ನವದೆಹಲಿ: ಚಲಿಸುತ್ತಿದ್ದ ರೈಲಿನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಸೈನ್ಯದ ಅಧಿಕಾರಿಯಿಂದ ತಪ್ಪಿಸಿಕೊಳ್ಳಲು ಮಹಿಳೆಯೊಬ್ಬರು ಶೌಚಾಲಯದಲ್ಲಿ ಪ್ರಯಾಣಿಸಿದ ಘಟನೆ ದೆಹಲಿಯಿಂದ ರಾಜಸ್ತಾನ ಹೊರಡುವ ದುರಂತೋ ಎಕ್ಸ್ ಪ್ರೆಸ್ ರೈಲಿನಲ್ಲಿ ಶನಿವಾರ ನಡೆದಿದೆ.
ಮಹಿಳೆಯು ಕೋಟಾದಿಂದ ನವದೆಹಲಿಯ ಹಜರತ್ ನಿಜಾಮ್ ಉದ್ದಿನ್ ರೈಲು ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದು, ಅವರ ಜೊತೆ ಕುಟುಂಬದವರು ಇರಲಿಲ್ಲ. ಈ ವೇಳೆ ಆರ್ಮಿ ಸುಬೆದಾರ್ ಒಬ್ಬ ಪರಿಶೀಲನೆ ನಡೆಸುವ ನೆಪದಲ್ಲಿ ಅಸಭ್ಯವಾಗಿ ಸ್ಪರ್ಶಿಸಿದ್ದಾನೆ.
ಬೆಳಿಗ್ಗೆ ರೈಲು ದೆಹಲಿ ತಲುಪುತ್ತಿದ್ದಂತೆ, ಮಹಿಳೆಯು ರೈಲಿನಿಂದ ಹೊರಬಂದು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು 48 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯು ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಹಾಗೂ ಆತನ ಸ್ನೇಹಿತರೊಂದಿಗೆ ಮದ್ಯ ಸೇವನೆ ಮಾಡುತ್ತಿದ್ದನು. ಹೀಗಾಗಿ ಆತನನಿಂದ ತಪ್ಪಿಸಿಕೊಳ್ಳಲು ಶೌಚಾಲಯದ ಒಳಗೆ ಹೋಗಿ ಲಾಕ್ ಮಾಡಿಕೊಂಡು ಪ್ರಯಾಣಿಸಿದ್ದಾಗಿ ಮಹಿಳೆಯು ಪೊಲೀಸರಿಗೆ ತಿಳಿಸಿದ್ದಾರೆ.