– ಹೊಸ ಕಲ್ಪನೆಗೆ ಲಭಿಸಿತು ರಾಷ್ಟ್ರ ಮಟ್ಟದಲ್ಲಿ ಬಹುಮಾನ
ಚೆನ್ನೈ: ಅನಾರೋಗ್ಯದಿಂದ ಹಾಸಿಗೆ ಹಿಡಿದ ಪತ್ನಿಗಾಗಿ ಕಾರ್ಮಿಕರೊಬ್ಬರು ರಿಮೋಟ್ ಸಹಾಯದಿಂದ ಕಾರ್ಯ ನಿರ್ವಹಿಸುವ ಟಾಯ್ಲೆಟ್ ಬೆಡ್ ತಯಾರಿಸಿದ್ದು, ಈ ಹೊಸ ಕಲ್ಪನೆಗೆ ರಾಷ್ಟ್ರೀಯ ಆವಿಷ್ಕಾರ ಸಂಸ್ಥೆ ನಡೆಸಿದ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಲಭಿಸಿದೆ.
ಚೆನ್ನೈ ಮೂಲದ ಎಸ್. ಸರವಣ ಮತು ಅವರು ತಮ್ಮ ಪತ್ನಿಗಾಗಿ ಈ ಹೊಸ ಆವಿಷ್ಕಾರವನ್ನು ಮಾಡಿದ್ದಾರೆ. ಸರವಣ ಅವರು ವೆಲ್ಡಿಂಗ್ ಕೆಲಸವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಅವರ ಪತ್ನಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಇದನ್ನು ಕಂಡು ಮನನೊಂದ ಪತಿ, ಪತ್ನಿಗಾಗಿ ರಿಮೋಟ್ ಕಂಟ್ರೋಲ್ ಬೆಡ್ ಕಂಡುಹಿಡಿದಿದ್ದಾರೆ.
Advertisement
Advertisement
ಈ ಬೆಡ್ ಗೆ ಫ್ಲಶ್ ಟ್ಯಾಂಕ್, ಕ್ಲೋಸೆಟ್ ಹಾಗೂ ಸೆಪ್ಟಿಕ್ ಟ್ಯಾಂಕ್‍ಗಳನ್ನು ಅಳವಡಿಸಲಾಗಿದೆ. ಹಾಗೆಯೇ ಬೆಡ್ ಮಧ್ಯದಲ್ಲಿ ಸ್ವಲ್ಪ ಜಾಗವನ್ನು ಬಿಡಲಾಗಿದೆ. ಅಲ್ಲದೆ ಈ ಬೆಡ್‍ಗೆ ಮೂರು ಬಟನ್‍ಗಳಿರುವ ರಿಮೋಟ್ ಇದ್ದು, ಮೊದಲ ಬಟನ್ ಒತ್ತಿದರೆ ಬೆಡ್‍ನ ಬೇಸ್ ತೆರೆದುಕೊಳ್ಳುತ್ತದೆ. ಎರಡನೇ ಬಟನ್ ಒತ್ತಿದರೆ ಕ್ಲೋಸೆಟ್ ತೆರೆದುಕೊಳ್ಳುತ್ತದೆ. ಬಳಿಕ ಮೂರನೇ ಬಟನ್ ಒತ್ತಿದರೆ ಅದರಷ್ಟಕ್ಕೆ ಟಾಯ್ಲೆಟ್ ಫ್ಲಶ್ ಆಗುತ್ತದೆ.
Advertisement
Advertisement
ಈ ರಿಮೋಟ್ ಕಂಟ್ರೋಲ್ ಬೆಡ್ ತಯಾರಿಸಲು ಸರವಣ ತಮ್ಮ ಸೈಟನ್ನು ಮಾರಿದ್ದಾರೆ. ಅಲ್ಲದೆ ಈ ಬಗ್ಗೆ ಹೆಚ್ಚಿನ ಜ್ಞಾನ ಪಡೆಯಲು ಅಬ್ದುಲ್ ಕಲಾಂ ನಿಧನರಾಗುವ ಮೊದಲು ಅವರನ್ನು ಕೂಡ ಭೇಟಿ ಮಾಡಿ ಮಾಹಿತಿ ಪಡೆದಿದ್ದರು. ಈ ವಿಚಾರವನ್ನು ತಿಳಿದ ಕಲಾಂ ಅವರು ಈ ಹೊಸ ಕಲ್ಪನೆ ಬಗ್ಗೆ ಮಾಹಿತಿಯನ್ನು ರಾಷ್ಟ್ರೀಯ ಆವಿಷ್ಕಾರ ಸಂಸ್ಥೆ ನಡೆಸುವ ಸ್ಪರ್ಧೆಗೆ ಕಳುಹಿಸುವಂತೆ ಸೂಚಿಸಿದ್ದರು.
ಬಳಿಕ ಸತತ ಒಂದು ವರ್ಷದ ಪರಿಶ್ರಮದ ಪರಿಣಾಮವಾಗಿ ಸರವಣ ಅವರು ಪತ್ನಿಗಾಗಿ ರಿಮೋಟ್ ಕಂಟ್ರೋಲ್ ಟಾಯ್ಲೆಟ್ ಬೆಡ್ ತಯಾರಿಸಿದ್ದಾರೆ. ಹಾಗೆಯೇ ಇದೇ ಮಾರ್ಚ್ 15ರಂದು ರಾಷ್ಟ್ರೀಯ ಆವಿಷ್ಕಾರ ಸಂಸ್ಥೆ ನಡೆಸಿದ್ದ ಸ್ಪರ್ಧೆಯಲ್ಲಿ ಹೊಸ ಕಲ್ಪನೆಗೆ ಎರಡನೇ ಬಹುಮಾನ ಬಂದಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸರವಣ ಅವರಿಗೆ ಬಹುಮಾನ ವಿತರಿಸಿ ಗೌರವಿಸಿದರು.