‘ಸಾರಥಿ’ ಚಿತ್ರವನ್ನು ನಿರ್ಮಿಸಿದ್ದ ಕೆ.ವಿ.ಸತ್ಯಪ್ರಕಾಶ್ (Satya Prakash) ಅವರು ಹನ್ನೆರಡು ವರ್ಷಗಳ ನಂತರ ಸಾರಥಿ ಫಿಲಂಸ್ ಮೂಲಕ ನೂತನ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಿರ್ಮಾಣಕ್ಕೆ ಸತ್ಯಪ್ರಕಾಶ್ ಅವರ ಪುತ್ರ ಸೂರಜ್ ಗೌಡ ಅವರು ಸಾಥ್ ನೀಡುತ್ತಿದ್ದಾರೆ. ಜಂಟಲ್ ಮ್ಯಾನ್, ಗುರುಶಿಷ್ಯರು ಚಿತ್ರಗಳ ನಿರ್ದೇಶಕ ಹಾಗೂ ಕಾಟೇರ ಚಿತ್ರದ ಲೇಖಕ ಜಡೇಶ ಕೆ ಹಂಪಿ (Jadesh Hampi) ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ದುನಿಯಾ ವಿಜಯ್ (Duniya Vijay) ನಾಯಕ. ಈ ಚಿತ್ರಕ್ಕೆ ಈಗ ಟೈಟಲ್ ಫಿಕ್ಸ್ ಆಗಿದೆ. ರಾಚಯ್ಯ (Rachaiah) ಅನ್ನೋ ಕ್ಯಾಚಿ ಶೀರ್ಷಿಕೆಯನ್ನು ಚಿತ್ರಕ್ಕೆ ಇಡಲಾಗಿದೆ.
ರಚಿತಾರಾಮ್ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದು, ದುನಿಯಾ ವಿಜಯ್ ಪುತ್ರಿ ರಿತನ್ಯ(ಮೋನಿಕಾ) ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಡೇರ್ ಡೆವಿಲ್ ಮುಸ್ತಫಾ ಖ್ಯಾತಿಯ ಶಿಶಿರ್ ಸಹ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದು ನಾನು ಕಂಡ, ಕೇಳಿದ ಹಾಗೂ ನೋಡಿದ ನೈಜ ಕಥೆ ಎಂದು ಮಾತನಾಡಿದ ನಿರ್ದೇಶಕ ಜಡೇಶ ಕೆ ಹಂಪಿ, ಇದು ಆಳಿದವರ ಕಥೆಯಲ್ಲ. ಅಳಿದು ಉಳಿದವರ ಕಥೆ. ಕೋಲಾರ ಭಾಗದಲ್ಲಿ ನಡೆಯುವ ಕಥೆಯಾಗುವುದರಿಂದ ಸಂಭಾಷಣೆ ಕೋಲಾರದ ಭಾಷೆಯಲ್ಲೇ ಇರುತ್ತದೆ. ಮಾಸ್ತಿ ಅವರು ಸಂಭಾಷಣೆ ಬರೆಯುತ್ತಿದ್ದಾರೆ. ಅವರು ಕೋಲಾರದವರೆ ಆಗಿರುವುದು ವಿಶೇಷ. ಇದು 90 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಶಿವರಾಮ ಕಾರಂತರ “ಚೋಮನ ದುಡಿ”ಯ ಚೋಮನ ಪಾತ್ರ ಈ ಚಿತ್ರಕ್ಕೆ ಸ್ಪೂರ್ತಿ. ಹಾಗಂತ “ಚೋಮನ ದುಡಿ” ಚಿತ್ರಕ್ಕೂ ಈ ಚಿತ್ರಕ್ಕೂ ಸಂಬಂಧವಿಲ್ಲ. ಇನ್ನು ಈ ಚಿತ್ರವನ್ನು ಜಗದೀಶ್ ಅವರು ನಿರ್ಮಿಸಬೇಕಿತ್ತು. ಕಾರಣಾಂತರದಿಂದ ಆಗಲಿಲ್ಲ ಎಂದಿದ್ದಾರೆ ದುನಿಯಾ ವಿಜಯ್.
ಈ ಚಿತ್ರದ ವಿಶೇಷವೆಂದರೆ ತಂದೆ – ಮಗ ನಿರ್ಮಿಸುತ್ತಿದ್ದಾರೆ. ತಂದೆ – ಮಗಳು ಅಭಿನಯಿಸುತ್ತಿದ್ದೇವೆ. ನನ್ನ ಮಗಳು ರಿತನ್ಯ, ಮುಂಬೈನ ಅನುಪಮ್ ಖೇರ್ ಇನ್ಸ್ಟಿಟ್ಯೂಟ್ ನಲ್ಲಿ ಅಭಿನಯದ ಕುರಿತು ಕಲಿತು ಬಂದಿದ್ದಾಳೆ. ಈ ಚಿತ್ರದಲ್ಲೂ ನನ್ನ ಮಗಳ ಪಾತ್ರದಲ್ಲೇ ಅಭಿನಯಿಸುತ್ತಿದ್ದಾಳೆ. ನಾನು ಚಿತ್ರರಂಗಕ್ಕೆ ಬಂದು ಮೂವತ್ತು ವರ್ಷ ಹಾಗೂ ನಾಯಕನಾಗಿ ಹದಿನೆಂಟು ವರ್ಷಗಳಾಗಿದೆ. ಈ ಸಂದರ್ಭದಲ್ಲಿ ನನ್ನ ಮಗಳು ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾಳೆ. ಒಬ್ಬ ತಂದೆ ಮಗಳಿಗಾಗಿ ಏನೆಲ್ಲಾ ಕೊಡಬಹುದು? ಸ್ಕ್ರಿಪ್ಟ್ ನಲ್ಲೂ ಅರ್ಧಭಾಗ ಕೊಡಬಹುದು ಎಂದು ತಿಳಿಸಿದ ದುನಿಯಾ ವಿಜಯ್, ನಿರ್ದೇಶಕ ಜಡೇಶ್ ಅವರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಜಡೇಶ್ ಕನ್ನಡ ಚಿತ್ರರಂಗದ ಅತ್ಯುತ್ತಮ ನಿರ್ದೇಶಕರಾಗುವುದು ಖಂಡಿತ. ಬಹಳ ವರ್ಷಗಳ ನಂತರ ಸತ್ಯಪ್ರಕಾಶ್ ಅವರು ನಿರ್ಮಾಣಕ್ಕೆ ಮರಳಿದ್ದಾರೆ. ಅವರಿಗೆ ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ ನಾಯಕ ದುನಿಯಾ ವಿಜಯ್.