Connect with us

Bengaluru City

ಮದ್ವೆ ವಾರ್ಷಿಕೋತ್ಸವದಂದು ಸುಮಲತಾ ಅಂಬರೀಶ್ ಭಾವನಾತ್ಮಕ ಪೋಸ್ಟ್

Published

on

ಬೆಂಗಳೂರು: ಇಂದು ದಿವಂಗತ ಹಿರಿಯ ನಟ ಅಂಬರೀಶ್ ಮತ್ತು ಸುಮಲತಾ ಅವರ 27ನೇ ಮದುವೆ ವಾರ್ಷಿಕೋತ್ಸವವಾಗಿದ್ದು, ಸುಮಲತಾ ಅವರು ತಮ್ಮ ಫೇಸ್ ಬುಕ್ ನಲ್ಲಿ ಅಂಬಿ ಪ್ರೀತಿಯ ಬಗ್ಗೆ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ.

”ಇಂದು ಮೊದಲ ಬಾರಿಗೆ ನೀವು ನನ್ನೊಂದಿಗಿಲ್ಲ. 27 ವರ್ಷಗಳ ಕಾಲ ನಿಮ್ಮಂತ ಸಿಂಹ ಹೃದಯದ ಜೊತೆ ನನ್ನ ಜೀವನವನ್ನು ಹಂಚಿಕೊಂಡಿದ್ದಕ್ಕೆ ನಾನು ನಿಜಕ್ಕೂ ಹೆಮ್ಮೆ ಪಡುತ್ತೇನೆ. ನೀವೇ ನನಗೆ ಸ್ಪೂರ್ತಿ, ಕೋಟಿಗಳಲ್ಲಿ ನೀವು ಒಬ್ಬರು” ಎಂದು ಬರೆದುಕೊಂಡಿದ್ದು ನಿಜಕ್ಕೂ ಕಣ್ಣೀರು ತರಿಸುವಂತಿದೆ.

ಪೋಸ್ಟ್ ನಲ್ಲೇನಿದೆ?:
ನನ್ನ ಪ್ರೀತಿಯ ಎ..
ಡಿಸೆಂಬರ್ 8. 27 ವರ್ಷಗಳ ನಮ್ಮ ವೈವಾಹಿಕ ಜೀವನ ಪಯಣದಲ್ಲಿ ಮೊದಲ ಬಾರಿಗೆ ನೀವು ನನ್ನೊಂದಿಗಿಲ್ಲ. ನಮ್ಮ ದಿನದಲ್ಲಿ. ನನ್ನ ಜಗತ್ತಿಗೆ ಮಾತ್ರ ನೀನು ಪ್ರಮುಖನಾಗಿರಲಿಲ್ಲ. ನೀವೇ ನನ್ನ ಜಗತ್ತಾಗಿದ್ರಿ. ನನ್ನ ಕೈ ಹಿಡಿದು ನಡೆಸಿದ್ದೀರಾ. ನಿಮ್ಮ ಹೃದಯದಲ್ಲಿ ಅದ್ಭುತ ಪ್ರೀತಿ ಇತ್ತು. ಅದು ನನ್ನೊಬ್ಬಳಿಗೆ ಮಾತ್ರವಲ್ಲ. ಲಕ್ಷಗಟ್ಟಲೆ ಜನರಿಗೆ ಆ ಪ್ರೀತಿ ಸಿಕ್ಕಿತ್ತು. ಅದೇ ಪ್ರೀತಿ ನನ್ನಲ್ಲೇ ತುಂಬಿಕೊಂಡಿತ್ತು. ಆ ಪ್ರೀತಿಯೇ ನನ್ನ ಬದುಕನ್ನು ಕೈ ಹಿಡಿದು ನಡೆಸಿದೆ. 27 ವರ್ಷಾನಾ? ನನ್ನ ಬದುಕು ಅಂತಾ ಆರಂಭವಾಗಿದ್ದೇ, ನೀನು ನನ್ನನ್ನು ಪ್ರೀತಿಸಿದ ಮೇಲೆ. ನಿಮ್ಮ ನಗು ನನ್ನನ್ನು ಅದೇ ಸಂತೋಷದಲ್ಲಿ ಮುಂದುವರಿಸಿದೆ. ಜಗತ್ತಿನ ಯಾವುದೇ ವಸ್ತು, ಯಾರೇ ಆಗಲಿ, ನಿನಗೆ ನನ್ನ ಮೇಲೆ ಇದ್ದ ಪ್ರೀತಿಯನ್ನು ಮುಚ್ಚಿಡಲು ಸಾಧ್ಯವಿಲ್ಲ. ಆ ನಿನ್ನ ಪ್ರೀತಿ ನನ್ನನ್ನು, ನನ್ನ ಬದುಕನ್ನು ಸುರಕ್ಷಿತವಾಗಿರುವಂತೆ ಮಾಡಿದೆ.

ಎಲ್ಲದರಿಂದ ನನ್ನನ್ನು ಕಾಪಾಡಿದೆ. ಯಾವ ರೀತಿ ಅಂದ್ರೆ. ತುಂಬಾ ಚಳಿ ಇದ್ದಾಗ. ಬೆಚ್ಚಗಿನ ಬ್ಲಾಂಕೆಟ್ ಹೊಂದುಕೊಂಡ ರೀತಿ. ಮಳೆಯಲ್ಲಿ ಬಿಸಿಲಲ್ಲಿ ಕಾಪಾಡುವ ದೊಡ್ಡ ಕೊಡೆಯಂತೆ ನನ್ನನ್ನು ಕಾಪಾಡಿದ್ದೀಯಾ. ಈ ಕ್ಷಣ ನೀನು ಎಲ್ಲಾದ್ರೂ ಇರು.. ಆದ್ರೆ ನನಗೆ ಗೊತ್ತು.. ನೀನು ನನ್ನನ್ನೇ ಹುಡುಕ್ತಿರ್ತೀಯಾ.. ಈಗಲೂ ನಿನಗೆ ನಮ್ಮ ಮಗನ ಬಗ್ಗೆ ಆತಂಕ ಇದೆ.. ಈಗಲೂ, ಇನ್ನು ಮುಂದೆಯೂ ನೀನು ನಮ್ಮನ್ನು ರಕ್ಷಿಸುತ್ತೀಯಾ.. ನನ್ನ ಸುತ್ತಲಿರುವ ಹಲವಾರು ಕಣ್ಣುಗಳಲ್ಲಿ ಈಗಲೂ ಕೂಡ ಆ ನಿನ್ನ ಪ್ರೀತಿಯ ಪ್ರತಿಬಿಂಬವನ್ನು ಕಾಣುತ್ತೇನೆ.. ಅದು ನನ್ನ ಮತ್ತು ಅಭಿಯನ್ನು ಆ ಕಣ್ಣುಗಳು ಹರಸುತ್ತಿರುತ್ತವೆ..

ಇನ್ಮುಂದೆ ಒಡೆದ ನನ್ನ ಹೃದಯ ಕಟ್ಟಿಕೊಳ್ಳಲು, ಸಂತೈಸಲು ಜೊತೆಗೆ ಮುಂದಿನ ದಾರಿಯಲ್ಲಿ ನಡೆಯಲು ನಿನ್ನ ಶಕ್ತಿ ಬೇಕು.. ನಿನ್ನಿಂದ ಆ ಶಕ್ತಿ ಬೇಕು.. ನೀನು ಕಟ್ಟಿದ ಆ ಸುಂದರ ಬದುಕು.. ನಿನ್ನ ಆದರ್ಶಗಳನ್ನು ಹಾಗೆ ಕೊನೆವರೆಗೂ ಉಳಿಸಿಕೊಳ್ಳಲು ನಿನ್ನ ಆಶೀರ್ವಾದ ಬೇಕು.. ನಾನು ಬದುಕಿರಲು ನಿನ್ನ ಪ್ರೀತಿ ನನಗೆ ಬೇಕೇ ಬೇಕು.. ನಾನು ಇನ್ಮುಂದೆ ಮುಂದೆ ಸಾಗಲು ಹೆಮ್ಮೆಯಿಂದ ಬದುಕಲು ನಿನ್ನ ಸ್ಪೂರ್ತಿಯಿಂದ ಮುನ್ನಡೆಯುತ್ತೇನೆ.. ನಿನ್ನ ಜೊತೆ ಹಂಚಿಕೊಂಡಿರುವ ಆ 27 ವರ್ಷಗಳಲ್ಲಿ ಸಿಂಹದ ಹೃದಯ.. ಅತ್ಯಧ್ಬುತ ಮಾನವೀಯ ಗುಣಗಳನ್ನು ಹೊಂದಿದ್ದ ಕೋಟಿಗೊಬ್ಬ ನೀನು..

ಎಂದೆಂದಿಗೂ ನನ್ನಜೊತೆಗಿರು..
ನಮ್ಮ ಬದುಕಲ್ಲಿ ನೀನು ಎಂದೆಂದಿಗೂ ಹೊಳೆಯುತ್ತಿರು..
ಮದುವೆ ವಾರ್ಷಿಕೋತ್ಸವದ ಶುಭಾಶಯಗಳು..

ಈ ಪತ್ರ ಓದಿದ್ರೆ ಎಂತವರಿಗೂ ಕಣ್ಣೀರು ಬರುತ್ತೆ. ರೆಬೆಲ್-ಸುಮಕ್ಕನ ಸುಮಧುರ ಪ್ರೀತಿಗೆ ಸೆಲ್ಯೂಟ್ ಹೊಡಿಬೇಕು ಅನ್ಸುತ್ತೆ.

ಪ್ರೊಫೈಲ್ ಚೇಂಚ್:
ಅಂಬರೀಶ್ ನಿಧನದ ನಂತರ ಅವರ ಅಂತಿಮ ವಿಧಿವಿಧಾನ ನಡೆಯುವ ವೇಳೆ ಇರಿಸಿದ್ದ ಫೋಟೋವನ್ನು ಸುಮಲತಾ ತಮ್ಮ ಫೇಸ್ ಬುಕ್ ಪ್ರೊಫೈಲ್ ಫೋಟೋವಾಗಿ ಬದಲಾಯಿಸಿದ್ದರು. ಅಲ್ಲದೇ ಕವರ್ ಫೋಟೋ ಆಗಿ ಮಲೇಷಿಯಾದಲ್ಲಿ ನಡೆದ 25ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂದರ್ಭದಲ್ಲಿ ತೆಗೆಸಿದ್ದ ಫೋಟೋವನ್ನು ಹಾಕಿದ್ದರು. ಇದೀಗ ಮತ್ತೆ ಅವರು ತಮ್ಮ ಪ್ರೊಫೈಲ್ ಫೋಟೋ ಚೇಂಜ್ ಮಾಡಿದ್ದು, ಮಲೇಷಿಯಾದಲ್ಲಿ ತೆಗೆದ ಫೋಟೋವನ್ನೇ ಎಡಿಟ್ ಮಾಡಿ ಅಪ್ ಡೇಟ್ ಮಾಡಿದ್ದಾರೆ.

ಫೋಟೋ ಜೊತೆ ತಾವು ಅಂಬರೀಶ್ ಜೊತೆ ಅಭಿನಯಿಸಿದ್ದ ಸಿನಿಮಾ ಹಾಡುಗಳನ್ನು ಪೋಸ್ಟ್ ಮಾಡಿ ಶೇರ್ ಮಾಡಿದ್ದಾರೆ. ‘ಹಾಂಗ್‍ಕಾಂಗ್‍ನಲ್ಲಿ ಏಜೆಂಟ್ ಅಮರ್’ ಸಿನಿಮಾ ‘ಹೆಲೋ ನನ್ನ ಪ್ರೇಯಸಿ’ ಎಂಬ ಹಾಡನ್ನು ಪೋಸ್ಟ್ ಮಾಡಿ ನನ್ನ ಫೇವರೆಟ್ ಎಂದು ಬರೆದುಕೊಂಡಿದ್ದಾರೆ. ಅದೇ ರೀತಿ ಅಂಬರೀಶ್ ಜೊತೆ ಅಭಿನಯಿಸಿದ್ದ ‘ತಾಯಿಗೊಬ್ಬ ಕರ್ಣ’ ಸಿನಿಮಾದ ‘ಅಂದ ಚಂದ ತಂದ ಕಲ್ಪನಾ’ ಹಾಡನ್ನು ಪೋಸ್ಟ್ ಮಾಡಿ’ ಇದು ನಮ್ಮ ಫೇವ್‍ರೆಟ್ ಸಾಂಗ್ ಎಂದು ಬರೆದುಕೊಂಡಿದ್ದಾರೆ. ಅದೇ ರೀತಿ ಬೇರೆ ಬೇರೆ ಸಿನಿಮಾದ ಹಾಡುಗಳನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.

1984 ರಲ್ಲಿ ಬಂದ ಕನ್ನಡ `ಆಹುತಿ’ ಸಿನಿಮಾದಲ್ಲಿ ಅಂಬರೀಶ್ ಹಾಗೂ ಸುಮಲತಾ ಅವರು ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಬಳಿಕ ಸುಮಾರು ಆರೇಳು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿಯ ಸ್ನೇಹ ಪ್ರೀತಿಗೆ ತಿರುಗಿ 1991 ರ ಡಿಸೆಂಬರ್ 8 ರಂದು ಮದುವೆಯಾಗಿದ್ದರು. 27 ವರ್ಷ ಸಂತಸದ ಸಂಸಾರ ನಡೆಸಿದ್ದ ಈ ಜೋಡಿ ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಮಲೇಷಿಯಾದಲ್ಲಿ ಆಚರಣೆ ಮಾಡಿ ಸಂಭ್ರಮಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *