– ಸಾಕ್ಷಿ ಇಲ್ಲದೇ ಹೇಗೆ ಸುದ್ದಿಗೋಷ್ಠಿ ಮಾಡಿದ್ರಿ? – ಆಂಧ್ರ ಸರ್ಕಾರಕ್ಕೆ ಚಾಟಿ
ನವದೆಹಲಿ: ತಿರುಪತಿ ದೇವಸ್ಥಾನದ ಲಡ್ಡು (Tirupati laddu) ತಯಾರಿಕೆಯಲ್ಲಿ ಕಲಬೆರಕೆ ತುಪ್ಪ ಬಳಕೆಯಾಗಿದೆ ಎಂಬ ಆರೋಪದ ಹಿನ್ನಲೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ಆರಂಭಿಸಿದೆ. ವಿಚಾರಣೆ ವೇಳೆ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿಗಳು ರಾಜಕೀಯದಿಂದ ಧರ್ಮವನ್ನು ದೂರವಿಡಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಒತ್ತಿ ಹೇಳಿದೆ.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ದ್ವಿಸದಸ್ಯ ಪೀಠವು ಆಂಧ್ರಪ್ರದೇಶ ಸರ್ಕಾರ ಮತ್ತು ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಗೆ ಹಾಗೂ ಆಂಧ್ರ ಸರ್ಕಾರಕ್ಕೆ (Andhra Pradesh) ಹಲವು ಪ್ರಶ್ನೆಗಳನ್ನು ಹಾಕಿತು. ಈ ವಿಷಯದ ಬಗ್ಗೆ ಈಗಾಗಲೇ ತನಿಖೆಗೆ ಆದೇಶಿಸಿರುವಾಗ ಸಾರ್ವಜನಿಕ ಹೇಳಿಕೆ ನೀಡುವುದು ಏಕೆ? ಪತ್ರಿಕಾಗೋಷ್ಠಿ ನಡೆಸುವ ಅಗತ್ಯವೇನಿತ್ತು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಇದನ್ನೂ ಓದಿ: ಜನಾರ್ದನ ರೆಡ್ಡಿಗೆ ಸುಪ್ರೀಂ ರಿಲೀಫ್ – ಬಳ್ಳಾರಿ ಪ್ರವೇಶಕ್ಕೆ ಗ್ರೀನ್‌ಸಿಗ್ನಲ್
ನೀವು ಎಸ್‍ಐಟಿ ತನಿಖೆಗೆ ಆದೇಶಿಸಿದ್ದೀರಿ. ತನಿಖೆಯ ವರದಿ ಬರುವ ಮುನ್ನ, ಪತ್ರಿಕಾಗೋಷ್ಠಿ ನಡೆಸುವ ಅವಶ್ಯಕತೆ ಏನು? ನೀವು ಯಾವಾಗಲೂ ಅಂತಹದ್ದಕ್ಕಾಗಿ ಕಾಣಿಸಿಕೊಳ್ಳುತ್ತಿದ್ದೀರಿ ಎಂದು ನ್ಯಾಯಾಲಯ ಆಂಧ್ರ ಪ್ರದೇಶ ಸರ್ಕಾರದ ಪರ ವಕೀಲ ರೋಹಟಗಿಯವರಿಗೆ ಪ್ರಶ್ನಿಸಿತು.
ಲಡ್ಡು ತಯಾರಿಕೆಯಲ್ಲಿ ಕಲುಷಿತ ತುಪ್ಪವನ್ನು ಬಳಸಲಾಗಿದೆ ಎಂಬುದಕ್ಕೆ ಸಾಕ್ಷಿ ಏನು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ಈ ಕುರಿತು ತಿರುಪತಿ ದೇವಸ್ಥಾನದ ಪರ ವಾದ ಮಂಡಿಸಿದ ವಕೀಲ ಸಿದ್ಧಾರ್ಥ್ ಲೂತ್ರಾ, `ನಾವು ತನಿಖೆ ನಡೆಸುತ್ತಿದ್ದೇವೆ’ ಎಂದು ಪೀಠಕ್ಕೆ ತಿಳಿಸಿದರು. ಈ ವೇಳೆ ನೀವು `ಮಾಧ್ಯಮದ ಮುಂದೆ ಹೋಗುವ ಅಗತ್ಯವೇನಿತ್ತು?’ ನೀವು ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು ಎಂದು ಕೋರ್ಟ್ ಎಚ್ಚರಿಕೆ ನೀಡಿತು.
ತುಪ್ಪದಲ್ಲಿ ಕಲಬೆರಕೆ ನಡೆದಿದೆ ಎನ್ನುವುದಕ್ಕೆ ಇಲ್ಲಿಯವರೆಗೆ ಯಾವುದೇ ಅಧಿಕೃತ ಸಾಕ್ಷಿ ಇಲ್ಲದೇ ಇರುವಾಗ ಸುದ್ದಿಗೋಷ್ಠಿ ನಡೆಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿತು. ತುಪ್ಪದಲ್ಲಿ ಕಲಬೆರಕೆ ಆಗಿದೆಯೇ ಎಂದು `ನೀವು ಎರಡನೇ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕು ಎಂದು ವಿವೇಕವಿಲ್ಲವೇ? ಎಂದು ಸರ್ಕಾರಕ್ಕೆ ನ್ಯಾಯಮೂರ್ತಿ ವಿಶ್ವನಾಥನ್ ಅವರು ಪ್ರಶ್ನಿಸಿದರು.
ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, ರಾಜ್ಯಸಭಾ ಸಂಸದ ಮತ್ತು ಟಿಟಿಡಿ ಮಾಜಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಸಲ್ಲಿಸಿದ್ದ ಮೂರು ಅರ್ಜಿಗಳು ಮತ್ತು ಇತಿಹಾಸಕಾರ ವಿಕ್ರಮ್ ಸಂಪತ್ ಮತ್ತು ಆಧ್ಯಾತ್ಮಿಕ ಪ್ರವಚನಕಾರ ದುಷ್ಯಂತ್ ಶ್ರೀಧರ್ ಅವರು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
ಹಿಂದಿನ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡೂ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ತಿಂಗಳ ಆರಂಭದಲ್ಲಿ ಆರೋಪಿಸಿದ್ದರು. ಇದು ದೇಶದೆಲ್ಲೆಡೆ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅ.4 ಕ್ಕೆ ಮುಂದೂಡಿಕೆ