ಮಂಡ್ಯ: ಲೋಕಸಭಾ ಚುನಾವಣೆಯ ಪ್ರಚಾರ ದಿನದಿಂದ ದಿನಕ್ಕೆ ಬಿರುಸು ಪಡೆಯುತ್ತಿದ್ದು, ಇಂದು ನಟ ಯಶ್ ಅವರು ತಮ್ಮ ಪ್ರಚಾರಕ್ಕೆ ಬ್ರೇಕ್ ತೆಗೆದುಕೊಳ್ಳುತ್ತಿದ್ದಾರೆ.
ಹೌದು. ನಟ ಯಶ್ ಅವರು ಸಿನಿಮಾ ಚಿತ್ರೀಕರಣ ನಿಮಿತ್ತ ಮಂಡ್ಯದಿಂದ ಬೆಂಗಳೂರಿಗೆ ಬಂದಿದ್ದಾರೆ. ಹೀಗಾಗಿ ಒಂದು ದಿನ ಪ್ರಚಾರಕ್ಕೆ ಬ್ರೇಕ್ ಹಾಕಲಿದ್ದಾರೆ. ಬುಧವಾರ ರಾತ್ರಿವರೆಗೂ ಮದ್ದೂರಿನ ಟೌನ್‍ನಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಯಶ್ ಪ್ರಚಾರ ಮಾಡಿದ್ದರು.
ಕತ್ತಲಾದರೂ ಅಭಿಮಾನಿಗಳು ನಟ ಯಶ್ ನೋಡಲು ಕಾದು ಕುಳಿತಿದ್ದರು. ಓಲ್ಡ್ ಎಂ.ಸಿ ರಸ್ತೆಯಲ್ಲಿ ಪ್ರಚಾರವನ್ನು ಮುಗಿಸಿದ್ದರು. ಯಶ್ ನಿನ್ನೆ ಸುಮಾರು 20ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ಕೊಟ್ಟು ಸುಮಲತಾ ಪರ ಮತಯಾಚನೆ ಮಾಡಿದ್ದಾರೆ.
ಸುಮಲತಾ ಪರ ದರ್ಶನ್ ಇಂದೂ ಕೂಡ ಮತಯಾಚನೆ ಮಾಡಲಿದ್ದಾರೆ. ದರ್ಶನ್ ಕೆ.ಆರ್ ಪೇಟೆ ಟೌನ್ ಮತ್ತು ಸುತ್ತಮುತ್ತಲ ಸುಮಾರು 15 ಗ್ರಾಮಗಳಲ್ಲಿ ಸುಮಲತಾ ಅಂಬರೀಶ್ ಪರ ರೋಡ್ ಶೋ ನಡೆಸಲಿದ್ದಾರೆ. ಕಳೆದ ದಿನ ದರ್ಶನ್ ಇಡೀ ದಿನ ಕೆ.ಆರ್. ನಗರ ತಾಲೂಕಿನ 30 ಗ್ರಾಮಗಳಲ್ಲಿ ಪ್ರಚಾರ ನಡೆಸಿದ್ದರು. ಇತ್ತ ನಾಗಮಂಗಲ ತಾಲೂಕಿನ ಹಲವೆಡೆ ಮಧ್ಯಾಹ್ನ ಸುಮಲತಾ ಪ್ರಚಾರ ನಡೆಸಲಿದ್ದಾರೆ.