ತಿರುಪತಿ: ತಿರುಪತಿ ತಿಮ್ಮಪ್ಪನ ಲಡ್ಡು ಸೇವೆಯಿಂದಾಗಿ ತಿರುಮಲ ತಿರುಪತಿ ದೇವಸ್ಥಾನಕ್ಕೆ (ಟಿಟಿಡಿ) ವಾರ್ಷಿಕ 140 ಕೋಟಿ ರೂ. ನಷ್ಟವಾಗುತ್ತಿದೆ. ತಿರುಪತಿ ಲಡ್ಡನ್ನು ಕಳೆದ ಮೂರು ವರ್ಷಗಳಿಂದ ಸಬ್ಸಿಡಿ ದರ ಹಾಗೂ ಕೆಲವು ಭಕ್ತರಿಗೆ ಉಚಿತವಾಗಿ ಹಂಚಿಕೆ ಮಾಡುತ್ತಿರುವುದರಿಂದ ಈ ನಷ್ಟವಾಗುತ್ತಿದೆ ಎಂದು ಟಿಟಿಡಿ ಮೂಲಗಳು ಪಿಟಿಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿವೆ.
ಭಕ್ತರ ಬಾಯಲ್ಲಿ ನೀರೂರಿಸುವ ಲಡ್ಡು ಪ್ರಸಾದವನ್ನು ಕಳೆದ 11 ವರ್ಷಗಳಿಂದ 25 ರೂ.ಗಳ ಸಬ್ಸಿಡಿ ದರದಲ್ಲಿ ಮಾರಾಟ ಮಾಡುತ್ತಿದೆ. ಆದರೆ ಒಂದು ಲಡ್ಡುವಿನ ಉತ್ಪಾದನಾ ವೆಚ್ಚವೇ 32.50 ರೂಪಾಯಿ ಆಗುತ್ತದೆ.
Advertisement
2016ರಲ್ಲಿ ಸುಮಾರು 10 ಕೋಟಿ ಲಡ್ಡು ತಯಾರಾಗಿ ಮಾರಾಟವಾಗಿವೆ. ಸಬ್ಸಿಡಿ ದರವಲ್ಲದೆ ಉಚಿತ ದರ್ಶನ ಹಾಗೂ ಸರತಿ ಸಾಲಲ್ಲಿ ನಿಂತು ದರ್ಶನ ಪಡೆದವರಿಗೆ ಕೇವಲ 10 ರೂ.ಗೆ ಲಡ್ಡು ಪ್ರಸಾದ ನೀಡಲಾಗುತ್ತದೆ. ಇದರಿಂದಾಗಿಯೇ ವರ್ಷಕ್ಕೆ 23 ಕೋಟಿ ರೂಪಾಯಿ ನಷ್ಟವಾಗುತ್ತದೆ ಎನ್ನಲಾಗಿದೆ.
Advertisement
ತಿರುಮಲ ಬೆಟ್ಟವನ್ನು 11 ಕಿ.ಮೀ. ನಡೆದುಕೊಂಡು ಬರುವವರಿಗೆ 1 ಲಡ್ಡುವಿನಂತೆ ವಿತರಣೆ ಮಾಡುತ್ತಿದ್ದು ಇದರಿಂದಾಗಿ 22.7 ಕೋಟಿ ನಷ್ಟವಾಗುತ್ತದೆ. ಅಕ್ಟೋಬರ್ 2013ರಲ್ಲಿ ಈ ಯೋಜನೆ ಆರಂಭವಾಗಿತ್ತು. ಇದು ಆರಂಭವಾದ ಬಳಿಕ ವಾರ್ಷಿಕ ಸುಮಾರು 70 ಲಕ್ಷ ಭಕ್ತರು ಬೆಟ್ಟವನ್ನು ಹತ್ತಿ ಬರುತ್ತಾರೆ.
Advertisement
70 ಲಕ್ಷಕ್ಕೂ ಹೆಚ್ಚು ಭಕ್ತರು 300 ರೂ.ಗಳ ವಿಶೇಷ ದರ್ಶನ ಹಾಗೂ 500 ರೂ.ಗಳ ವಿಐಪಿ ದರ್ಶನ ಪಡೆದುಕೊಂಡು ಬರುವವರಿಗೆ ತಲಾ 2 ಲಡ್ಡುಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಇದು ಕೂಡಾ ಟಿಟಿಡಿಯ ನಷ್ಟದ ಲೆಕ್ಕಕ್ಕೆ ಸೇರ್ಪಡೆಯಾಗುತ್ತಿದೆ.