– ಇಡಪನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಲಾರ್ ವ್ಯವಸ್ಥೆ
– ಸಂಪೂರ್ಣ ಸೋಲಾರ್ ವ್ಯವಸ್ಥೆ ಅಳವಡಿಸಿಕೊಂಡ ರಾಜ್ಯದ ಮೊದಲ ಆಸ್ಪತ್ರೆ
ರಾಯಚೂರು: ರಾಜ್ಯದ ಎಲ್ಲೆಡೆ ಬೇಸಿಗೆ ಹಾಗೂ ಬರಗಾಲ ಹಿನ್ನೆಲೆಯಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಉಂಟಾಗಿ ಜನ ಬೆವರುತ್ತಿದ್ದಾರೆ. ಆದ್ರೆ ಬಿರು ಬಿಸಿಲನಾಡು ರಾಯಚೂರಿನ ಈ ಆಸ್ಪತ್ರೆ ಮಾತ್ರ ತುಂಬಾನೆ ಕೂಲಾಗಿದೆ. ದಿನದ 24 ಗಂಟೆ ಸೇವೆಯ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 24 ಗಂಟೆಯೂ ವಿದ್ಯುತ್ ಇರುತ್ತೆ. ಇದೆಲ್ಲಾ ಬೇಸಿಗೆ ಸೂರ್ಯನ ಮಹಿಮೆ.
Advertisement
ರಾಯಚೂರು ತಾಲೂಕಿನ ಇಡಪನೂರು ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪೂರ್ಣ ಸೋಲಾರ್ ವ್ಯವಸ್ಥೆಯ ಸರ್ಕಾರಿ ಆಸ್ಪತ್ರೆಯಾಗಿ ರೂಪಗೊಂಡಿದೆ. ದಿನದ 24 ಗಂಟೆಯೂ ಇಲ್ಲಿ ವಿದ್ಯುತ್ ಇರುತ್ತೆ. ಈ ಮೊದಲು ಗರ್ಭಿಣಿಯರ ಸ್ಕ್ಯಾನಿಂಗ್, ನವಜಾತ ಶಿಶುಗಳ ಫೋಟೋಥೆರಪಿ, ಬೇಬಿ ವಾರ್ಮಿಂಗ್ ಹಾಗೂ ಪ್ರಯೋಗಾಲಯದ ಪರೀಕ್ಷೆಗಳಿಗೆ ಲೋಡ್ ಶೆಡ್ಡಿಂಗ್ ದೊಡ್ಡ ಶತ್ರುವಾಗಿತ್ತು. ಹತ್ತು ಗ್ರಾಮಗಳ ಕೇಂದ್ರವಾಗಿರುವ ಈ ಆಸ್ಪತ್ರೆಗೆ ಬರುವ ರೋಗಿಗಳು ವಿದ್ಯುತ್ ಇಲ್ಲದೆ ಸುಮಾರು 30 ಕಿ.ಮೀ ದೂರದ ರಾಯಚೂರು ನಗರಕ್ಕೆ ಬರಬೇಕಾಗಿತ್ತು. ಆದ್ರೆ ಜಿಲ್ಲಾ ಪಂಚಾಯ್ತಿ ಸಹಯೋಗದೊಂದಿಗೆ ಸೆಲ್ಕೋ ಸೋಲಾರ್ ಲೈಟ್ ಪವರ್ ಲಿಮಿಟೆಡ್ ಕಂಪನಿ ಈ ಆಸ್ಪತ್ರೆಗೆ ಸೌರ ವ್ಯವಸ್ಥೆ ಅಳವಡಿಸಿದ ಮೇಲೆ ವಿದ್ಯುತ್ ಸಮಸ್ಯೆ ಅನ್ನೋದನ್ನೇ ರೋಗಿಗಳು ಮರೆತಿದ್ದಾರೆ.
Advertisement
Advertisement
ಒಟ್ಟು 3 ಲಕ್ಷ 60 ಸಾವಿರ ರೂಪಾಯಿ ಯೋಜನೆಯಲ್ಲಿ ಜಿಲ್ಲಾ ಪಂಚಾಯ್ತಿ 95 ಸಾವಿರ ರೂಪಾಯಿ ನೀಡಿದ್ದು, ಉಳಿದ 2 ಲಕ್ಷ 65 ಸಾವಿರ ರೂಪಾಯಿಯನ್ನ ಸೆಲ್ಕೋ ಸೋಲಾರ್ ಕಂಪನಿ ಭರಿಸಿದೆ. 2500 ವ್ಯಾಸ್ ಪೀಕ್‍ನ ಸೋಲಾರ್ ಪ್ಯಾನಲ್, 960 ಎಎಚ್ ಬ್ಯಾಟರಿ, 3 ಕೆ.ವಿ ಇನ್‍ವರ್ಟರ್ ಅಳವಡಿಸಿರುವುದರಿಂದ ಸದಾ ವಿದ್ಯುತ್ ಇರುತ್ತದೆ. ಆಸ್ಪತ್ರೆಯ 10 ಫ್ಯಾನ್, 10 ಟ್ಯೂಬ್ ಲೈಟ್, ಓಟಿ ಲೈಟ್, ರೆಫ್ರಿಜೆಟರ್ ಸೇರಿ ಪ್ರತಿಯೊಂದು ಉಪಕರಣಗಳು ಸದಾ ಕೆಲಸ ಮಾಡುತ್ತಿವೆ. ಇದರಿಂದ ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯುತ್ತಿದೆ ಅಂತ ಸೆಲ್ಕೋ ಸೋಲಾರ್ ಕಂಪನಿ ಪ್ರಾಜೆಕ್ಟ್ ಮ್ಯಾನೇಜರ್ ಸುಬ್ರಾಯ್ ಹೆಗ್ಡೆ ತಿಳಿಸಿದ್ದಾರೆ.
Advertisement
ಇಡಪನೂರು ಆಸ್ಪತ್ರೆಯಲ್ಲಿ ಸೋಲಾರ ವ್ಯವಸ್ಥೆ ಯಶಸ್ವಿಯಾಗಿರುವುದರಿಂದ ಜಿಲ್ಲೆಯ ಇನ್ನೂ 9 ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಅಳವಡಿಸಲು ಜಿಲ್ಲಾ ಪಂಚಾಯ್ತಿ ಹಾಗೂ ಸೆಲ್ಕೋ ಸೋಲಾರ್ ಕಂಪನಿ ಮುಂದಾಗಿವೆ. ಈಗಲಾದ್ರೂ ಗ್ರಾಮೀಣ ಭಾಗದಲ್ಲಿ ಸೋಲಾರ್ ವ್ಯವಸ್ಥೆಯಿಂದ ಉತ್ತಮ ಆರೋಗ್ಯ ಸೌಲಭ್ಯ ಸಿಗುತ್ತಿದೆ ಅನ್ನೋದು ನಿಜಕ್ಕೂ ಖುಷಿಯ ಸಂಗತಿ.