– ಭಾರತದ ಪ್ರಮುಖ ಪ್ಯಾರಾಗ್ಲೈಡಿಂಗ್ ತಾಣಗಳು
ಭಾರತದಲ್ಲಿ ಪ್ರವಾಸೋದ್ಯಮ (Tourism) ಬೆಳದಂತೆ ದೇಶದ ವಿವಿಧೆಡೆ ಪ್ಯಾರಾಗ್ಲೈಡಿಂಗ್‌ನಂತಹ (Paragliding) ಸಾಹಸಗಳು ಸಹ ಹೆಚ್ಚಾಗುತ್ತಿದೆ. ಇನ್ನೂ ಹಕ್ಕಿಯಂತೆ ಗಾಳಿಯಲ್ಲಿ ಹಾರಬೇಕು ಎಂದು ಬಯಸುವವರಿಗೆ ಪ್ಯಾರಾಗ್ಲೈಡಿಂಗ್ ಉತ್ತಮ. ಸಾಹಸ ಚಟುವಟಿಕೆಯಲ್ಲಿ ಅತಿಯಾದ ಆಸಕ್ತಿ ಹೊಂದಿರುವವರು ಜೀವನದಲ್ಲಿ ಒಮ್ಮೆಯಾದರೂ ಪ್ಯಾರಾಗ್ಲೈಡಿಂಗ್ ಅನುಭವವನ್ನು ಪಡೆಯಬೇಕು ಎಂಬ ಆಸೆಯನ್ನು ಹೊಂದಿಯೇ ಹೊಂದಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ಯಾರಾಗ್ಲೈಡಿಂಗ್ ದುರಂತಗಳು ಹೆಚ್ಚುತ್ತಿದ್ದು ಇದೆಷ್ಟು ಸೇಫ್ ಎಂಬ ಪ್ರಶ್ನೆಯೂ ಎದ್ದಿದೆ.
Advertisement
Advertisement
ದೇಶದಲ್ಲಿ 2023 ರಲ್ಲಿ 20 ಮಂದಿ ಪ್ಯಾರಾಗ್ಲೈಡಿಂಗ್ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಇನ್ನು 2024ರಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಇನ್ನೂ 2025ರ ಆರಂಭದಲ್ಲೇ ಗೋವಾದಲ್ಲಿ (Goa) ಇಬ್ಬರು ಹಾಗೂ ಶಿಮ್ಲಾದಲ್ಲಿ ಒಬ್ಬರು ಸೇರಿದಂತೆ ಮೂರು ಜನರ ಸಾವಾಗಿದೆ. ಇಂತಹ ದುರಂತಗಳಿಗೆ ಕಾರಣ ಹಾಗೂ ದುರಂತಗಳು ಆಗದಂತೆ ತಡೆಯಲು ಕ್ರಮ ಏನು ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.
Advertisement
ಭಾರತದ ಪ್ರಮುಖ ಸುರಕ್ಷಿತ ಪ್ಯಾರಾಗ್ಲೈಡಿಂಗ್ ತಾಣಗಳು
– ಹಿಮಾಚಲ ಪ್ರದೇಶದ ಬಿರ್ ಬಿಲ್ಲಿಂಗ್
ಹಿಮಾಚಲ ಪ್ರದೇಶದ ಬಿರ್ ಬಿಲ್ಲಿಂಗ್ ಪ್ಯಾರಾಗ್ಲೈಡಿಂಗ್ ರಾಜಧಾನಿ ಎಂದೇ ಕರೆಯಲಾಗುತ್ತದೆ. ಇಲ್ಲಿ ಪ್ಯಾರಾಗ್ಲೈಡಿಂಗ್ ಕೈಗೊಳ್ಳಲು ಬಿರ್ ಲ್ಯಾಂಡಿಂಗ್ ಪಾಯಿಂಟ್‌ಗೆ ಹೋಗಬೇಕಾಗುತ್ತದೆ. ಇದು ಏಷ್ಯಾದ ಅತಿ ಎತ್ತರದ ಪ್ಯಾರಾಗ್ಲೈಡಿಂಗ್ ಪಾಯಿಂಟ್ ಆಗಿದೆ. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಜೂನ್ ತಿಂಗಳ ನಡುವೆ ಉತ್ತಮ ಸಮಯವಾಗಿದೆ.
– ತಮಿಳುನಾಡಿನ ಯಳಗಿರಿ
ತಮಿಳುನಾಡಿನ ಯಳಗಿರಿಗೆ ವೆಲ್ಲೂರು ಜಿಲ್ಲೆಯ ಅದ್ಭುತವಾದ ಗಿರಿಧಾಮವಾಗಿದೆ. ಇದು ದಕ್ಷಿಣ ಭಾಗದಲ್ಲಿರುವ ಜನಪ್ರಿಯ ಪ್ಯಾರಾಗ್ಲೈಡಿಂಗ್ ತಾಣವಾಗಿದೆ. ಸೆಪ್ಟೆಂಬರ್‌ನಿಂದ ಫೆಬ್ರವರಿ ತಿಂಗಳ ನಡುವೆ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.
Advertisement
– ಹಿಮಾಚಲ ಪ್ರದೇಶದ ಮನಾಲಿ
ಹಿಮಾಚಲ ಪ್ರದೇಶದ (Himachal Pradesh) ಅತ್ಯಂತ ರಮಣೀಯವಾದ ತಾಣವಾದ ಮನಾಲಿಯಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವುದು ಉತ್ತಮ ಅನುಭವ ನೀಡುತ್ತದೆ ಎಂದು ಭೇಟಿಕೊಟ್ಟವರ ಮಾತು. ಪರ್ವತಗಳ ಮಡಿಲಲ್ಲಿ ಹಿಮಾಲಯ ಶ್ರೇಣಿಗಳ ನಡುವೆ ಮತ್ತು 5000 ಅಡಿ ಎತ್ತರದಲ್ಲಿ ಪ್ಯಾರಾಗ್ಲೈಡಿಂಗ್ ಮಾಡಬಹುದಾಗಿದೆ. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಮೇ ತಿಂಗಳ ನಡುವೆ ಉತ್ತಮ ಸಮಯವಾಗಿದೆ.
– ಮಹಾರಾಷ್ಟ್ರದ ಕಾಮ್ಶೆತ್
ಮಹಾರಾಷ್ಟ್ರದ ಕಾಮ್ಶೆತ್ ನಲ್ಲಿ ಪ್ಯಾರಾಗ್ಲೈಡಿಂಗ್ ಪುಣೆಯಿಂದ ಕೇವಲ 45 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಜುಲೈ ತಿಂಗಳ ನಡುವೆ ಉತ್ತಮ ಸಮಯವಾಗಿದೆ.
– ಜಮ್ಮುವಿನ ಸನಾಸರ್
ಈ ತಾಣ ಸಮುದ್ರಮಟ್ಟದಿಂದ ಸುಮಾರು 2000 ಅಡಿ ಎತ್ತರದಲ್ಲಿದೆ. ಹಿಮಾಲಯದ ನಡುವೆ ಪ್ಯಾರಾಗ್ಲೈಡಿಂಗ್ ಮಾಡುವ ರೋಮಾಂಚಕ ಅನುಭವವನ್ನು ಈ ತಾಣ ನೀಡುತ್ತದೆ. ಇಲ್ಲಿಗೆ ಭೇಟಿ ನೀಡಲು ಮೇ ಮತ್ತು ಜೂನ್ ತಿಂಗಳ ನಡುವೆ ಹಾಗೂ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ನಡುವೆ ಉತ್ತಮ ಸಮಯವಾಗಿದೆ.
– ಕರ್ನಾಟಕದ ನಂದಿಗಿರಿಧಾಮ
ಇಲ್ಲಿನ (Nandhi Giridhama) ಪ್ರಕೃತಿ ಸೊಬಗು, ಸೌಂದರ್ಯ ನೊಡುವುದೇ ಚೆಂದ. ಅಂತಹದ್ದರಲ್ಲಿ ಆಗಸದಲ್ಲಿ ಹಕ್ಕಿಯಂತೆ ಹಾರಾಡುತ್ತಾ, ಇಡೀ ನಂದಿಬೆಟ್ಟದ ವಿಹಂಗಮ ನೋಟ ನೋಡುವ ಅವಕಾಶ ಇಲ್ಲಿ ನಮಗೆ ಸಿಗುತ್ತದೆ. ಅ.2024ರಲ್ಲಿ ಇಲ್ಲಿ ಪ್ಯಾರಾಗ್ಲೈಡಿಂಗ್ ಆರಂಭಿಸಲಾಗಿದೆ. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಮೇ ತಿಂಗಳ ನಡುವೆ ಉತ್ತಮ ಸಮಯವಾಗಿದೆ.
ಪ್ಯಾರಾಗ್ಲೈಡಿಂಗ್ ದುರಂತಕ್ಕೆ ಕಾರಣಗಳೇನು?
ಅಗ್ಗದ ಪ್ಯಾರಾಗ್ಲೈಡಿಂಗ್ ಬಳಕೆ ಮಾಡುವುದು. ಹೆಚ್ಚಿನ ಲಾಭವನ್ನು ಮಾಡಲು ಕಂಪನಿಗಳು ಕಡಿಮೆ ಅನುಭವ ಇರುವ ಪೈಲಟ್‌ಗಳನ್ನು ನೇಮಿಸಿಕೊಳ್ಳುವುದು ಹಾಗೂ ಹೆಚ್ಚಿನ ಹಣ ಸಂಪಾದನೆಗೆ ಅಸುರಕ್ಷಿತ ವಾತಾವರಣದಲ್ಲಿ ಹಾರಾಟ ಮಾಡುವುದು ಪ್ಯಾರಾಗ್ಲೈಡಿಂಗ್ ದುರಂತಕ್ಕೆ ಪ್ರಮುಖ ಕಾರಣವಾಗಿದೆ.
ಹಾರಾಟದ ಸಮಯದಲ್ಲಿ ತುರ್ತು ಸಂದರ್ಭದಲ್ಲಿ ಬಳಸುವ ಪ್ಯಾರಾಚೂಟ್ ಇಲ್ಲದಿರುವುದು. ಹಣಕ್ಕಾಗಿ ಉತ್ತಮ ತರಬೇತಿ ಮತ್ತು ಜ್ಞಾನವಿಲ್ಲದ ಪೈಲಟ್‌ಗಳು ಪ್ರಯಾಣಿಕರೊಂದಿಗೆ ಚಮತ್ಕಾರಿಕ ತಂತ್ರಗಳನ್ನು ಪ್ರದರ್ಶನಮಾಡುವುದು. ಅಲ್ಲದೇ ಹಾರುವ ಮೊದಲು ಪೈಲಟ್‌ಗಳು, ಪ್ರವಾಸಿಗರು ಆಲ್ಕೋಹಾಲ್ ಅಥವಾ ಡ್ರಗ್ಸ್ ಬಳಸುತ್ತಿದ್ದಾರೆ ಎಂಬ ಆರೋಪವಿದೆ. ಇಂತಹ ಜವಾಬ್ಧಾರಿ ಇಲ್ಲದ ನಡೆಗಳು ಸಹ ದುರಂತಕ್ಕೆ ಕಾರಣವಾಗಿವೆ.
ಇತ್ತೀಚೆಗೆ ತಮಿಳುನಾಡಿನ ಪ್ರವಾಸಿಗರೊಬ್ಬರು ಶಿಮ್ಲಾದ ಗಡ್ಸಾದಲ್ಲಿ ಪ್ಯಾರಾಗ್ಲೈಡಿಂಗ್ ವೇಳೆ ಮತ್ತೊಂದು ಪ್ಯಾರಾಗ್ಲೈಡಿಂಗ್‌ಗೆ ಡಿಕ್ಕಿಯಾಗಿ, ಸಾವನ್ನಪ್ಪಿದ್ದರು. ಈ ವೇಳೆ ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಮತ್ತೊಂದು ಪ್ಯಾರಾಗ್ಲೈಡಿಂಗ್‌ನ ಪೈಲಟ್ ಅದನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದರು. ಇದಾದ ಬಳಿಕ ಈ ಪ್ರದೇಶದಲ್ಲಿ ಪ್ಯಾರಾಗ್ಲೈಡಿಂಗ್‌ನ್ನು ಸ್ಥಗಿತಗೊಳಿಸಲಾಗಿದೆ.
ಪ್ಯಾರಾಗ್ಲೈಡಿಂಗ್ ಸುರಕ್ಷಿತವಾಗಿರೋದು ಹೇಗೆ?
ಹವಾಮಾನ ಮುನ್ಸೂಚನೆಗಳನ್ನು ಪರಿಶೀಲಿಸಿ ಪ್ಯಾರಾಗ್ಲೈಡಿಂಗ್‌ಗೆ ಮುಂದಾಗಬೇಕು. ಪ್ರಾರಾಗ್ಲೈಂಡಿಂಗ್ ಮಾಡುವವರು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಮೊದಲ ವಿಷಯ ಇದು. ಆಗ ಮಾತ್ರ ಇಂತಹ ದುರಂತದಿಂದ ಪಾರಾಗಲು ಸಾಧ್ಯವಿದೆ.
ಪೈಲಟ್‌ನ ಅರ್ಹತೆಗಳನ್ನು ಪರಿಶೀಲಿಸಬೇಕು. ಪೈಲಟ್‌ಗಳನ್ನು P1 ರಿಂದ P5ವರೆಗೆ ವರ್ಗೀಕರಿಸಲಾಗಿದೆ. P1 ರಿಂದ P4 ಪ್ರಮಾಣೀಕರಣಗಳು ವೈಯಕ್ತಿಕ, ವಾಣಿಜ್ಯೇತರ ಹಾರಾಟಕ್ಕಾಗಿ, P4-P5-ಮಟ್ಟದ ಪೈಲಟ್‌ಗಳು ವಾಣಿಜ್ಯ ಹಾರಾಟ ನಡೆಸಬಹುದಾಗಿದೆ. P5 ಶ್ರೇಣಿ ಪಡೆಯಲು 100-150 ಗಂಟೆಗಳ ಹಾರಾಟದ ಅನುಭವ ಇದರಬೇಕು. ಅಲ್ಲದೇ ನೀರಿನ ಮೇಲೆ ಲ್ಯಾಂಡ್ ಸೇರಿದಂತೆ ತುರ್ತು ಕಾರ್ಯವಿಧಾನಗಳನ್ನು ಒಳಗೊಂಡಿರುವ ಸಿಮ್ಯುಲೇಶನ್ ಆಫ್ ಇನ್ಸಿಡೆಂಟ್ ಇನ್ ಫ್ಲೈಟ್ (SIV) ಕೋರ್ಸ್ ಪೂರ್ಣಗೊಳಿಸುವ ಅಗತ್ಯವಿದೆ.
ಉಪಕರಣಗಳ ಗುಣಮಟ್ಟ, ಸ್ಥಿತಿಯನ್ನು ಪರಿಶೀಲಿಸಬೇಕು. ಕ್ಯಾನೋಪಿ, ಹಾರ್ನೆಸ್‌ಗಳು ಮತ್ತು ಮೀಸಲು ಪ್ಯಾರಾಚೂಟ್‌ಗಳು ಸೇರಿದಂತೆ ಎಲ್ಲಾ ಪ್ಯಾರಾಗ್ಲೈಡಿಂಗ್ ಉಪಕರಣಗಳ ಸ್ಥಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಏಕೆಂದರೆ ಸಣ್ಣ ತಾಂತ್ರಿಕ ದೋಷ ಸಹ ದುರಂತಕ್ಕೆ ಕಾರಣವಾಗಬಹುದು.
ಮೊದಲು ನೆಲದ ಮೇಲೆ ಸ್ವಲ್ಪ ಅಭ್ಯಾಸ ಮಾಡಬೇಕು. ಬಳಿಕ ಪ್ಯಾರಾಗ್ಲೈಡಿಂಗ್‌ಗೆ ಮುಂದಾಗ ಬೇಕು. ಮೊದಲ ಪ್ರಯತ್ನದಲ್ಲಿದ್ದವರು ಟೇಕ್‌ಆಫ್ ಮತ್ತು ಲ್ಯಾಂಡಿಂಗ್‌ಗೆ ಸಾಕಷ್ಟು ಜಾಗವನ್ನು ಆರಿಸಿಕೊಳ್ಳಬೇಕು ಎಂದು ಪ್ಯಾರಾಗ್ಲೈಡಿಂಗ್‌ನಲ್ಲಿ ಸಾಕಷ್ಟು ಅನುಭವ ಇರುವವರು ಅಭಿಪ್ರಾಯಪಡುತ್ತಾರೆ.