ನವದೆಹಲಿ: ನವಜಾತ ಮಗು ನಿರಂತರವಾಗಿ ಅಳುತ್ತಿದ್ದುದನ್ನು ಕೇಳಲಾಗದೆ ತಾಯಿಯೊಬ್ಬಳು ಕಂದಮ್ಮನನ್ನು ಕಸದ ತೊಟ್ಟಿಗೆ ಎಸೆದ ಅಮಾವನೀಯ ಘಟನೆ ದೆಹಲಿಯಲ್ಲಿ ನಡೆದಿದೆ.
ಆರೋಪಿ ತಾಯಿ ನೇಹಾಳನ್ನು ಶನಿವಾರದಂದು ಪೊಲೀಸರು ಬಂಧಿಸಿದ್ದಾರೆ. ಹೆಣ್ಣು ಮಗುವನ್ನ ನೋಡಿಕೊಳ್ಳಲು ಬೇಸತ್ತು ಕೋಪದಿಂದ ಈ ರೀತಿ ಮಾಡಿದ್ದಾಗಿ ಆಕೆ ಪೊಲೀಸರಿಗೆ ಹೇಳಿದ್ದಾಳೆ. ಕಸದ ತೊಟ್ಟಿಗೆ ಎಸೆಯಲ್ಪಟ್ಟಿದ್ದ 25 ದಿನಗಳ ಹಸುಗೂಸನ್ನ ರಕ್ಷಣೆ ಮಾಡಲಾಯಿತಾದರೂ ಮಗು ಸಾವನ್ನಪ್ಪಿದೆ.
ದೆಹಲಿಯ ವಿನೋದ್‍ಪುರ್‍ನಲ್ಲಿ ಮಗು ಕಾಣೆಯಾದ ಬಗ್ಗೆ ಕುಟುಂಬಸ್ಥರು ಶುಕ್ರವಾರದಂದು ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ಕಿಡ್ನಾಪ್ ಪ್ರಕರಣ ದಾಖಲಿಸಿಕೊಂಡಿದ್ದರು.
ಮಗುವನ್ನು ಹುಡುಕುವ ಸಂದರ್ಭದಲ್ಲಿ ಪ್ರತ್ಯಕ್ಷದರ್ಶಿಯೊಬ್ಬರು, ಮಹಿಳೆ ಕಸದ ತೊಟ್ಟಿಯಲ್ಲಿ ಏನನ್ನೋ ಎಸೆಯುತ್ತಿದ್ದುದನ್ನು ನೋಡಿದ್ದೆವು ಎಂದು ಹೇಳಿದ ಬಳಿಕ ನೇಹಾ ಮೇಲೆ ಅನುಮಾನ ಮೂಡಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಂತರ ವಿಚಾರಣೆ ನಡೆಸಿದಾಗ ಆರೋಪಿ ನೇಹಾ ತನ್ನ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ಮಗುವನ್ನ ಎಸೆದ ಸ್ಥಳದ ಬಗ್ಗೆ ಬಹಿರಂಗಪಡಿಸಿದ್ದಾಳೆ. ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಮಗು ಜೀವಂತವಾಗಿ ಪತ್ತೆಯಾಗಿತ್ತು. ಕೂಡಲೇ ಕಂದಮ್ಮನನ್ನು ಜಿಟಿಬಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದ್ದು, ಅಲ್ಲಿ ಮಗು ಮೃತಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.