ಉಡುಪಿ: ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನದಿಂದ ಶುಕ್ರವಾರ ಬಿಡುಗಡೆಯಾಗಲಿದ್ದಾರೆ. ಅಭಿನಂದನ್ ಬಿಡುಗಡೆ ಸಂಬಂಧ ರಾಜ್ಯದ ಹಲವು ಕಡೆ ಪೂಜೆ ಪುನಸ್ಕಾರಗಳು ನಡೆದಿತ್ತು.
ಕೋಲಾರ, ಕೊಪ್ಪಳ, ಬೆಂಗಳೂರು, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಯೋಧ ವಾಪಾಸ್ ಭಾರತಕ್ಕೆ ಬರಲಿ ಎಂದು ಪೂಜೆ ಪ್ರಾರ್ಥಿಸಿದ್ದರು. ಹಾಗೆಯೇ ಯೋಧರಿಗಾಗಿ ಉಡುಪಿಯ ಕೃಷ್ಣಮಠದಲ್ಲಿ ಕೂಡ ವಿಶೇಷ ಪೂಜೆ ನೆರವೇರಿಸಲಾಗಿದ್ದು, ಪರ್ಯಾಯ ಪಲಿಮಾರು ಸ್ವಾಮೀಜಿಗಳು ಮಧ್ಯಾಹ್ನದ ಮಹಾಪೂಜೆಯಲ್ಲಿ ಅಭಿಷೇಕ ಮತ್ತು ಲಕ್ಷ ತುಳಸಿ ಅರ್ಪಣೆ ವೇಳೆ ಕೃಷ್ಣನಲ್ಲಿ ಸ್ವಾಮೀಜಿ ಅಭಿನಂದನ್ ಅವರಿಗಾಗಿ ಪ್ರಾರ್ಥಿಸಿದ್ದರು. ಇದನ್ನೂ ಓದಿ:ಭಾರತಕ್ಕೆ ರಾಜತಾಂತ್ರಿಕ ಜಯ – ಶುಕ್ರವಾರ ಪೈಲಟ್ ಅಭಿನಂದನ್ ಬಿಡುಗಡೆ
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪಲಿಮಾರು ವಿದ್ಯಾಧೀಶ ಶ್ರೀಗಳು, ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ಒಂದು ದಿಟ್ಟ ಹೆಜ್ಜೆ ಎಂದಿದ್ದಾರೆ. ಇದರಿಂದ ಸೇನೆಯ ಬಗ್ಗೆ ತುಂಬ ಅಭಿಮಾನ ಮೂಡಿದೆ. ಪಾಕಿಸ್ತಾನ ಅಭಿನಂದನ್ ವರ್ಧಮಾನ್‍ರನ್ನು ಬಂಧಿಸಿರುವುದು ಕಾನೂನು ಬಾಹಿರ. ಪಾಕ್ ಅವರನ್ನು ಶೀಘ್ರ ಬಿಡುಗಡೆ ಮಾಡಲಿ. ಜರಾಸಂಧನ ಸೆರೆಮನೆಯಲ್ಲಿಟ್ಟ ರಾಜಕುಮಾರರನ್ನು ಶ್ರೀಕೃಷ್ಣ ಬಿಡಿಸಿದ್ದ. ನರಕಾಸುರನನ್ನು ವಧೆ ಮಾಡಿ ರಾಜಕುಮಾರಿಯರನ್ನು ಸೆರೆಯಿಂದ ಬಿಡಿಸಿದ್ದ ಹಾಗೆಯೇ ದೇವರ ಕೃಪೆ ಯೋಧರ ಮೇಲೆ ಇದೆ ಅವರು ಕೂಡ ಸುರಕ್ಷಿತವಾಗಿ ವಾಪಾಸ್ ಬರುತ್ತಾರೆ ಎಂದಿದ್ದರು.
ಪಾಕಿಸ್ತಾನದ ಮೇಲೆ ಯುದ್ಧ ಬೇಡ. ನೇರ ಯುದ್ಧದಿಂದ ಮಾನವ ಜನಾಂಗದ ನಾಶವಾಗುತ್ತದೆ. ಸರ್ಜಿಕಲ್ ಸ್ಟ್ರೈಕ್ ಮೂಲಕವೇ ಉಗ್ರರ ನಾಶವಾಗಬೇಕು. ಉಗ್ರರಿರುವ ಅಡಗುದಾಣಗಳನ್ನು ಹುಡುಕಿ ದಾಳಿ ಮಾಡಬೇಕು ಎಂದು ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv