಹರಿಯುತ್ತೆ ಎನ್ನುವುದು ಕಷ್ಟ ಸಾಧ್ಯ.
ಗುರುವಾರ ರಾತ್ರಿ 10 ಗಂಟೆಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಬಳಿಕ ಅಮಿತ್ ಶಾ ಅವರನ್ನ ಬಿಎಸ್‍ವೈ ಭೇಟಿ ಮಾಡಿದ್ದರು. ಜೆ.ಪಿ ನಡ್ಡಾ ಜೊತೆಗೆ ಸೌರ್ಹದಯುತ ಮಾತುಕತೆ ನಡೆಸಿದ ಬಿಎಸ್‍ವೈ ರಾಷ್ಟ್ರೀಯ ಅಧ್ಯಕ್ಷರಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಬಳಿಕ ಕ್ಯಾಬಿನೆಟ್ ವಿಚಾರ ಪ್ರಸ್ತಾಪಿಸಿದ್ದು, ಈ ವೇಳೆ ಅಮಿತ್ ಶಾ ಜೊತೆಗೆ ಮಾತುಕತೆ ನಡೆಸಲು ನಡ್ಡಾ ಸೂಚಿಸಿದ್ದರು. ಆದರೆ ಚುನಾವಣಾ ಪ್ರಚಾರದಿಂದ ವಾಪಸ್ಸಾಗಿದ್ದ ಅಮಿತ್ ಶಾ ಇಂದು ಬೆಳಗ್ಗೆ 9:30 ಗಂಟೆಗೆ ಭೇಟಿ ಆಗುವಂತೆ ಬಿಎಸ್‍ವೈಗೆ ಸೂಚಿಸಿದ್ದರು. ಕೆಲವೇ ಹೊತ್ತಿನಲ್ಲಿ ಬಿಎಸ್‍ವೈಗೆ ಕರೆ ಮಾಡಿದ ಅಮಿತ್ ಶಾ ಸಂಸತ್ತಿನ ಜಂಟಿ ಅಧಿವೇಶನದ ಬಳಿಕ ಚರ್ಚೆ ಮಾಡುವುದಾಗಿ ತಿಳಿಸಿದರು. ಹೀಗಾಗಿ ಇಂದು ನಡೆಯುವ ಸಭೆ ಸಾಕಷ್ಟು ಕುತೂಹಲ ಮೂಡಿಸಿದ್ದು, ತಿಂಗಳಿಂದ ನಡೆಯುತ್ತಿರುವ ಸಂಪುಟ ವಿಸ್ತರಣೆ ಕಸರತ್ತು ಅಂತ್ಯವಾಗುತ್ತಾ ಎಂದು ಕಾದು ನೋಡಬೇಕಿದೆ.