ಶಾಲಾ ಪುಸ್ತಕಗಳಲ್ಲಿ ಟಿಪ್ಪು ಪಠ್ಯ ತೆಗೆಯಲು ಚಿಂತನೆ – ಸಿಎಂ

Public TV
3 Min Read
cm bsy

– ಮುಂದಿನ ಅಧಿವೇಶನಕ್ಕೆ ಮಾಧ್ಯಮ ನಿರ್ಬಂಧ ಇಲ್ಲ
– ಮೂರು ಡಿಸಿಎಂ ಕೇಂದ್ರ ನಾಯಕರ ನಿರ್ಧಾರ

ಬೆಂಗಳೂರು: ಶಾಲಾ ಪಠ್ಯ ಪುಸ್ತಕಗಳಿಂದ ಟಿಪ್ಪು ಕುರಿತ ಪಠ್ಯಗಳನ್ನು ತೆಗೆಯಲು ಚಿಂತನೆ ನಡೆಸಿದ್ದೇವೆ, ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿದ್ದಾರೆ.

ಪ್ರಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮ ಸಂವಾದದ ವೇಳೆ ಟಿಪ್ಪು ಜಯಂತಿ ಬಗ್ಗೆ ಕೇಳಲಾದ ಪ್ರಶ್ನೆಗೆ, ಸರ್ಕಾರ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿಯನ್ನು ಆಚರಿಸುವುದಿಲ್ಲ ಎಂದು ಉತ್ತರಿಸಿದರು.

ಈ ಸಂದರ್ಭದಲ್ಲಿ ಶಾಲಾ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಪಠ್ಯವನ್ನು ತೆಗೆಯಲಾಗುತ್ತಾ ಎನ್ನುವ ಪ್ರಶ್ನೆಗೆ, ಶಾಲಾ ಪುಸ್ತಕಗಳಲ್ಲಿನ ಟಿಪ್ಪು ಕುರಿತ ಪಠ್ಯಗಳನ್ನು ತೆಗೆಯಲು ಚರ್ಚಿಸಿದ್ದೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಅಂತಹ ಯಾವುದೇ ವಿಚಾರ ಪಠ್ಯ ಪುಸ್ತಕಗಳಲ್ಲಿ ಇರಬಾರದು. ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಈ ಕುರಿತು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು.

Tipu

ಅಭಿವೃದ್ಧಿಯೇ ಆಡಳಿತದ ಮಂತ್ರದೊಂದಿಗೆ ಸರ್ಕಾರ ಕಾರ್ಯಾರಂಭ ಮಾಡಿದೆ. ಸರ್ಕಾರ ಬಂದ ಆರಂಭದಲ್ಲೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಕೈ ಜೋಡಿಸಿತು. ಕೇಂದ್ರದ ಈ ಯೋಜನೆಯ ನೆರವಿನ ಜೊತೆಗೆ ರಾಜ್ಯದಿಂದ ಹೆಚ್ಚುವರಿ ನೆರವು ಕೊಡಲಾಗುತ್ತಿದೆ. ಮೀನುಗಾರರ, ನೇಕಾರರ ಸಾಲಮನ್ನಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ, ಹಿರಿಯ ಅಧಿಕಾರಿಗಳ ಜತೆಗೂ ಆರಂಭದಲ್ಲೇ ಸರ್ಕಾರದ ಧ್ಯೇಯೋದ್ದೇಶ ತಿಳಿಸಲಾಗಿದೆ. ಎಲ್ಲ ಜಿಲ್ಲೆಗಳ ಡಿಸಿಗಳ ಜತೆಗೆ ಸಭೆ ಮಾಡಿ ಅಗತ್ಯ ಸೂಚನೆಗಳನ್ನು ನೀಡಲಾಯಿತು. ದುರಾದೃಷ್ಟವಶಾತ್ ರಾಜ್ಯದಲ್ಲಿ ನೆರೆ, ಅತಿವೃಷ್ಟಿ ಬಂತು. ನೆರೆ ಅತಿವೃಷ್ಟಿ ಎದುರಿಸಲು ಅಧಿಕಾರಿಗಳು ಹಗಲು, ರಾತ್ರಿ ದುಡಿಯುತ್ತಿದ್ದಾರೆ. ನೆರೆ, ಬರ ಎರಡನ್ನೂ ರಾಜ್ಯ ಎದುರಿಸುತ್ತಿದೆ. 22 ಜಿಲ್ಲೆಗಳಲ್ಲಿ ನೆರೆ, 5 ಜಿಲ್ಲೆಗಳಲ್ಲಿ ಬರ ಇದೆ ಎಂದು ತಿಳಿಸಿದರು.

ಎನ್‍ಡಿಆರ್‍ಎಫ್ ನಿಯಮದಡಿ ನಿಗದಿ ಮಾಡಿದ್ದಕ್ಕಿಂತ ಹೆಚ್ಚು ಪರಿಹಾರ ಕೊಡುತ್ತಿದ್ದೇವೆ. ಸ್ವಾತಂತ್ರ್ಯ ನಂತರ ಯಾವುದೇ ಸರ್ಕಾರ ಎನ್‍ಡಿಆರ್‍ಎಫ್ ನಿಯಮ ಮೀರಿ ಪರಿಹಾರ ಘೋಷಣೆ ಮಾಡಿರಲಿಲ್ಲ. ಪ್ರವಾಹಕ್ಕೆ ಕೇಂದ್ರದಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ಮಧ್ಯಂತರ ಪರಿಹಾರವಾಗಿ ಕೇಂದ್ರ 1,200 ಕೋಟಿ, ರಾಜ್ಯದಿಂದ 2,969 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ. ಪ್ರವಾಹ ಪರಿಹಾರ ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ. ತೆರಿಗೆ ಸಂಗ್ರಹದಲ್ಲಿ ಸರ್ಕಾರ ನಿಗದಿತ ಗುರಿ ಸಾಧಿಸಿದೆ. ನಿರುದ್ಯೋಗ ಪ್ರಮಾಣ ರಾಜ್ಯದಲ್ಲಿ ಶೇ.0.7ರಷ್ಟು ಇದೆ ಎಂದು ಇದೇ ವೇಳೆ ಸಿಎಂ ಸ್ಪಷ್ಟಪಡಿಸಿದರು.

blg ramadhurga flood

ನೆರೆ ಸಂತ್ರಸ್ತರಿಗೆ ಮನೆ ಕಟ್ಟಲು 5 ಲಕ್ಷ ರೂ. ಪರಿಹಾರ ಕೊಡುತ್ತಿದ್ದೇವೆ. ಈ ವರೆಗೆ ಪೂರ್ಣ ಹಾನಿಯಾದ 7,481 ಮನೆಗಳಿಗೆ 5 ಲಕ್ಷ ರೂ. ಹಣ ಬಿಡುಗಡೆಯಾಗಿದೆ. ನೆರೆ ಸಂಬಂಧ ಜನರಲ್ಲಿ ಪ್ರತಿಪಕ್ಷಗಳು ಗೊಂದಲ ಹುಟ್ಟಿಸುತ್ತಿವೆ. ನಮ್ಮ ಪರಿಹಾರ ಕಾರ್ಯಗಳಲ್ಲಿ ಚ್ಯುತಿ ಆಗಿಲ್ಲ. ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಪ್ರತಿಪಕ್ಷಗಳು ಗೊಂದಲ ಹುಟ್ಟಿಸುತ್ತಿರುವುದು ಸರಿಯಲ್ಲ. ನೆರೆ, ಬರ ಸನ್ನಿವೇಶದಲ್ಲೂ ರಾಜ್ಯದ ಅಭಿವೃದ್ಧಿ ಕೆಲಸಗಳನ್ನು ಕಡೆಗಣಿಸಿಲ್ಲ ಎಂದು ವಿವರಿಸಿದರು.

ವಿಧಾನಸಭೆಯಲ್ಲಿ ಮಾಧ್ಯಮಗಳ ಚಿತ್ರೀಕರಣಕ್ಕೆ ನಿರ್ಬಂಧ ಹೇರಿದ ಕುರಿತು ಮಾತನಾಡಿದ ಅವರು, ಈ ಕುರಿತು ನಾನು ಸ್ಪೀಕರ್ ಜತೆ ಮಾತನಾಡಿ, ಮನವರಿಕೆ ಮಾಡಿದ್ದೇನೆ. ಮುಂದಿನ ಅಧಿವೇಶನದಿಂದ ಮಾಧ್ಯಮ ನಿರ್ಬಂಧ ಇರುವುದಿಲ್ಲ. ಮುಂದಿನ ಅಧಿವೇಶನದಿಂದ ಮೊದಲಿದ್ದ ವ್ಯವಸ್ಥೆಯೇ ಬರಲಿದೆ. ಮಾಧ್ಯಮಗಳಿಗೆ ಮೊದಲಿನ ಹಾಗೆ ಅವಕಾಶ ಮಾಡಿಕೊಡಲಾಗುತ್ತದೆ. ಯಡಿಯೂರಪ್ಪ ಹೇಳಿದ ಮಾತಿನಂತೆ ನಡ್ಕೋಳ್ತಾನೆ ಎಂದು ಭರವಸೆ ನೀಡಿದರು.

ಮೂರು ಜನ ಉಪಮುಖ್ಯಮಂತ್ರಿಗಳ ಸೃಷ್ಟಿ ಕೇಂದ್ರದ ವರಿಷ್ಟರ ನಿರ್ಧಾರ. ಇದು ಕೇಂದ್ರದ ಸಹಜ ನಿರ್ಧಾರ. ಇದರಲ್ಲಿ ತಪ್ಪಿದೆ ಎಂದು ನನಗೆ ಅನಿಸುತ್ತಿಲ್ಲ. ಇದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ನೂರು ದಿನದಲ್ಲಿ ನಾನು ಯಾವ ರೀತಿ ಆಡಳಿತ ಮಾಡಿದ್ದೇನೆ ಎಂದು ಜನತೆಗೆ ಗೊತ್ತು. ಉಳಿದ ಅವಧಿಯಲ್ಲೂ ಲೋಪದೋಷ ಸರಿಪಡಿಸಿಕೊಂಡು ಕೆಲಸ ಮಾಡುತ್ತೇವೆ. ಪ್ರತಿಪಕ್ಷಗಳನ್ನೂ ವಿಶ್ವಾಸಕ್ಕೆ ತಗೊಂಡು ಕೆಲಸ ಮಾಡುತ್ತೇವೆ. ಕೇಂದ್ರ ಸರ್ಕಾರ ನನ್ನ ಕೈಕಟ್ಟಿ ಹಾಕಿಲ್ಲ. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನನಗೆ ವರಿಷ್ಠರು ಫ್ರೀ ಹ್ಯಾಂಡ್ ಕೊಟ್ಟಿದ್ದಾರೆ ಎಂದರು.

Govind Karjol Ashwath Narayan Laxman Savadi

ಮೂರು ತಿಂಗಳಲ್ಲಿ ಐಎಎಸ್ ಅಧಿಕಾರಿಗಳ ಬದಲಾವಣೆ ಕುರಿತು ಮಾತನಾಡಿದ ಅವರು, ಆಡಳಿತಾತ್ಮಕ ದೃಷ್ಟಿಯಿಂದ ಕೆಲವು ತೀರ್ಮಾನ ಅನಿವಾರ್ಯ. ಹೀಗಾಗಿ ವರ್ಗಾವಣೆ ಮಾಡಲಾಗಿದೆ. ಆಡಳಿತದ ಹಿತದೃಷ್ಟಿಯಿಂದ ಕೆಲವೊಂದು ತೀರ್ಮಾನ ಮಾಡಬೇಕು. ನನ್ನ ಯಾವುದೇ ತೀರ್ಮಾನಗಳಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡಿಲ್ಲ. ಸಂಪುಟ ರಚನೆಯಲ್ಲೂ ಅಡ್ಡಿ ಬಂದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *