ಟಿಪ್ಪು ಸುಲ್ತಾನನ ಮೂಲ ಹೆಸರು ತಿಪ್ಪೇಸ್ವಾಮಿ: ಉಗ್ರಪ್ಪ

Public TV
2 Min Read
TIPPU UGRAPPA

ಬಳ್ಳಾರಿ: ಟಿಪ್ಪು ಸುಲ್ತಾನನ ಮೂಲ ಹೆಸರು ತಿಪ್ಪೇಸ್ವಾಮಿಯಾಗಿದ್ದು ನಂತರದ ದಿನಗಳಲ್ಲಿ ಟಿಪ್ಪು ಸುಲ್ತಾನನೆಂದು ಬದಲಾವಣೆಯಾಗಿತ್ತೆಂದು ನೂತನ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

ನಗರದ ಜೋಳದರಾಶಿ ದೊಡ್ಡನಗೌಡ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಟಿಪ್ಪು ಜಯಂತಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಇತ್ತೀಚೆಗೆ ಚಳ್ಳಕೆರೆ ತಾಲೂಕಿನ ಪ್ರಸಿದ್ಧ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಕ್ಷೇತ್ರಕ್ಕೆ ತೆರಳಿದ್ದೆ. ಆಗ ಅಲ್ಲಿನ ಜನರು ಟಿಪ್ಪುವಿನ ಬಗ್ಗೆ ಮಾಹಿತಿ ನೀಡಿದ್ದರು. ತಿಪ್ಪೇರುದ್ರಸ್ವಾಮಿಯವರ ವರಪ್ರಸಾದದಿಂದ ಹುಟ್ಟಿದವರೇ ಟಿಪ್ಪು ಸುಲ್ತಾನ್, ಮೊದಲು ಅವರಿಗೆ ತಿಪ್ಪೇಸ್ವಾಮಿ ಎಂದು ಹೆಸರನ್ನು ಇಟ್ಟಿದ್ದರು. ನಂತರ ಅದು ಟಿಪ್ಪು ಸುಲ್ತಾನನಾಗಿ ಬದಲಾಯಿತು ಎಂದು ಈಗಲೂ ಆ ಭಾಗದ ಜನರು ಹೇಳುತ್ತಾರೆ ಎಂದು ಹೇಳಿದರು.

 vlcsnap 2018 11 10 21h39m55s410

ಈ ಹಿಂದೆ ಹೈದರ್ ಆಲಿ ಚಿತ್ರದುರ್ಗದ ಕೋಟೆಯನ್ನು ಮುತ್ತಿಗೆ ಹಾಕಲು ಬಂದಾಗ, ದಾರಿಯಲ್ಲಿ ಜೀವೈಕ್ಯ ಸಮಾಧಿ ಆಗಿದ್ದ ಸ್ವಾಮಿಯ ಬಳಿ ಮಕ್ಕಳಿಲ್ಲದ ಹೈದರ್ ಮಕ್ಕಳ ಭಾಗ್ಯವನ್ನು ನೀಡೆಂದು ಕೇಳಿಕೊಂಡಿದ್ದರು. ಅಲ್ಲದೇ ಮಗುವಾದರೇ ನಿಮ್ಮ ಹೆಸರನ್ನೇ ಇಟ್ಟು ಮಂದಿರವನ್ನು ಕಟ್ಟಿಸುತ್ತೇನೆ ಎಂದು ಬೇಡಿಕೊಂಡಿದ್ದರು. ಸ್ವಾಮಿಯ ಅನುಗ್ರಹದಿಂದ ಹುಟ್ಟಿದವರೇ ಟಿಪ್ಪು ಸುಲ್ತಾನ್. ಇದಕ್ಕೆ ಸಾಕ್ಷಿ ಎಂಬಂತೆ ತಿಪ್ಪೇರುದ್ರ ಸ್ವಾಮಿಯ ದೇವಾಲಯ ಹಿಂದೂ ಮತ್ತು ಮುಸ್ಲಿಂ ಶೈಲಿಯಲ್ಲಿದೆ. ಈ ಮಂದಿರಕ್ಕೆ ಎಲ್ಲಾ ಮುಸ್ಲಿಂ ಬಾಂಧವರು ಬರುತ್ತಾರೆ. ದೇವಾಲಯದ ತೀರ್ಥ ಕುಡಿದು, ಗಂಧವನ್ನು ಹಚ್ಚುತ್ತಾರೆ. ಪ್ರತಿಯೊಬ್ಬ ಮುಸ್ಲಿಮರ ಮನೆಯಲ್ಲಿ ಸ್ವಾಮಿಯ ಫೋಟೋ ಇಟ್ಟು ಪೂಜೆ ಸಲ್ಲಿಸುತ್ತಾರೆ ಎಂದು ತಿಳಿಸಿದರು.

vlcsnap 2018 11 10 21h40m21s937

ಯಾರೂ ಸಹ ಯಾವ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ರಾಮಾಯಣದಲ್ಲಿ ಸೀತೆ ಯಾವ ಜಾತಿ ಯಾರಿಗಾದರೂ ಗೊತ್ತಾ? ಸ್ವತಃ ಸೀತೆ ತಂದೆ ಜನಕ ಮಹರಾಜರಿಗೂ ಗೊತ್ತಿಲ್ಲ. ಯಾರಿಗೂ ಆಕೆಯ ಕುಲಾ-ಗೋತ್ರ ಗೊತ್ತಿಲ್ಲ. ಆದರೂ ಅವರ ಸದ್ಗುಣಗಳು ನಮಗೆಲ್ಲ ಆದರ್ಶವಾಗಿದೆ. ಟಿಪ್ಪು ಜಯಂತಿ ಆಚರಣೆಗೆ ಯಾರೂ ಕೂಡ ವಿರೋಧ ವ್ಯಕ್ತಪಡಿಸಬಾರದು. ಅಲ್ಲದೇ ಬ್ರಿಟಿಷರ ವಿರುದ್ಧ ಹೋರಾಡಿದವರಲ್ಲಿ ಟಿಪ್ಪು ಕೂಡ ಪ್ರಮುಖರೆಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ರವರೆ ಹೇಳಿದ್ದಾರೆ. ಹೀಗಾಗಿ ಇಂತಹ ಜಯಂತಿಗಳಲ್ಲಿ ಹುಳುಕನ್ನು ಹುಡುಕುವುದಕ್ಕಿಂತ ಅವರ ಆದರ್ಶ ಪಾಲಿಸಬೇಕೆಂದು ಅಭಿಪ್ರಾಯಪಟ್ಟರು.

HDK TIPPU siddaramaiah

ಟಿಪ್ಪು ಜಯಂತಿ ಆಚರಣೆ ಮಾಡಿದ ಶ್ರೇಯಸ್ಸು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಆದರೆ ಇಂದು ಕೆಲವರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು ಈ ಕಾರ್ಯಕ್ರಮಕ್ಕೆ ಭಾಗವಹಿಸುತ್ತಿದ್ದರು. ಆದರೆ ಇಂದು ರಾಜಕಾರಣಕ್ಕಾಗಿ ವಿರೋಧಿಸುತ್ತಿದ್ದಾರೆಂದು ಬಿಎಸ್ ಯಡಿಯೂರಪ್ಪನವರಿಗೆ ಪರೋಕ್ಷವಾಗಿ ಕುಟುಕಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *