Districts
ಮಂಡ್ಯ: ಜೆಸಿಬಿ ಕದ್ದ ತಿಪಟೂರು ನಗರಸಭೆ ಸದಸ್ಯೆಯ ಗಂಡ ಅರೆಸ್ಟ್

ಮಂಡ್ಯ: ಜೆಸಿಬಿ ಕಳ್ಳತನ ಮಾಡಿ ಮಾರಾಟ ಮಾಡಿದ್ದ ಪ್ರಕರಣ ಪತ್ತೆ ಹೆಚ್ಚಿರುವ ಜಿಲ್ಲೆಯ ಬೆಳ್ಳೂರು ಪೊಲೀಸರು ನಗರಸಭಾ ಸದಸ್ಯೆಯ ಪತಿ ಸೇರಿ ಮೂವರನ್ನು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆಯ ತಿಪಟೂರು ನಗರಸಭಾ ಸದಸ್ಯೆ ರೂಪ ಎಂಬವರ ಪತಿ ಅನೂಪ್ ಗೌಡ, ನೆಲಮಂಗಲದ ನಾಗರಾಜು, ಕಲಾಸಿಪಾಳ್ಯದ ನವೀದ್ ಖಾನ್ ಬಂಧಿತರು. ಫೆಬ್ರವರಿ 2ರಂದು ನಾಗಮಂಗಲ ತಾಲೂಕಿನ ಬೆಳ್ಳೂರಿನ ಬಳಿ ಪ್ರಕಾಶ್ ಎಂಬವರಿಗೆ ಸೇರಿದ ಜೆಸಿಬಿ ಕಳ್ಳತನವಾಗಿತ್ತು. ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದ್ರೆ ಪ್ರಕರಣದ ಆರೋಪಿಗಳು ಪತ್ತೆಯಾಗಿರಲಿಲ್ಲ.
ಜೂನ್ 13ರಂದು ಬೆಳ್ಳೂರಿನಲ್ಲಿ ಜೆಸಿಬಿ ನಿಲ್ಲಿಸಿದ ಸ್ಥಳದಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ನಾಗರಾಜುನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಹಿಂದಿನ ಪ್ರಕರಣ ಬೆಳಕಿಗೆ ಬಂದಿದೆ. ಜೊತೆಗೆ ಅಂದು ಜೆಸಿಬಿ ಕಳ್ಳತನ ಮಾಡೋದಕ್ಕೆ ಯೋಜನೆ ರೂಪಿಸಿಕೊಟ್ಟಿದ್ದು ಅನೂಪ್ ಗೌಡ ಎಂಬುದನ್ನ ಒಪ್ಪಿಕೊಂಡಿದ್ದಾನೆ.
ಕಳ್ಳತನದ ಬಳಿಕ ಜೆಸಿಬಿಯನ್ನು ಬಿಡಿ ಭಾಗಗಳಾಗಿ ಮಾಡಿ ಕಲಾಸಿಪಾಳ್ಯದ ನವೀದ್ ಖಾನ್ ಗೆ ಮಾರಾಟ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅನೂಪ್ ಗೌಡ, ನವೀದ್ ಖಾನ್ ನನ್ನು ಬಂಧಿಸಲಾಗಿದೆ. ಇದೀಗ ಮೂವರು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
