ಯಾದಗಿರಿ: ನಗರದಲ್ಲಿ ಎರಡು ಕೋಮುಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದ್ದ ಟಿಪ್ಪು ಸರ್ಕಲ್ (Tippu Circle) ವಿವಾದ ಸದ್ಯ ತಾತ್ಕಾಲಿಕ ಸುಖಾಂತ್ಯ ಕಂಡಿದೆ. ಅಹಿತಕರ ಘಟನೆ ಮುನ್ಸೂಚನೆ ಅರಿತಿದ್ದ ಯಾದಗಿರಿ ಪೊಲೀಸರ (Yadgir Police) ಬುದ್ಧಿವಂತಿಕೆ ನಡೆಯಿಂದ ಪ್ರತಿಭಟನೆಗೂ ಅವಕಾಶ ಸಿಗಲಿಲ್ಲ. ಶಾಂತಿ ಭಂಗಕ್ಕೆ ಮುಂದಾದವರನ್ನು ಬಂಧಿಸಿದ ಪೊಲೀಸರು, ಜನರ ಆತಂಕ ದೂರ ಮಾಡಿದ್ದಾರೆ.
Advertisement
ಕಳೆದೊಂದು ವಾರದಿಂದ ಇಡೀ ಯಾದಗಿರಿ (Yadgir) ನಗರದ ಸಾಮರಸ್ಯಕ್ಕೆ ಕೊಳ್ಳಿ ಇಟ್ಟು, ಎರಡು ಕೋಮುಗಳ ನಡುವೆ ಪರಸ್ಪರ ತಿಕ್ಕಾಟಕ್ಕೆ ಕಾರಣವಾಗಿದ್ದ ವಿವಾದಿತ ಟಿಪ್ಪು ಸರ್ಕಲ್ ವಿಚಾರ ಇದೀಗ ತಾತ್ಕಾಲಿಕ ಸುಖಾಂತ್ಯ ಕಂಡಿದೆ. ಸರ್ಕಲ್ ತೆರವಿಗೆ ಗಡುವು ನೀಡಿ, ಜೈ ಶಿವಾಜಿ ಸಂಘಟನೆಯ (Jai Shivaji Organisation) ಪರಶುರಾಮ್ ಶೇಗೂರಕರ್ (Parashuram Shegoorkar) ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿತ್ತು. ಸ್ವತಃ ತಾವೇ ಪ್ರತಿಭಟನೆ ಮೂಲಕ ವಿವಾದಿತ ಸರ್ಕಲ್‌ನಲ್ಲಿ ಹಾಕಿರುವ ಟಿಪ್ಪು ಭಾವಚಿತ್ರ ಕಿತ್ತೆಸೆಯುವುದಾಗಿ ಹೇಳಿಕೆ ನೀಡಿದ್ದರು.
Advertisement
Advertisement
ಪರಶುರಾಮ್ ಶೇಗೂರಕರ್ ಈ ಹೇಳಿಕೆಯಿಂದ ಕೆರಳಿ ಕೆಂಡವಾಗಿದ್ದ ಟಿಪ್ಪು ಸಂಘಟನೆ ಅಬ್ದುಲ್ ಕರೀಂ ನೇತೃತ್ವದ ತಂಡ ಪ್ರಾಣ ಹೋದರೂ ತೆರವಿಗೆ ಅವಕಾಶ ಕೊಡಲ್ಲ ಎಂದು ಪ್ರತಿ ಸವಾಲು ಹಾಕಿದ್ದರು. ಇಬ್ಬರ ಹೇಳಿಕೆಗಳಿಂದ ಜನರ ನೆಮ್ಮದಿ ಹಾಳಾಗಿತ್ತು. ಭಾನುವಾರವೇ ಅಲರ್ಟ್ ಆಗಿದ್ದ ಯಾದಗಿರಿ ಪೊಲೀಸರು ಇಬ್ಬರ ಮೇಲೆ ಕೋಮು ಪ್ರಚೋದನೆ, ಸಾಮರಸ್ಯ ಹಾಳು ಮಾಡಿದ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು, ಪ್ರತಿಭಟನೆ ಮಾಡದಂತೆ ಎಚ್ಚರಿಕೆ ನೀಡಿದ್ದರು. ಹೀಗಾಗಿ ಸ್ಥಳದಲ್ಲಿ ಬಿಗಿ ಭದ್ರತೆಯನ್ನೂ ಕೈಗೊಳ್ಳಲಾಗಿತ್ತು. ಆದರೆ ಪೊಲೀಸರ ಎಚ್ಚರಿಕೆಯ ನಡುವೆಯೂ ಪ್ರತಿಭಟನೆಗೆ ಮುಂದಾಗಿದ್ದ ಪರಶುರಾಮ್ ಶೇಗೂರಕರ್ ಹಾಗೂ ಶಂಕರ್‌ನನ್ನು ಬಂಧಿಸಿ ಕರೆದೊಯ್ದಿದ್ದಾರೆ.
Advertisement
ನಗರದ ಹತ್ತಿಕುಣಿ ಕ್ರಾಸ್ ಬಳಿ ಕಳೆದ 2 ದಿನಗಳಿಂದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿತ್ತು. ಸ್ವಲ್ಪ ಯಾಮಾರಿದರೂ 2 ಸಮುದಾಯಗಳ ನಡುವಿನ ಸಂಘರ್ಷಕ್ಕೆ ಹಾದಿ ಮಾಡಿಕೊಟ್ಟಂತಾಗುತ್ತಿತ್ತು. ಹೀಗಾಗಿಯೇ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡದಂತೆ 144 ಸೆಕ್ಷನ್ ಜಾರಿಗೊಳಿಸಿ, ಆದೇಶ ನೀಡಿದ್ದರು. ಪೊಲೀಸರ ಎಚ್ಚರಿಕೆಯ ನಂತರ ಟಿಪ್ಪು ಸಂಘಟನೆಯ ಅಬ್ದುಲ್ ಕರೀಂ ಭಾನುವಾರ ಮುಂಬೈಗೆ ಹೋಗಿದ್ದಾರೆ. ಆದರೆ ಜೈ ಶಿವಾಜಿ ಸಂಘಟನೆಯ ಪರಶುರಾಮ್ ಶೇಗೂರಕರ್ ಮಾತ್ರ ಪೊಲೀಸರ ನೋಟಿಸ್ ಗೂ ಕ್ಯಾರೇ ಎನ್ನದೇ, ಗುಂಪು ಕಟ್ಟಿಕೊಂಡು ಪ್ರತಿಭಟನೆಗೆ ಮುಂದಾಗಿ, ಬಂಧಿತರಾಗಿದ್ದಾರೆ. ಇದನ್ನೂ ಓದಿ: ಕೋಮು ಸಂಘರ್ಷದ ಉದ್ದೇಶಕ್ಕಾಗಿ ಹಿಂದೂ ಧರ್ಮವನ್ನು ಬಳಸಬೇಡಿ – ಬಿಜೆಪಿ ನಾಯಕನಿಗೆ ಸುಪ್ರೀಂ ಚಾಟಿ
ಭಾನುವಾರವೇ ಯಾದಗಿರಿಯ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದ ಕಾರಣ ಪರಶುರಾಮ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ ಪರಶುರಾಮ್ ಶೇಗೂರಕರ್ ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಬಂಧನದ ವೇಳೆ ಯಾದಗಿರಿ ಸಿಪಿಐ ಸುನೀಲ್ ಮೂಲಿಮನಿ ಅವರ ಹಣೆ ಹಾಗೂ ಕೈಗೆ ಗಾಯಗಳಾಗಿದ್ದು, ನೂಕಾಟ, ತಳ್ಳಾಟದ ನಡುವೆಯೇ ಪೊಲೀಸರು ಪರಶುರಾಮ್ ಶೇಗೂರಕರ್‌ನನ್ನು ಬಂಧಿಸಿ ಕರೆದೊಯ್ದಿದ್ದಾರೆ.
1996ರಲ್ಲಿ ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರ ನಾಮಕರಣದ ವೃತ್ತಕ್ಕೆ 2010ರಲ್ಲಿ ಟಿಪ್ಪು ಸರ್ಕಲ್ ಎಂದು ಮರುನಾಮರಣ ಮಾಡಿದ್ದೇ ವಿವಾದಕ್ಕೆ ಕಾರಣ ಎನ್ನಲಾಗಿದೆ. ಸದ್ಯ ಶಾಂತ ಎನಿಸಿದರೂ, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಚುನಾವಣೆ ಬಂದಾಗ ಮಾತ್ರ ನಾಯಕರು ಕಾಣಿಸುತ್ತಾರೆ- ಅಣ್ಣಾಮಲೈ ವಾಗ್ದಾಳಿ