ಅಸಲಿ ರಾಮಾಯಣ (Ramayana) ಮತ್ತೆ ಮೆರವಣಿಗೆ ಹೊರಡಲಿದೆ. ಕೆಲವೇ ದಿನಗಳಲ್ಲಿ ರಮಾನಂದ್ ಸಾಗರ್ ನಿರ್ದೇಶನದ ರಾಮಾಯಣವನ್ನು ಜಗತ್ತಿನ ಭಾರತಿಯೆಲ್ಲರೂ ನೋಡಲಿದ್ದಾರೆ. ಮೂವತ್ತಾರು ವರ್ಷಗಳ ಹಿಂದೆ ನಿರ್ಮಾಣವಾದ ರಾಮಾಯಣ ಈಗಲೂ ಜನರ ಮನದಲ್ಲಿ ತಳಿರು ತೋರಣ. ಇದೇ ಹೊತ್ತಲ್ಲಿ ಆದಿಪುರುಷ್ (Adipurush) ನಿರ್ಮಾಣವಾಗಿ ಎಲ್ಲರಿಂದ ಟೀಕೆಗೆ ಒಳಪಟ್ಟಿದೆ. ನಮ್ಮ ರಾಮ, ಸೀತೆ, ರಾವಣ ಹೇಗಿರಬೇಕು ಎನ್ನುವುದನ್ನು ಪ್ರಭಾಸ್‌ಗೆ ತೋರಿಸಲು ಮರು ಪ್ರಸಾರ ಆಗುತ್ತಿದೆ ಎನ್ನುವ ಮಾತಿದೆ.
ರಾಮಾಯಣ. ಹೀಗಂದರೆ ಸಾಕು ಈಗಲೂ ಆ ದಿನಗಳು ನೆನಪಾಗುತ್ತವೆ. ಸುಮಾರು ಮೂವತ್ತಾರು ವರ್ಷಗಳ ಹಿಂದೆ ಭಾರತಿಯರ ಪಾಲಿಗೆ ದೈವಸ್ವರೂಪಿಯಂತೆ ಕಾಣಿಸಿದ ರಮಾನಂದ್ ಸಾಗರ್ ನಿರ್ದೇಶನದ ಆ ಮಹಾ ಧಾರಾವಾಹಿ (Serial). 1987ರಲ್ಲಿ ಅಂದಿನ ದೂರದರ್ಶನದಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ ಪ್ರಸಾರವಾಗುತ್ತಿತ್ತು. ಆಗ ಈಗಿನಷ್ಟು ಟಿವಿ ಮತ್ತು ಚಾನೆಲ್‌ಗಳು ಇರಲಿಲ್ಲ. ಒಂದು ಮನೆಯಲ್ಲಿ ಟಿವಿ ಇದ್ದರೆ ಅವರು ಶ್ರೀಮಂತರು ಎಂದು ಭಾವಿಸುವ ದಿನಮಾನ ಅವು. ಕಪ್ಪು ಬಿಳುಪು ಹಾಗೂ ಕಲರ್ ಟಿವಿಗಳಲ್ಲಿ ರಾಮಾಯಣ ನೋಡಲು ಜನರು ಮುಗಿ ಬೀಳುತ್ತಿದ್ದರು. ಬರೀ ಕತೆ ನೋಡಲು ಅಲ್ಲ, ಅಲ್ಲಿಯ ಶ್ರೀರಾಮಚಂದ್ರ ಹಾಗೂ ಸೀತಾದೇವಿಯನ್ನು ಕಣ್ಣು ತುಂಬಿಕೊಂಡು ಕೈ ಮುಗಿಯುತ್ತಿದ್ದರು.
ಭಾನುವಾರ ಬೆಳಿಗ್ಗೆ ಹತ್ತು ಗಂಟಗೆ ದೇಶದ ಬೀದಿ ಬೀದಿಗಳು ಭಣಗುಡುತ್ತಿದ್ದವು. ಮುಂಜಾನೆದ್ದು ಹೆಂಗಸರು ಮನೆ ಮಂದಿಗೆಲ್ಲ ತಿಂಡಿ ವ್ಯವಸ್ಥೆ ಮಾಡಿ, ಒಂಬತ್ತೂವರೆಗೆ ಟಿವಿ ಮುಂದೆ ಹಾಜರಾಗುತ್ತಿದ್ದರು. ಕೆಲವರು ಟಿವಿ ಪರದೆಗೆ ಪೂಜೆ ಮಾಡುತ್ತಿದ್ದರು. ಹೂವಿನ ಹಾರ ಹಾಕಿ, ದೀಪ ಬೆಳಗಿ, ಆರತಿ ಎತ್ತಿ ಶ್ರೀರಾಮ ಹಾಗೂ ಸೀತಾದೇವಿಯನ್ನು ಬರಮಾಡಿಕೊಳ್ಳುತ್ತಿದ್ದರು. ಅದು ಆ ರಾಮಾಯಣಕ್ಕೆ ಇದ್ದ ಗತ್ತು ಹಾಗೂ ಗೌರವ. ರಾಮಾಯಣ ಪ್ರಸಾರ ಆಗುತ್ತಿದ್ದ ಹೊತ್ತಿಗೆ ವಿದ್ಯುತ್ ಕೂಡ ತೆಗೆಯುತ್ತಿರಲಿಲ್ಲ. ಅಕಸ್ಮಾತ್ ತೆಗೆದರೆ ಮುಗಿಯಿತು. ಕೆಲವು ಕಡೆ ವಿದ್ಯುತ್ ಸರಬರಾಜು ಕಚೇರಿಗೆ ಮುತ್ತಿಗೆ ಹಾಕಿ ಗಲಾಟೆ ಕೂಡ ನಡೆಯುತ್ತಿದ್ದವು. ರಾಮಾಯಣ ಅಷ್ಟೊಂದು ಮೋಡಿ ಮಾಡಿತ್ತು. ಇದನ್ನೂ ಓದಿ:ಕಾರವಾರದಲ್ಲಿ ಬದುಕಿದ್ದ ವಿಲಕ್ಷಣ ವ್ಯಕ್ತಿಯ ಕಥೆಯೇ ‘ಟೋಬಿ’ : ಗುಟ್ಟು ರಟ್ಟು
ರಮಾನಂದ್ ಸಾಗರ್ ಅದ್ಯಾವ ಗಳಿಗೆಯಲ್ಲಿ ರಾಮಾಯಣವನ್ನು ನಿರ್ದೇಶಿಸಲು ಮನಸು ಮಾಡಿದರೋ ಏನೊ? ಅವರು ಅಲ್ಲಿವರೆಗೆ ಮಾಡಿದ ಸಿನಿಮಾ ಕೆಲಸಗಳು ಮರೆತು ಹೋದವು. ರಾಮಾಯಣ ಮಾತ್ರ ಅವರಿಗೆ ಕೊನೇವರೆಗೂ ದೇಶವ್ಯಾಪಿ ಮೆರವಣಿಗೆ ಮಾಡಿದವು. ಅದಕ್ಕೆ ಕಾರಣ ಅವರು ಕತೆಯನ್ನು ಹೇಳಿದ ರೀತಿ ಮಾತ್ರ ಅಲ್ಲ, ಪ್ರತಿಯೊಂದು ಪಾತ್ರಕ್ಕೂ ಆಯ್ಕೆ ಮಾಡಿಕೊಂಡಿದ್ದ ಕಲಾವಿದರೂ ಕಾರಣ. ರಾಮನಾಗಿ ಅರುಣ್ ಗೋವಿಲ್, ಸೀತೆಯಾಗಿ ದೀಪಿಕಾ ಚಿಕ್ಲಿಯಾ, ರಾವಣನಾಗಿ ಅರವಿಂದ್ ತ್ರಿವೇದಿ ಹಾಗೂ ಹನುಮಂತನಾಗಿ ಧಾರಾಸಿಂಗ್ ಜೀವ ತುಂಬಿದ್ದರು. ಪೌರಾಣಿಕ ಪಾತ್ರಗಳು ಹೀಗೆ ಇದ್ದಿರಬೇಕೆನ್ನುವಷ್ಟು ಭಕ್ತಿ ಮೂಡಿಸಿದ್ದವು.
ಮೂವತ್ತಾರು ವರ್ಷ. ಆಗ ಈಗಿನಷ್ಟು ತಂತ್ರಜ್ಞಾನ ಬೆಳೆದಿರಲಿಲ್ಲ. ಗ್ರೀನ್ ಮ್ಯಾಟ್, ವಿಎಫ್‌ಎಕ್ಸ್ ಇತ್ಯಾದಿ ಹೆಸರುಗಳೇ ಗೊತ್ತಿರಲಿಲ್ಲ. ಎಲ್ಲವನ್ನೂ ಕ್ಯಾಮೆರಾ ಟೆಕ್ನಿಕ್‌ನಿಂದ ಮಾಡಬೇಕಿತ್ತು. ಅಂಥ ಕ್ಯಾಮೆರಾಮನ್ ಕೂಡ ಇದ್ದರು. ರಾಮಾಯಣದಲ್ಲಿ ಎಂತೆಂಥ ಪವಾಡ ಸದೃಶ್ಯ ದೃಶ್ಯಗಳು ಬರುತ್ತವೆಂದು ಎಲ್ಲರಿಗೂ ಗೊತ್ತು. ಯುದ್ಧ, ಕಲ್ಲಿನಿಂದ ಸೇತುವೆ ಕಟ್ಟುವುದು, ಹನುಮಂತ ಬೆಟ್ಟವನ್ನು ಹೊತ್ತುಕೊಳ್ಳುವುದು, ಲಂಕಾ ದಹನ, ವಾನರ ಸೇನೆಯ ಕದನ ಪ್ರತಿಯೊಂದಕ್ಕೂ ಕ್ಯಾಮೆರಾ ಟೆಕ್ನಿಕ್‌ನಿಂದ ಮಾಡಿದ್ದರು ರಮಾನಂದ್ ಸಾಗರ್.
ಇಷ್ಟು ವರ್ಷಗಳ ನಂತರ ಅದೇ ಬೆಸ್ಟ್ ಎನ್ನುವಂತಿದೆ. ಹೀಗಾಗಿಯೇ ರಾಮಾಯಣ ಮರು ಪ್ರಸಾರ ಆಗುತ್ತಿದೆ. ಶಮೋರೋ ಚಾನೆಲ್‌ನಲ್ಲಿ ಜುಲೈ 3ರಿಂದ ದಿಬ್ಬಣ ಹೊರಡಲಿದೆ. ಏಕಾಏಕಿ ಈಗ್ಯಾಕೆ ರಾಮಾಯಣ ಮರು ಪ್ರಸಾರ ಮಾಡುತ್ತಿದ್ದಾರೆ? ಏನಿದರ ಹಿಂದಿನ ಉದ್ದೇಶ? ಪ್ರಶ್ನೆ ಏಳುವುದು ಸಹಜ. ಉತ್ತರ ಇಲ್ಲಿದೆ. ಇತ್ತೀಚೆಗೆ ತೆರೆ ಕಂಡ ಪ್ರಭಾಸ್ (Prabhas) ಅಭಿನಯದ ಆದಿಪುರುಷ್ ಯಾವ ಪರಿ ಉಗಿಸಿಕೊಂಡಿತೆಂದು ಎಲ್ಲರಿಗೂ ಗೊತ್ತು. ಐದು ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಆದಿಪುರುಷ್ ಇಡೀ ರಾಮಾಯಣದ ಕತೆ ಹಾಗೂ ಪಾತ್ರಗಳನ್ನು ವಿರೂಪಗೊಳಿಸಿತು. ರಾಮನ ಸೆಟ್ ಪ್ರಾಪರ್ಟಿಯಂಥ ಮುಖ, ರಾವಣನ ವಿಕಾರ ಹೇರ್ ಕಟ್, ಸಂಭಾಷಣೆ, ಹಾಲಿವುಡ್ ಹನುಮಂತ ಎಲ್ಲವೂ ನೆಗಪಾಟಲಿಗೆ ಈಡಾದವು. ಅದಕ್ಕೆ ಉತ್ತರವಾಗಿ ರಮಾನಂದ್ ಸಾಗರ್ (Ramanand Sagar) ರಾಮಾಯಣ ಪ್ರಸಾರ ಆಗುತ್ತಿದೆ ಎಂದು ಹೇಳಲಾಗುತ್ತಿದೆ.
ಐದು ನೂರು ಕೋಟಿ ಕಾಸು ಸುರಿದರೂ ಆದಿಪುರುಷ್ ಬಂಡವಾಳವನ್ನೂ ಬಾಚಿಕೊಳ್ಳಲಿಲ್ಲ. ಪ್ರಭಾಸ್‌ಗೆ ಹೆಚ್ಚು ಕಮ್ಮಿ ನೂರರಿಂದ ನೂರೈವತ್ತು ಕೋಟಿ ಗಂಟು ಮಡಗಿದ್ದಾರೆ. ಆದರೆ ಅವರ ಕಾಲ್‌ಶೀಟ್ ಕೇವಲ ಅರವತ್ತು ದಿನ. ಅಂದರೆ ಗ್ರೀನ್ ಮ್ಯಾಟ್ ಹಾಗೂ ಡ್ಯೂಪ್ ಬಳಸಿ ರಾಮನ ಪಾತ್ರದ ದೃಶ್ಯಗಳನ್ನು ಶೂಟ್ ಮಾಡಿದ್ದಾರೆ ನಿರ್ದೇಶಕ ಓಂರೌತ್. ಕಾರ್ಟೂನ್‌ನಂತಿರುವ ಗ್ರಾಫಿಕ್ಸ್, ಮಾಸ್ ಮಸಾಲಾ ಡೈಲಾಗ್ಸ್ ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಚಿತ್ರಕತೆ ಆವರಿಸಿಕೊಳ್ಳಬೇಕಿದ್ದ ಭಕ್ತಿಭಾವವೇ ಮಾಯ. ಇದೆಲ್ಲ ಸೇರಿ ಆದಿಪುರುಷ್‌ಗೆ ಇಡೀ ವಿಶ್ವವೇ ಮಹಾ ಮಂಗಳಾರತಿ ಮಾಡುವಂತಾಯಿತು. ನೆನಪಿರಲಿ, ಆ ರಾಮಾಯಣ ಧಾರಾವಾಹಿ ಒಂಬತ್ತು ಲಕ್ಷದಲ್ಲಿ ನಿರ್ಮಾಣವಾಗಿತ್ತು.
ತೀರಾ ಕಮ್ಮಿ ಬಜೆಟ್‌ನಲ್ಲಿ ನಿರ್ಮಾಣವಾದ ಆ ರಾಮಾಯಣ ದೂರದರ್ಶನಕ್ಕೆ ನಲವತ್ತು ಲಕ್ಷ ಲಾಭ ತಂದು ಕೊಟ್ಟಿತು. ಸುಮಾರು ಅರವತ್ತು ಕೋಟಿ ಜನರು ಇದನ್ನು ನೋಡಿದ್ದರು. ರಾಮನಾಗಿದ್ದ ಅರುಣ್ ಗೋವಿಲ್ ಹಾಗೂ ಸೀತೆ ಪಾತ್ರದ ದೀಪಿಕಾ ಚಿಕ್ಲಿಯಾ ನಿಜಕ್ಕೂ ಅಭಿನವ ರಾಮ-ಸೀತೆಯಾಗಿ ಭಾರತಿಯರ ಮುಂದೆ ನಿಂತರು. ಅರುಣ್ ಮತ್ತು ದೀಪಿಕಾ ಎಲ್ಲೇ ಹೋದರೂ ಜನರು ಅವರ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಿದ್ದರು. ಕೊರೋನಾ ನಂತರ ಅರುಣ್ ಗೋವಿಲ್ ವಿಮಾನ ನಿಲ್ದಾಣದಲ್ಲಿ ನಿಂತಾಗ ವಯಸ್ಸಾದ ಮಹಿಳೆ ‘ನೀನೇ ರಾಮ’ ಎಂದು ಕಾಲು ಮುಗಿದಿದ್ದು ಯಾರೂ ಮರೆತಿಲ್ಲ. ಅದು ರಾಮಾಯಣದ ನಿಜವಾದ ಗೆಲುವು, ಸಾಧನೆ.
Web Stories