ಸ್ವಚ್ಛ ಭಾರತ್ ಶೌಚಾಲಯದ ಟೈಲ್ಸ್ ಮೇಲೆ ಮಹಾತ್ಮ ಗಾಂಧಿ, ಅಶೋಕ ಚಕ್ರ

Public TV
1 Min Read
swatch barath toilet 3

ನವದೆಹಲಿ: ಗಾಂಧಿ ಜಯಂತಿಯಂದು ಆರಂಭಗೊಂಡಿದ್ದ ಸ್ವಚ್ಛಭಾರತ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಲಾಗಿದ್ದ ಶೌಚಾಲಯದಲ್ಲಿ ಗಾಂಧೀಜಿ ಮತ್ತು ಅಶೋಕ ಚಕ್ರದ ಚಿತ್ರಗಳುಳ್ಳ ಟೈಲ್ಸ್ ಗಳನ್ನು ಬಳಸಿ ಅವಮಾನ ಮಾಡಲಾಗಿದೆ.

ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ಸ್ವಚ್ಛ ಭಾರತ ಯೋಜನೆಯ ಅಭಿಯಾನದ ಅಡಿ ನಿರ್ಮಿಸಲಾದ ಶೌಚಾಲಯದ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದು, ಪೂಜ್ಯ ಗಾಂಧೀಜಿ ಅವರ ಭಾವಚಿತ್ರವುಳ್ಳ ಟೈಲ್ಸ್ ಗಳನ್ನು ಬಳಸಿ ಶೌಚಾಲಯ ನಿರ್ಮಿಸಿರುವುದು ತಪ್ಪು. ಈ ರೀತಿ ಮಾಡಿ ರಾಷ್ಟ್ರಪಿತ ಹಾಗೂ ಆಶೋಕ ಚಕ್ರಕ್ಕೆ ಅವಮಾನ ಮಾಡಲಾಗಿದೆ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಸಿಡಿದೆದ್ದಿದ್ದಾರೆ.

ashoka pillar and gandhiji

ಸದ್ಯ ಈ ಶೌಚಾಲಯದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ಈ ಬಗ್ಗೆ ಎಲ್ಲೆಡೆ ಬಾರೀ ವಿರೋಧ ವ್ಯಕ್ತವಾಗುತ್ತಿದೆ.

ದಿಬಾಯ್ ತಹಸೀಲ್‍ನ ಇಚ್ಚವರಿ ಗ್ರಾಮದಲ್ಲಿ `ಸ್ವಚ್ಛ ಭಾರತ’ ಅಭಿಯಾನದಡಿ ಸುಮಾರು 508 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ 13 ಶೌಚಾಲಯಗಳಲ್ಲಿ ಗಾಂಧೀಜಿ ಹಾಗೂ ಅಶೋಕ ಚಕ್ರ ಚಿತ್ರವಿರುವ ಟೈಲ್ಸ್ ಗಳನ್ನು ನಿರ್ಮಾಣಕ್ಕೆ ಬಳಸಲಾಗಿದೆ. ಈಗಾಗಲೇ ಇದಕ್ಕೆ ಕಾರಣರಾದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಗ್ರಾಮದ ಸರಪಂಚ್ ವಿರುದ್ಧವೂ ಕ್ರಮಕೈಗೊಂಡಿದ್ದೇವೆ ಎಂದು ಜಿಲ್ಲಾ ಪಂಚಾಯತ್ ಅಧಿಕಾರಿ ಅಮರ್ಜಿತ್ ಸಿಂಗ್ ಹೇಳಿದ್ದಾರೆ.

swatch barath toilet 1

ವಾರದ ಹಿಂದೆಯೇ ಶೌಚಾಲಯಗಳನ್ನು ನಿರ್ಮಿಸಲು ಈ ಟೈಲ್ಸ್ ಗಳನ್ನು ಬಳಸಲಾಗಿದೆ. ಹಾಗೆಯೇ ಇದನ್ನು ಸ್ಥಳೀಯ ಮಾರುಕಟ್ಟೆಯಿಂದ ಖರೀದಿಸಲಾಗಿತ್ತು. ಆದರೆ ಈ ಬಗ್ಗೆ ನಮಗೆ ತಿಳಿಯುತ್ತಿದ್ದಂತೆ ನಾವು ಕ್ರಮ ಕೈಗೊಂಡಿದ್ದೇವೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಏಪ್ರಿಲ್‍ನಲ್ಲಿ ಜಟ್ವಾಡ ಗ್ರಾಮದಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ನಿರ್ಮಿಸಲಾಗಿದ್ದ ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಇಲ್ಲದೆ ಜನರು ಪರದಾಡುವಂತಾಗಿತ್ತು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಜನರು ಮತ್ತೆ ಶೌಚಕ್ಕಾಗಿ ಬಯಲುಗಳಿಗೆ ಹೋಗಲು ಶುರುಮಾಡಿದ್ದಾರೆ.

ಈ ಪ್ರದೇಶಗಳಲ್ಲಿ ವಾಸಿಸುವವರು ದಿನ ಕೂಲಿ ಕಾರ್ಮಿಕರು. ಹೀಗಾಗಿ ಪ್ರತಿನಿತ್ಯ ಈ ಶೌಚಾಲಯಗಳಿಗೆ ಹಣ ನೀಡಿ ಹೋಗಲು ನಮಗೆ ಸಾಧ್ಯವಿಲ್ಲ, ಅದಕ್ಕೆ ಬಯಲುಗಳಿಗೆ ಹೋಗುತ್ತೇವೆ ಎಂದು ಜನರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *