ಉಡುಪಿ: ನರೇಂದ್ರ ಮೋದಿ ಇಂದು ಎರಡನೇ ಅವಧಿಗೆ ಪ್ರಧಾನಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಮೋದಿ ಅಭಿಮಾನಿ ನರಸಿಂಹ ಕಿಣಿ ಸಾವಿರಾರು ಮಂದಿಗೆ ಹಾಲು ಪಾಯಸ ವಿತರಿಸಿದ್ದಾರೆ.
ಪಾಯಸ ವಿತರಣಾ ಕಾರ್ಯಕ್ರಮವು ಬೆಳಗ್ಗೆ 10 ಗಂಟೆಗೆ ಆರಂಭವಾಗಿದ್ದು, ರಾತ್ರಿ 9 ಗಂಟೆಯವರೆಗೆ ಸಾಗಲಿದೆ. ಈಗಾಗಲೇ 4 ಹಂಡೆ ಪಾಯಸ ಖಾಲಿಯಾಗಿದ್ದು, ನೂರಾರು ಲೀಟರ್ ಹಾಲು, ಅಕ್ಕಿ, ಸಕ್ಕರೆಯನ್ನು ತರಿಸಿಡಲಾಗಿದೆ. ಬಸ್ಸು, ಕಾರುಗಳಲ್ಲಿ ಓಡಾಡುವ, ಜಂಕ್ಷನ್‍ನಲ್ಲಿ ಹೋಗುವ ಜನರಿಗೆ ಪಾಯಸ ನೀಡಿ ಕಿಣಿ ಫ್ಯಾಮಿಲಿ ಖುಷಿ ಹಂಚಿಕೊಳ್ಳುತ್ತಿದೆ.
ಉಡುಪಿಯ ಕಡಿಯಾಳಿಯಲ್ಲಿ ಹೋಟೆಲ್ ಇಟ್ಟುಕೊಂಡಿರುವ ನರಸಿಂಹ ಕಿಣಿಯವರ ಕುಟುಂಬ ಮೋದಿ ಅವರ ಅಭಿಮಾನಿಯಾಗಿದ್ದು, ಎರಡನೇ ಅವಧಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೀಗಾಗಿ ಉಡುಪಿಯ ಸಾವಿರಾರು ಜನರ ಬಾಯಿ ಸಿಹಿ ಮಾಡುವ ಆಲೋಚನೆ ನರಸಿಂಹ ಕಿಣಿಯವರ ತಲೆಗೆ ಬಂದಿತ್ತು. ಕೂಡಲೇ ಹಾಲು ಪಾಯಸ ಮಾಡಿ ವಿತರಣೆ ಮಾಡುವ ನಿರ್ಧಾರ ಮಾಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನರಸಿಂಹ ಕಿಣಿ ಕುಟುಂಬ ಸಂತೋಷವನ್ನು ಹಂಚಿಕೊಂಡಿದೆ. ನಾನು ಮೋದಿ ಅವರ ಪಕ್ಕಾ ಅಭಿಮಾನಿ. ದೇಶ ಸೇವೆಗೆ ಇಡೀ ಜೀವನವನ್ನೇ ಮೋದಿ ಮುಡಿಪಾಗಿಟ್ಟಿದ್ದಾರೆ. ನನ್ನ ತಂದೆ ನಾಗೇಶ್ ಕಿಣಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾದಾಗ ಹಾಲು ಪಾಯಸ ಕೊಟ್ಟಿದ್ದರು ಎಂದು ತಿಳಿಸಿದರು.
ನರಸಿಂಹ ಕಿಣಿ ಪುತ್ರಿ ಮತ್ತು ಪತ್ನಿ ಮಾತನಾಡಿ, ನರೇಂದ್ರ ಮೋದಿ ಅವರು ದೇಶವನ್ನು ಅಭಿವೃದ್ಧಿಯ ಕಡೆಗೆ ಕರೆದೊಯ್ಯುತ್ತಿದ್ದಾರೆ. ಮುಂದೆಯೂ ಅದರ ವೇಗ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ. ನುಡಿದಂತೆ ನಡೆವವರು ನಮ್ಮ ಪ್ರಧಾನಿ. ಹಾಗಾಗಿ ಜನರ ಬಾಯಿ ಸಿಹಿಯಾಗಲಿ ಎಂಬ ಉದ್ದೇಶದಿಂದ ಇಡೀ ದಿನ ಈ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಹಾಲು ಪಾಯಸದ ವಿಶೇಷ:
ಅಕ್ಕಿಯನ್ನು ಹಾಲಿನಲ್ಲೇ ಬೇಯಿಸಿ, ಸಕ್ಕರೆ, ಗೇರು ಬೀಜ, ಹಾಲಿನ ಪುಡಿ ಏಲಕ್ಕಿ ಬಳಸಿ ಹಾಲು ಪಾಯಸ ತಯಾರು ಮಾಡಲಾಗುತ್ತದೆ. ಉಡುಪಿ ಕೃಷ್ಣಮಠದಲ್ಲಿ ವಿಶೇಷ ದಿನಗಳಲ್ಲಿ ಹಾಲು ಪಾಯಸ ಇರುತ್ತದೆ. ಹಬ್ಬ ಹರಿದಿನಗಳಲ್ಲಿ ಕೃಷ್ಣನಿಗೆ ಹಾಲು ಪಾಯಸದ ಸೇವೆ ನಡೆಯುತ್ತದೆ. ಒಬ್ಬ ಅಡುಗೆಯವರನ್ನು ಹೋಟೆಲ್ ಗೆ ಕರೆಸಿ ಹಾಲು ಪಾಯಸ ತಯಾರು ಮಾಡಲಾಗುತ್ತಿದೆ. ಈಗಾಗಲೇ ನಾಲ್ಕು ಹಂಡೆಗಳಲ್ಲಿ ಪಾಯಸ ತಯಾರಿಸಿದ್ದೇವೆ. ರಾತ್ರಿ 8 ಗಂಟೆಯವರೆಗೆ ಎಷ್ಟು ಜನ ಬಂದರೂ ಪಾಯಸ ವಿತರಣೆ ಮಾಡುತ್ತೇವೆ. ಇಡೀ ದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಮುನ್ನ ಜನಸಂಘ ಉಡುಪಿ ನಗರಸಭೆಯಲ್ಲಿ ಅಧಿಕಾರದಲ್ಲಿತ್ತು. ನರೇಂದ್ರ ಮೋದಿಗೂ ಉಡುಪಿ ಬಗ್ಗೆ ಹೆಮ್ಮೆಯಿದೆ ಎಂದು ಮೋದಿ ಅಭಿಮಾನಿ ರಾಘವೇಂದ್ರ ಕಿಣಿ ಹೇಳಿದರು.
ಉಡುಪಿ- ಮಣಿಪಾಲ- ಕಾರ್ಕಳ- ಹಿರಿಯಡ್ಕ ರಸ್ತೆಯಲ್ಲಿ ಓಡಾಡುವ ಬಸ್ಸುಗಳನ್ನು ನಿಲ್ಲಿಸಿ ಪಾಯಸ ಪಾಯಸ ವಿತರಣೆ ಮಾಡಲಾಗುತ್ತಿದೆ. ಪಾಯಸ ಕುಡಿದ ಲೋಟಗಳನ್ನು ಕಾರ್ಯಕರ್ತರು ಸ್ವಚ್ಛಭಾರತ ಅಭಿಯಾನ ಮೂಲಕ ಸಂಗ್ರಹಿಸಿ ಸ್ವಚ್ಛತೆ ಕಾಪಾಡುತ್ತಿದ್ದಾರೆ.