-ಹೋಂ ಗಾರ್ಡ್ ಮೇಲೆ ಹಲ್ಲೆ
ಚಿಕ್ಕಬಳ್ಳಾಪುರ: ಕರ್ತವ್ಯನಿರತ ಗೃಹರಕ್ಷಕ ದಳ ಸಿಬ್ಬಂದಿ ಮೇಲೆ ಮಾಜಿ ನಗರಸಭಾ ಸದಸ್ಯನ ಸಹೋದರನೋರ್ವ ಅವಾಚ್ಯ ಪದಗಳಿಂದ ನಿಂದಿಸಿ, ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಕಣಿವೆ ನಾರಾಯಣಪುರ ಚೆಕ್ ಪೋಸ್ಟ್ ಬಳಿ ನಡೆಸಿದೆ.
ಅನಿಲ್ ಹಲ್ಲೆಗೊಳಗಾದ ಹೋಂ ಗಾರ್ಡ್. ಚಿಕ್ಕಬಳ್ಳಾಪುರ ನಗರಸಭೆಯ 4 ನೇ ವಾರ್ಡಿನ ಮಾಜಿ ನಗರಸಭಾ ಸದಸ್ಯನ ಸಹೋದರ ರವಿಕುಮಾರ್ ಹೋಂ ಗಾರ್ಡ್ ಮೇಲೆ ಹಲ್ಲೆ ಮಾಡಿದ್ದಾನೆ. ಕಣಿವೆನಾರಾಯಣಪುರ ಗ್ರಾಮದ ಸುತ್ತಮುತ್ತಲೂ ಸಾಕಷ್ಟು ಜಲ್ಲಿ ಕ್ರಷರ್ ಗಳಿದ್ದು, ಅಕ್ರಮ ಜಲ್ಲಿ ಕಲ್ಲು ಸಾಗಾಟ ತಡೆಯುವ ಉದ್ದೇಶದಿಂದ ಜಿಲ್ಲಾಡಳಿತ ಪೊಲೀಸ್ ಇಲಾಖೆ ಜಂಟಿಯಾಗಿ ಚೆಕ್ ಪೋಸ್ಟ್ ಅರಂಭಿಸಿದೆ.
ಈ ಚೆಕ್ ಪೋಸ್ಟ್ ನಲ್ಲಿ ಕಲ್ಲು ಕ್ವಾರಿ ಕ್ರಷರ್ ಗಳಿಂದ ಬರುವ ಟಿಪ್ಪರ್ ಲಾರಿಗಳನ್ನ ತಡೆದು ದಾಖಲಾತಿಗಳನ್ನ ಪರಿಶೀಲನೆ ಮಾಡಿ ಕಳುಹಿಸಬೇಕಾದದ್ದು ಸಿಬ್ಬಂದಿಯ ಕೆಲಸ. ಆದರೆ ಈ ಕೆಲಸ ಮಾಡಿದ್ದಕ್ಕೆ ಮಾಜಿ ನಗರಸಭಾ ಸದಸ್ಯನ ಸಹೋದರ ಹಾಗೂ ಟಿಪ್ಪರ್ ಮಾಲೀಕ ರವಿಕುಮಾರ್ ಹೋಂ ಗಾರ್ಡ್ ಗೆ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ.
ಅಸಲಿಗೆ ರವಿಕುಮಾರ್ ಗೆ ಸೇರಿದ ಟಿಪ್ಪರ್ ಲಾರಿಯನ್ನ ತಡೆದು ದಾಖಲಾತಿ ಪರಿಶೀಲನೆ ನಡೆಸಲಾಗುತ್ತಿತ್ತು. ಈ ಮಾಹಿತಿಯನ್ನು ಟಿಪ್ಪರ್ ಚಾಲಕ ಮಾಲೀಕ ರವಿಕುಮಾರನಿಗೆ ತಿಳಿಸಿದ್ದಾನೆ. ಈ ವೇಳೆ ಸ್ಥಳಕ್ಕೆ ಬಂದ ರವಿಕುಮಾರ್ ಏಕಾಏಕಿ ನೀನು ಯಾವನೋ ನನ್ನ ಗಾಡಿ ಅಡ್ಡ ಹಾಕೋಕೆ ಅಂತ ನಿಂದಿಸಿ ಹೋಂ ಗಾರ್ಡ್ ಮೇಲೆ ಹಲ್ಲೆ ಮಾಡಿದ್ದಾನೆ. ಈ ಘಟನೆ ಮೇ 10 ರಂದು ನಡೆದಿದ್ದು, ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿರುವ ರವಿಕುಮಾರ್ ವಿರೋಧ ನಮಗ್ಯಾಕೆ ಅಂತ ಭಯಬಿದ್ದಿದ್ದ ಹೋಂ ಗಾರ್ಡ್ ದೂರು ನೀಡದೆ ಸುಮ್ಮನಾಗಿದ್ದರು. ಆದರೆ ಸ್ಥಳೀಯರೊಬ್ಬರು ಈ ವಿಡಿಯೋ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಈ ವಿಚಾರವನ್ನ ಚಿಕ್ಕಬಳ್ಳಾಪುರ ಎಸ್‍ಪಿ ಸಂತೋಷ್ ಬಾಬು ಗಮನಕ್ಕೂ ತಂದಿದ್ದು, ಸದ್ಯ ಹಲ್ಲೆ ಮಾಡಿದ ರವಿಕುಮಾರ್ ವಿರುದ್ಧ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಚಿಕ್ಕಬಳ್ಳಾಪುರ ಪೊಲೀಸರು ರವಿಕುಮಾರ್‌ನನ್ನ ವಶಕ್ಕೆ ಪಡೆದು ನಂದಿಗಿರಿಧಾಮ ಪೊಲೀಸರಿಗೆ ಒಪ್ಪಿಸಿದ್ದಾರೆ.