– ಪ್ರಯಾಣಿಕರ ಪರದಾಟ
ಬೆಳಗಾವಿ: ಬರಿದಾಗಿರುವ ಕೃಷ್ಣಾ ನದಿಗೆ ನೀರು ಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಹೀಗಾಗಿ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಇಂದು ಅಥಣಿ ಪಟ್ಟಣ ಬಂದ್‍ಗೆ ಕರೆ ನೀಡಲಾಗಿದೆ.
10ಕ್ಕೂ ಹೆಚ್ಚು ಸಂಘಟನೆಗಳಿಂದ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣ ಬಂದ್ ಕರೆ ನೀಡಲಾಗಿದೆ. ರೈತ ಪರ ಸಂಘಟನೆಗಳ ಜೊತೆಗೆ ಕನ್ನಡಪರ ಹಾಗೂ ದಲಿತ ಸಂಘಟನೆಗಳು ಕೂಡ ಈ ಬಂದ್‍ಗೆ ಬೆಂಬಲ ನೀಡುತ್ತಿವೆ. ನೀರಿಲ್ಲದೆ ಬರಿದಾಗಿರುವ ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಬಂದ್ ಮಾಡಲಾಗುತ್ತಿದೆ ಎಂದು ಸಂಘಟನೆಗಳು ತಿಳಿಸಿವೆ.
ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕೃಷ್ಣಾ ನದಿಗೆ 4 ಟಿಎಂಸಿ ನೀರು ಬಿಡಿಸುವಂತೆ ಬಂದ್ ಮೂಲಕ 10ಕ್ಕೂ ಹೆಚ್ಚು ಸಂಘಟನೆಗಳು ಆಗ್ರಹಿಸಿದೆ. ಕೃಷ್ಣೆಗೆ ನೀರು ಹರಿಸುವಂತೆ ಚಿಕ್ಕೋಡಿ ತಾಲೂಕಿನಲ್ಲೂ ಇಂದು ವಿವಿಧೆಡೆ ವಿವಿಧ ಸಂಘಟನೆಗಳು ರಸ್ತೆ ತಡೆದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಅಲ್ಲದೆ ಬಂದ್ ಹಿನ್ನೆಲೆ ನಸುಕಿನ ಜಾವದಿಂದಲೇ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.