-ಭದ್ರತಾ ವೈಫಲ್ಯ ಕುರಿತು ಅಧಿಕಾರಿಗಳಿಗೆ ಆಂಧ್ರ ಸಿಎಂ ಕ್ಲಾಸ್
ಅಮರಾವತಿ: ತಿರುಪತಿ ಕಾಲ್ತುಳಿತ (Tirupati Stampede) ಪ್ರಕರಣದಲ್ಲಿ ಅಸ್ವಸ್ಥಗೊಂಡವರನ್ನು ಏರ್‌ಲಿಫ್ಟ್ ಮೂಲಕ ರವಾನಿಸುವಂತೆ ಆಂಧ್ರ ಸಿಎಂ ಎನ್.ಚಂದ್ರಬಾಬು ನಾಯ್ಡು ಸೂಚಿಸಿದ್ದಾರೆ. ಕಾಲ್ತುಳಿತದಲ್ಲಿ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಆಂಧ್ರಪ್ರದೇಶ ಸಿಎಂ ಅವರು ಡಿಜಿಪಿ, ಟಿಟಿಡಿ ಇಒ, ಜಿಲ್ಲಾಧಿಕಾರಿ, ಎಸ್ಪಿ ಅವರೊಂದಿಗೆ ಕಾಲ್ತುಳಿತದ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಕೆಂಡಾಮಂಡಲರಾಗಿ, ಒಂದೇ ಒಂದು ಜೀವಹಾನಿಯಾಗಬಾರದೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಜೊತೆಗೆ ಸಾವಿನ ಸಂಖ್ಯೆ ಹೆಚ್ಚಾಗುವುದನ್ನು ತಡೆಯಲು ಸಂತ್ರಸ್ತರಿಗೆ ಉತ್ತಮ ಚಿಕಿತ್ಸೆಗೆ ಸೂಚನೆ ನೀಡಿದ್ದಾರೆ.ಇದನ್ನೂ ಓದಿ: ತಿರುಪತಿಯಲ್ಲಿ ಭಾರಿ ಅನಾಹುತ – ಕಾಲ್ತುಳಿತಕ್ಕೆ 4 ಮಂದಿ ಸಾವು
ಕಾಲ್ತುಳಿತ ಘಟನೆಯ ಬಗ್ಗೆ ಮುಖ್ಯಮಂತ್ರಿ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಜ.10ರಿಂದ ಆರಂಭವಾಗುವ 10 ದಿನಗಳ ವೈಕುಂಠ ದ್ವಾರ ದರ್ಶನಕ್ಕೆ ದೇಶ-ವಿದೇಶಗಳಿಂದ ನೂರಾರು ಭಕ್ತರು ಆಗಮಿಸಿದ್ದರು. ದರ್ಶನಕ್ಕೆ ಬಂದ ಭಕ್ತರು ಪ್ರಾಣ ಕಳೆದುಕೊಂಡಿರುವುದು ಅತೀವ ದುಃಖ ತಂದಿದೆ. ಜೊತೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂದು ಗೊತ್ತಿದ್ದರೂ ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಲು ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಏನಿದು ಪ್ರಕರಣ?
ತಿರುಪತಿಯಲ್ಲಿ ನೂರಾರು ಭಕ್ತರು ವೈಕುಂಠ ದ್ವಾರ ದರ್ಶನಕ್ಕಾಗಿ ಟಿಕೆಟ್‌ಗಾಗಿ ಮುಗಿಬಿದ್ದಿದ್ದರಿಂದ ಈ ಕಾಲ್ತುಳಿತ ಉಂಟಾಗಿದ್ದು, ಹಲವರು ಸಾವನ್ನಪ್ಪಿದ್ದಾರೆ. ತಿರುಪತಿಯ ವಿಷ್ಣು ನಿವಾಸದ ಬಳಿ ಇರುವ ತಿರುಮಲ ಶ್ರೀವಾರಿ ವೈಕುಂಠ ದ್ವಾರದಲ್ಲಿ ಬುಧವಾರ ರಾತ್ರಿ ಈ ಅವಘಡ ಸಂಭವಿಸಿದೆ.ಇದನ್ನೂ ಓದಿ: ದೆಹಲಿ ಚುನಾವಣೆಗೆ ಆಪ್‌ಗೆ ಟಿಎಂಸಿ ಬೆಂಬಲ – ಧನ್ಯವಾದ ಎಂದ ಕೇಜ್ರಿವಾಲ್