ತಿರುಪತಿ: ಪ್ರಸಿದ್ಧ ವೆಂಕಟೇಶ್ವರಸ್ವಾಮಿ ದೇಗುಲದಲ್ಲಿ (Tirupati Temple) ಬುಧವಾರ ರಾತ್ರಿ ವೈಕುಂಠ ದ್ವಾರ ದರ್ಶನ (Vaikuntha Dwara Darshan) ಟಿಕೆಟ್ ಕೌಂಟರ್ ಬಳಿ ನೂಕು ನುಗ್ಗಲು ಸಂಭವಿಸಿ ನಡೆದ ಕಾಲ್ತುಳಿತದಲ್ಲಿ (Stampede) ಬಲಿಯಾದವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಬೈರಾಗಿಪಟ್ಟೇಡ, ಶ್ರೀನಿವಾಸಂ ಮತ್ತು ಸತ್ಯನಾರಾಯಣಪುರಂನಲ್ಲಿ ಕಾಲ್ತುಳಿತ ಸಂಭವಿಸಿದ್ದು 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ದುರಂತಕ್ಕೆ ಕಾರಣ ಏನು?
ಜ. 10, 11 ಮತ್ತು 12 ರಂದು ವೈಕುಂಠ ಏಕಾದಶಿ ಇರುವ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 5 ಗಂಟೆಯಿಂದ ವೈಕುಂಠದ್ವಾರ ಸರ್ವದರ್ಶನಕ್ಕೆ ಟಿಕೆಟ್ ನೀಡಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನ (TTD)ಪ್ರಕಟಿಸಿತ್ತು. ದಿನಕ್ಕೆ 40 ಸಾವಿರದಂತೆ 3 ದಿನಗಳಲ್ಲಿ 1 ಲಕ್ಷದ 20 ಸಾವಿರ ದರ್ಶನ ಟಿಕೆಟ್ ನೀಡಲು ಟಿಟಿಡಿ ನಿರ್ಧರಿಸಿತ್ತು. 9 ಕಡೆಗಳಲ್ಲಿ 90 ಕೌಂಟರ್‌ಗಳ ಮೂಲಕ ಸರ್ವದರ್ಶನ ಟಿಕೆಟ್ ವಿತರಿಸಲು ಟಿಟಿಡಿ ವ್ಯವಸ್ಥೆ ಮಾಡಿತ್ತು. ಇದನ್ನೂ ಓದಿ: ತಿರುಪತಿ ಕಾಲ್ತುಳಿತದಲ್ಲಿ ಬಳ್ಳಾರಿ ಮೂಲದ ಮಹಿಳೆ ದುರ್ಮರಣ
ವೈಕುಂಠ ದ್ವಾರ ದರ್ಶನದ ಟಿಕೆಟ್ ಪಡೆಯಲು ಬುಧವಾರ ಸಂಜೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದರು. ಭಾರೀ ಸಂಖ್ಯೆಯಲ್ಲಿ ಭಕ್ತರು ಸರದಿಯಲ್ಲಿ ನಿಂತಿದ್ದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯೇ ಟಿಕೆಟ್ ನೀಡಲು ಟಿಟಿಡಿ ಮುಂದಾಯಿತು. ಬೈರಾಗಿಪಟ್ಟೇಡ ರಾಮ ನಾಯ್ಡು ಶಾಲೆಯ ಬಳಿಯ ಕೌಂಟರ್‌ನಲ್ಲಿ ಸಾಲಿನಲ್ಲಿ ನಿಂತಿದ್ದ ಭಕ್ತರೊಬ್ಬರಿಗೆ ದಿಢೀರ್ ಉಸಿರಾಟದ ಸಮಸ್ಯೆಯಾಗಿದೆ.
ಆ ಭಕ್ತರನ್ನು ಆಸ್ಪತ್ರೆಗೆ ಕರೆದೊಯ್ಯಲು ಭದ್ರತಾ ಸಿಬ್ಬಂದಿ ಒಮ್ಮೆ ಕೌಂಟರ್ ಗೇಟ್ ತೆರೆದಿದ್ದಾರೆ. ಈ ವೇಳೆ ಟಿಕೆಟ್ ನೀಡಲೆಂದೇ ಈ ಗೇಟ್ ತೆರೆಯಲಾಗಿದೆ ಎಂದು ಭಾವಿಸಿದ ಭಕ್ತರು ಏಕಾಏಕಿ ಕೌಂಟರ್ ಕಡೆಗೆ ನುಗ್ಗಿದ್ದಾರೆ. ಇದರಿಂದ ನೂಕುನುಗ್ಗಲು ಸಂಭವಿಸಿ ಕೆಲವರು ಕೆಳಗೆ ಬಿದ್ದಿದ್ದಾರೆ. ಬಿದ್ದವರ ಮೇಲೆಯೇ ಕೆಲವರು ಓಡಾಡಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಎಂದು ವರದಿಯಾಗಿದೆ. ಟಿಕೆಟ್ ಪಡೆಯಲು ಎಲ್ಲಾ ಭಕ್ತರು ಸರತಿಯಲ್ಲೇ ನಿಂತಿದ್ದರು. ಎಲ್ಲಾ ಭಕ್ತರು ಒಂದೇ ಬಾರಿಗೆ ಕೌಂಟರ್ ಬಳಿ ನುಗ್ಗಿದ್ದರಿಂದ ಹಲವು ಮಂದಿ ಜನ ಸಂದಣಿಯಲ್ಲಿ ಸಿಲುಕಿದ್ದರಿಂದ ದುರಂತ ಸಂಭವಿಸಿದೆ.
ವೈಕುಂಠ ಏಕಾದಶಿ ಸಂಭ್ರಮದಲ್ಲಿ ದೇಶದ ವಿವಿಧೆಡೆಗಳಿಂದ ಸಾವಿರಾರು ಮಂದಿ ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ.
ತೀವ್ರವಾಗಿ ಗಾಯಗೊಂಡವರಿಗೆ ಪೊಲೀಸ್ ಸಿಬ್ಬಂದಿಯೇ ಪ್ರಾಥಮಿಕ ಆರೈಕೆ ಮಾಡುತ್ತಿರುವುದು ಹಾಗೂ ಗಾಯಾಳುಗಳನ್ನು ಅಂಬುಲೆನ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ದೃಶ್ಯಗಳಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.