Connect with us

Bengaluru City

ಸರಳ ಸಮಾರಂಭದಲ್ಲಿ ಚಿರು-ಮೇಘನಾ ನಿಶ್ಚಿತಾರ್ಥ

Published

on

ಬೆಂಗಳೂರು: ಸ್ಯಾಂಡಲ್‍ವುಡ್ ತಾರಾ ಜೋಡಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ನಿಶ್ಚಿತಾರ್ಥ ಕಾರ್ಯಕ್ರಮ ಅತ್ಯಂತ ಸರಳವಾಗಿ ನಗರದ ಜೆ.ಪಿ.ನಗರದ ವಧುವಿನ ಮನೆಯಲ್ಲಿ ಭಾನುವಾರ ನಡೆಯಿತು.

ಇಂದು ಬೆಳಗ್ಗೆ 10 ಗಂಟೆಯಿಂದ ಮೇಘನಾ ರಾಜ್ ಮನೆಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮಗಳು ಸಂಪ್ರದಾಯಬದ್ಧವಾಗಿ ನಡೆಯಿತು. ನಟ, ನಿರ್ದೇಶಕ ಅರ್ಜುನ್ ಸರ್ಜಾ ಅವರೊಂದಿಗೆ ಚಿರಂಜೀವಿ ಸರ್ಜಾ ವಧುವಿನ ಮನೆಗೆ ಆಗಮಿಸಿದರು. ಜೊತೆಗೆ ಅರ್ಜುನ್ ಸರ್ಜಾರ ಪತ್ನಿ ಆಶಾರಾಣಿ, ಮಗಳು ಐಶ್ವರ್ಯಾ ಸರ್ಜಾ, ಧೃವ ಸರ್ಜಾ ಸೇರಿದಂತೆ ಕುಟುಂಬದ ಆಪ್ತರು ಮಾತ್ರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಚಿರು ಮನೆಗೆ ಆಗಮಿಸುತ್ತಿದ್ದಂತೆ ಮೇಘನಾ ರಾಜ್ ಕುಟುಂಬಸ್ಥರು ಹಾರ ಹಾಕುವ ಮೂಲಕ ಬರಮಾಡಿಕೊಂಡರು. ಹಿಂದೂ ಸಂಪ್ರದಾಯದಂತೆ ಹಿರಿಯರ ಸಮ್ಮುಖದಲ್ಲಿ ನವ ಜೋಡಿ ಉಂಗುರ ಬದಲಾಯಿಸಿಕೊಂಡರು. ಬೆಳಗ್ಗೆ ಸೀರೆಯಲ್ಲಿ ಮೇಘನಾ ಮಿಂಚಿದರೆ, ಚಿರು ವೈಟ್ ಪಂಚೆ ಮತ್ತು ಶರ್ಟ್‍ನಲ್ಲಿ ಕಂಗೊಳಿಸಿದರು.

ಸಂಜೆ ಬೆಂಗಳೂರಿನ ಲೀಲಾ ಪ್ಯಾಲೇಸ್‍ನಲ್ಲಿ ಹತ್ತಿರದ ಬಂಧುಗಳಿಗೆ ಹಾಗೂ ಆಪ್ತರಿಗೆ ಔತಣಕೂಟವನ್ನು ಏರ್ಪಡಿಸಲಾಗಿದೆ. ಬೆಳಗ್ಗೆ ಸಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದರೆ ಸಂಜೆ ವಧು ಮೇಘನಾ ಗುಲಾಬಿ ಬಣ್ಣದ ಗೌನ್ ಧರಿಸಲಿದ್ದು, ಚಿರು ನೀಲಿ ಬಣ್ಣದ ಲೈಟ್ ಚಕ್ಸ್ ಸೂಟ್ ಧರಿಸಲಿದ್ದಾರೆ.

ಹಿರಿಯ ತಾರೆಗಳಾದ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಅವರ ಮಗಳು ಮೇಘನಾ ಪುಂಡ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟವರು. ನಂತರ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡರು. ರಾಜಾಹುಲಿ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಕಮ್‍ಬ್ಯಾಕ್ ಆಗಿದ್ದ ಮೇಘನಾ ರಾಜ್ ಬಹುಪರಾಕ್, ಲಕ್ಷ್ಮಣ, ಅಲ್ಲಮ ಯಶಸ್ವಿ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. `ಆಟಗಾರ’ ಚಿತ್ರದಲ್ಲಿ ಮೇಘನಾ ಮತ್ತು ಚಿರಂಜೀವಿ ಸರ್ಜಾ ಒಟ್ಟಾಗಿ ಅಭಿನಯಿಸಿದ್ದರು.

ನಟ ಅರ್ಜುನ್ ಸರ್ಜಾರವರ ಸಹೋದರಿ ಮಗ ಚಿರಂಜೀವಿ ಸರ್ಜಾ `ವಾಯುಪುತ್ರ’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟವರು. ನಂತರ ಗಂಡೆದೆ, ಚಿರು, ದಂಡಂ ದಶಗುಣಂ, ವರದನಾಯಕ, ರುದ್ರತಾಂಡವ ಹೀಗೆ ಹತ್ತಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

Click to comment

Leave a Reply

Your email address will not be published. Required fields are marked *