ಈವರೆಗೂ ಒಂದಷ್ಟು ಚೆಂದದ ಪಾತ್ರಗಳಲ್ಲಿ ನಟಿಸಿರುವವರು ಅನು ಪ್ರಭಾಕರ್. ಎಂಥಾ ಪಾತ್ರಗಳಿಗಾದರೂ ಒಗ್ಗಿಕೊಳ್ಳುವ ಛಾತಿ ಇರುವ ಅವರು, ಒಂದಷ್ಟು ಕಾಲ ಚಿತ್ರರಂಗದಿಂದ ದೂರವಿದ್ದದ್ದೂ ಇದೆ. ಸಾಮಾನ್ಯವಾಗಿ ಇಂಥಾ ಪ್ರತಿಭಾನ್ವಿತ ಕಲಾವಿದರನ್ನು ಪ್ರೇಕ್ಷಕರು ಮಿಸ್ ಮಾಡಿಕೊಳ್ಳುತ್ತಾರೆ. ಹೀಗೆ ಅನು ಅವರನ್ನು ಸಿನಿಮಾಗಳಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿ ಬಳಗ ಕಾಯುತ್ತಿರುವಾಗಲೇ ಅಚ್ಚರಿದಾಯಕ ಗೆಟಪ್ಪಿನಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗಿದ್ದಾರೆ. ಇಂದು ಬಿಡುಗಡೆಗೊಂಡಿರುವ ಹಗ್ಗ ಚಿತ್ರದಲ್ಲಿನ ಅವರ ಪಾತ್ರ ಕಂಡು ನೋಡುಗರೆಲ್ಲ ಥ್ರಿಲ್ ಆಗಿ ಬಿಟ್ಟಿದ್ದಾರೆ.
ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ ನಂತರ ಬೇರೊಂದು ಹಂತದ ಪಾತ್ರಕ್ಕಾಗಿ ನಟ ನಟಿಯರು ಬಯಸೋದಿದೆ. ಅಂಥಾದ್ದೊಂದು ಹಂಬಲ ಹೊಂದಿದ್ದ ಅನು ಪ್ರಭಾಕರ್ ಅವರ ಪಾಲಿಗೆ ಒಲಿದು ಬಂದಿದ್ದ ಚಿತ್ರ ಹಗ್ಗ. ಆರಂಭದಲ್ಲಿಯೇ ನಿರ್ದೇಶಕರು ಕಥೆ ಹೇಳಿದಾಗ, ತಮ್ಮ ಪಾತ್ರದ ಚಹರೆ ಮತ್ತು ಗೆಟಪ್ಪುಗಳ ಬಗ್ಗೆ ಕೇಳಿ ಅನು ಖುಷಿಗೊಂಡಿದ್ದರಂತೆ. ಸಿನಿಮಾ ವ್ಯಾಮೋಹಿಗಳ ತಂಡದ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದ ಅವರು, ಆ ಪಾತ್ರಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದ್ದರು. ಅದರ ಫಲವಾಗಿಯೇ ಅನು ಈ ಹಿಂದೆಂದೂ ಕಾಣಿಸಿಕೊಂಡಿರದ ಗೆಟಪ್ಪಿನಲ್ಲಿ ಮಿಂಚಿದ್ದಾರೆ. ಅದು ಪ್ರೇಕ್ಷಕರನ್ನೆಲ್ಲ ಸೆಳೆಯುವಲ್ಲಿಯೂ ಯಶ ಕಂಡಿದೆ.
ರಾಜ್ ಭಾರದ್ವಾಜ್ ನಿರ್ಮಾಣದಲ್ಲಿ ಮೂಡಿ ಬಂದಿರುವ, ಅವರದ್ದೇ ನಕಥೆಯನ್ನು ಹೊಂದಿರುವ ಹಗ್ಗ ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ರೈಲರ್ ಮೂಲಕವೇ ಆಕರ್ಷಿತರಾಗಿ ನೋಡಲು ಬಂದವರೆಲ್ಲ ಥ್ರಿಲ್ ಆಗಿದ್ದಾರೆ. ಅದರಲ್ಲಿಯೂ ಅನು ಪ್ರಭಾಕರ್ ಪಾತ್ರಕ್ಕೂ ಮೆಚ್ಚುಗೆಯ ಮಹಾ ಪೂರವೇ ಹರಿದು ಬರಲಾರಂಭಿಸಿದೆ. ಅನು ಅವರ ಪಾಲಿಗೆ ಹಗ್ಗ ಒಂದು ಮೈಲಿಗಲ್ಲು. ಯಾಕೆಂದರೆ, ಅವರು ನಟಿಯಾಗಿ ಇದೀಗ ಇಪ್ಪತೈದು ವರ್ಷ ತುಂಬಿದೆ. ಈ ಸಿಲ್ವರ್ ಜ್ಯುಬಿಲಿ ಸಂಭ್ರಮದ ಹೆಗ್ಗುರುತಾಗಿ ಹಗ್ಗ ದಾಖಲಾಗುತ್ತದೆ. 1999ರಲ್ಲಿ ಹೃದಯ ಹೃದಯ ಚಿತ್ರದ ಮೂಲಕ ಬಣ್ಣ ಹಚ್ಚಿದ್ದವರು ಅನು ಪ್ರಭಾಕರ್. ಈವರೆಗೂ ನಾನಾ ಮಜಲಿನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅವರೇ ಹೇಳುವ ಪ್ರಕಾರ ಹಗ್ಗ ಎಂಬುದು ಅನು ವೃತ್ತಿ ಬದುಕಿನ ವಿಶಿಷ್ಟ ಚಿತ್ರ.
ವಸಂತ ಸಿನಿ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ರಾಜ್ ಭಾರದ್ವಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅವಿನಾಶ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ಈ ಚಿತ್ರಕ್ಕೆ ಕಥೆ ಬರೆದಿರೋದಲ್ಲದೇ ರಾಜ್ ಭಾರದ್ವಾಜ್ ಅವರೇ ಸ್ಕ್ರೀನ್ ಪ್ಲೇ ಮತ್ತು ಸಂಭಾಷಣೆಯಲ್ಲಿಯೂ ಭಾಗಿಯಾಗಿದ್ದಾರೆ. ಸಿನಿಟೆಕ್ ಸೂರಿ ಛಾಯಾಗ್ರಹಣ, ಮ್ಯಾಥ್ಯೂ ಮನು ಸಂಗೀತ ನಿರ್ದೇಶನ, ವಿಕ್ರಮ್ ಮೋರ್, ಡಿಫರೆಂಟ್ ಡ್ಯಾನಿ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಮತ್ತು ಅನು ಪ್ರಭಾಕರ್, ವೇಣು, ಹರ್ಷಿಕಾ ಪೂಣಚ್ಚ, ತಬಲಾ ನಾಣಿ, ಅವಿನಾಶ್, ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಪ್ರಿಯಾ ಹೆಗ್ಡೆ, ಮೈಕೋ ಮಂಜು, ಸಂಜು ಬಸಯ್ಯ, ಸದಾನಂದ ಕಾಳಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.