ನವದೆಹಲಿ: ಲೋಕಸಭಾ ಚುನಾವಣೆಗೆ ಪಕ್ಷಗಳು ಸಜ್ಜಾಗುತ್ತಿದ್ದು, ಗೆಲುವು ಸಾಧಿಸುವುದು ಹೇಗೆ ಎಂಬುದರ ಬಗ್ಗೆ ರಾಜಕೀಯ ತಂತ್ರಗಳನ್ನು ರೂಪಿಸುತ್ತಿವೆ. ಕಾಂಗ್ರೆಸ್ ಹೈಕಮಾಂಡ್ ಸಹ ಸಭೆಯ ಮೇಲೆ ಸಭೆಗಳನ್ನು ನಡೆಸುತ್ತಿದ್ದರೆ, ಇತ್ತ ಬಿಜೆಪಿ ದೇಶದಲ್ಲಿಯ ಮಂದಿರ, ಮಠ, ಆಶ್ರಮಗಳಿಗೆ ಸಂಬಂಧಪಟ್ಟ ಅಂಕಿ ಅಂಶಗಳನ್ನು ಸಂಗ್ರಹಿಸುತ್ತಿದೆ ಎಂದು ವರದಿಯಾಗಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವ ಉದ್ದೇಶದಿಂದ ಸಕಲ ತಯಾರಿಗಳನ್ನು ಮಾಡಿಕೊಳ್ಳಲು ಬಿಜೆಪಿ ಕಚೇರಿಯಲ್ಲಿ ಸಭೆಗಳು ನಡೆಯುತ್ತಿವೆ. ಹಿಂದೂ ವೋಟ್ ಗಳನ್ನು ಕೇಂದ್ರೀಕರಿಸಿರುವ ಬಿಜೆಪಿ ಚುನಾವಣೆ ಸಮಯದಲ್ಲಿ ಮತಗಳ ವಿಭಜನೆಗೊಳ್ಳದಂತೆ ಎಚ್ಚರಿಕೆ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಕೇಂದ್ರ ಕಚೇರಿಯಲ್ಲಿ ಇದೇ ತಿಂಗಳು ಸಭೆ ನಡೆಯಲಿವೆ ಎನ್ನಲಾಗುತ್ತಿದೆ. ಸಭೆಗೂ ಮುನ್ನ ಬಿಜೆಪಿ ನಾಯಕರು ತಮ್ಮ ರಾಜ್ಯದಲ್ಲಿ ಬರುವ ಪ್ರಸಿದ್ಧ ಮಠ, ದೇವಾಲಯ, ಆಶ್ರಮ ಸೇರಿದಂತೆ ಇತರೆ ಧಾರ್ಮಿಕ ಕೇಂದ್ರಗಳ ಅಂಕಿ ಅಂಶಗಳನ್ನು ಸಂಗ್ರಹಿಸುತ್ತಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
Advertisement
Advertisement
ರಣತಂತ್ರವೇನು?:
ಎಲ್ಲ ಧಾರ್ಮಿಕ ಕೇಂದ್ರಗಳ ಅಂಕಿ ಅಂಶಗಳು ದೊರೆತ ಮೇಲೆ ಸ್ಥಳಕ್ಕನುಗುಣವಾಗಿ ವಿಭಾಗಿಸುವುದು. ಬೂತ್ ಗಳಿಗೆ ಅನುಗುಣವಾಗಿ ಧಾರ್ಮಿಕ ಕೇಂದ್ರಗಳ ವಿಂಗಡನೆ ಬಳಿಕ ಅಲ್ಲಿಯ ಅರ್ಚಕ ಅಥವಾ ಪ್ರಧಾನ ವ್ಯವಸ್ಥಾಪಕ ಅಥವಾ ಆಡಳಿತ ಮಂಡಳಿ ಮುಖಂಡರ ಫೋನ್ ನಂಬರ್ ಕಲೆ ಹಾಕುವುದು. ಎಲ್ಲ ಧಾರ್ಮಿಕ ಕೇಂದ್ರಗಳ ಪ್ರಮುಖರ ಫೋನ್ ನಂಬರ್ ಸಂಗ್ರಹಿಸಿದ ಬಳಿಕ ಎಲ್ಲರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲು ಬಿಜೆಪಿ ಈಗಾಗಲೇ 29 ಲಕ್ಷ ಕಾರ್ಯಕರ್ತರನ್ನ ನೇಮಿಸಿದೆ. ಈ ಎಲ್ಲ ಕಾರ್ಯಕರ್ತರು ತಮ್ಮ ವ್ಯಾಪ್ತಿಗೆ ಒಳಪಡುವ ಧಾರ್ಮಿಕ ಕೇಂದ್ರಗಳ ಪ್ರಮುಖರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಇದೇ ಆಗಸ್ಟ್ 16ರಿಂದ 25ರವರೆಗೆ ಹಂತ ಹಂತವಾಗಿ ಎಲ್ಲ ಕಾರ್ಯಕರ್ತರೊಂದಿಗೆ ಬಿಜೆಪಿ ಹಿರಿಯ ನಾಯಕರು ಬೈಟಕ್ (ಸಭೆ) ನಡೆಸಲಿದ್ದಾರೆ ಎಂದು ಹೇಳಲಾಗಿದೆ.
Advertisement
ಈ ಬೈಟಕ್ ನಲ್ಲಿ ಎಲ್ಲ ಕಾರ್ಯಕರ್ತರು ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಗುವುದು. ಎಲ್ಲ ಕಾರ್ಯಕರ್ತರನ್ನು ಬೂತ್ ಮಟ್ಟ, ತಾಲೂಕು, ಜಿಲ್ಲಾವಾರು ರೀತಿಯಲ್ಲಿ ವಿಂಗಡಿಸಲಾಗುತ್ತದೆ. ಹೀಗೆ ವಿಂಗಡನೆಯಾದ ತಂಡಗಳಿಗೆ ಪಕ್ಷವೇ ವಿವಿಧ ಕೋಡ್‍ಗಳನ್ನು ನೀಡಲಿದೆ. ಕೋಡ್ ಗಳಿಗೆ ಕಾರ್ಯಕರ್ತರು ತಮ್ಮ ಪಕ್ಷದ ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ.