ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ದಿನೇ ದಿನೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಮಹದೇಶ್ವರನ ದರ್ಶನಕ್ಕಾಗಿ ಭಕ್ತರು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ಹಾಗಾಗಿ, ಭಕ್ತರು ಸುಗಮವಾಗಿ ಮಹದೇಶ್ವರನ ದರ್ಶನ ಪಡೆಯಲು ಅನುಕೂಲವಾಗುವಂತೆ ತಿರುಪತಿ ಮಾದರಿಯಲ್ಲಿ ಕ್ಯೂ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗುತ್ತಿದೆ.
ಮಲೆ ಮಹದೇಶ್ವರ ಬೆಟ್ಟ (Male Mahadeshwara Hills) ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳ. ಕೋಟ್ಯಂತರ ಭಕ್ತರ ಆರಾಧ್ಯ ದೈವ ಮಲೆ ಮಹದೇಶ್ವರನ ಸನ್ನಿಧಿಗೆ ನಿತ್ಯ ಸಾವಿರಾರು ಭಕ್ತರು ಬರುತ್ತಿದ್ದಾರೆ. ಅದರಲ್ಲೂ ಅಮಾವಾಸ್ಯೆ, ಜಾತ್ರೆ ಹಾಗೂ ರಜಾದಿನಗಳಲ್ಲಿ ಭಕ್ತರ ಸಂಖ್ಯೆ ಲಕ್ಷ ದಾಟುತ್ತದೆ. ಶಕ್ತಿ ಯೋಜನೆ ಜಾರಿಯಾದ ನಂತರ ಭಕ್ತರು ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದು, ಮಹದೇಶ್ವರನ ದರ್ಶನ ಪಡೆಯಲು ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಹಾಗಾಗಿ, ಭಕ್ತರು ಸುಗಮ ಹಾಗೂ ಬೇಗ ಮಹದೇಶ್ವರನ ದರ್ಶನ ಪಡೆಯಲು ಅನುಕೂಲವಾಗುವಂತೆ ತಿರುಪತಿ ಮಾದರಿಯಲ್ಲಿ ಕ್ಯೂ ಕಾಂಪ್ಲೆಕ್ಸ್ ನಿರ್ಮಿಸಲಾಗುತ್ತಿದೆ. ಈ ಕಾಂಪ್ಲೆಕ್ಸ್‌ಗಳಲ್ಲಿ ಭಕ್ತರು ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಉಪಾಹಾರ, ಮಕ್ಕಳ ಆರೈಕೆ ಕೇಂದ್ರ ಮೊದಲಾದ ಸೌಲಭ್ಯಗಳನ್ನು ಒಳಗೊಂಡಿದೆ.
ಬೆಟ್ಟಕ್ಕೆ ಬರುವ ಭಕ್ತರು ಮಹದೇಶ್ವರನ ದರ್ಶನ ಪಡೆಯಲು ಮೊದಲೇ ಸಮಯ ನಿಗದಿ ಮಾಡಲು ಸಹ ನಿರ್ಧರಿಸಲಾಗಿದೆ. ಇದರಿಂದ ಭಕ್ತರು ದೇವಸ್ಥಾನ ಆವರಣದಲ್ಲಿ ಅನವಶ್ಯಕವಾಗಿ ಕಾಯುವುದು ತಪ್ಪಲಿದೆ. ಕ್ಯೂ ಕಾಂಪ್ಲೆಕ್ಸ್ ಅಲ್ಲದೇ ಒಂದೇ ಬಾರಿಗೆ 4 ಸಾವಿರ ಮಂದಿ ಕುಳಿತು ಭೋಜನ ಮಾಡುವ ಸುಸಜ್ಜಿತ ದಾಸೋಹ ಭವನವನ್ನು ನಿರ್ಮಿಸಲಾಗುತ್ತಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ಮೂರು ತಿಂಗಳ ಒಳಗೆ ತಿರುಪತಿ ಮಾದರಿ ಕ್ಯೂ ಕಾಂಪ್ಲೆಕ್ಸ್ ಹಾಗೂ ಸುಸಜ್ಜಿತ ದಾಸೋಹ ಭವನ ನಿರ್ಮಾಣ ಕಾಮಗಾರಿ ಮುಗಿಯಲಿದೆ. ಇದೇ ವೇಳೆ, ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ತಿರುಪತಿ ಮಾದರಿ ಮೆಟ್ಟಿಲು ನಿರ್ಮಾಣ ಕಾಮಗಾರಿಯು ಪೂರ್ಣಗೊಳ್ಳುವ ನಿರೀಕ್ಷೆಯಿದೆ.