– 18 ಗಂಟೆ ಟೆರೇಸ್‍ನಲ್ಲಿ ನಿಂತು ಆತ್ಮಹತ್ಯೆ ಬೆದರಿಕೆ
ನವದೆಹಲಿ: ಪತ್ನಿ ಜೊತೆ ಜಗಳವಾಡಿ ಟಿಕ್‍ಟಾಕ್ ಸ್ಟಾರ್ ಒಬ್ಬ ಕಟ್ಟಡವೇರಿದ ಘಟನೆ ಭಾನುವಾರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
ಸಂದೀಪ್ ಅಲಿಯಾಸ್ ಅರ್ಮಾನ್ ಮಲ್ಲಿಕ್ ಕಟ್ಟಡವೇರಿದ ವ್ಯಕ್ತಿ. ಭಾನುವಾರ ಮಧ್ಯಾಹ್ನ ಹರಿನಗರದಲ್ಲಿರುವ 10 ಅಂತಸ್ತಿನ ಹೋಟೆಲಿನ ಟೆರೇಸ್‍ಗೆ ಹೋಗಿದ್ದ ಸಂದೀಪ್ ಸೋಮವಾರ ಬೆಳಗ್ಗೆ 8.45ಕ್ಕೆ ಕೆಳಗೆ ಇಳಿದಿದ್ದಾನೆ. ಅಲ್ಲದೆ ಇಳಿಯುವುದಕ್ಕೂ ಮೊದಲು ತಾನು ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಟಿಕ್‍ಟಾಕ್‍ನಲ್ಲಿ ಸಂದೀಪ್‍ಗೆ 50 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಹೋಟೆಲಿನ ಟೆರೇಸ್‍ಗೆ ಹೋದ ಬಳಿಕ ಸಂದೀಪ್ ಕೆಲವು ಟಿಕ್‍ಟಾಕ್ ವಿಡಿಯೋ ಮಾಡಿದ್ದಾನೆ. ಅಲ್ಲದೆ ಒಂದು ಪತ್ರವನ್ನು ಕೂಡ ಟಿಕ್‍ಟಾಕ್‍ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಪತ್ರದಲ್ಲಿ ಸಂದೀಪ್ ತನ್ನ ಪತ್ನಿಯೇ ಎಲ್ಲದಕ್ಕೂ ಹೊಣೆ ಎಂದು ಬರೆದಿದ್ದಾನೆ.
ಟಿಕ್‍ಟಾಕ್ ವಿಡಿಯೋದಲ್ಲಿ ಸಂದೀಪ್, “ನಾನು ನನ್ನ ಪತ್ನಿ ಹಾಗೂ ಆಕೆಯ ಸಹೋದರಿಯರಿಂದ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದೇನೆ. ಏಕೆಂದರೆ ಎಲ್ಲರೂ ಸೇರಿ ನನ್ನನ್ನು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿದ್ದಾನೆ.
ಅಪ್ಲೋಡ್ ಮಾಡಿದ ಪತ್ರದಲ್ಲಿ ಸಂದೀಪ್ ತನ್ನನ್ನು ಇಳಿಸಲು ಬಂದ ಪೊಲೀಸರ ಮುಂದೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾನೆ. ಅಲ್ಲದೆ ಆ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಕಟ್ಟಡದಿಂದ ಇಳಿಯುವುದಾಗಿ ಹೇಳಿದ್ದನು. ಪೊಲೀಸರು ಇದಕ್ಕೆ ಒಪ್ಪಿದಾಗ ಸಂದೀಪ್ ತನ್ನ ಮೇಲಿರುವ ಎಲ್ಲ ಪ್ರಕರಣಗಳನ್ನು ರದ್ದುಪಡಿಸಬೇಕೆಂದು ಎಂದು ಹೇಳಿದ್ದಾನೆ.
ಪೊಲೀಸರ ಪ್ರಕಾರ, ಸಂದೀಪ್ ಅಹಮದಾಬಾದ್ ನಿವಾಸಿಯಾಗಿದ್ದು, ದೆಹಲಿಯ ನಿಹಾಲ್ ವಿಹಾರ್ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಸಂದೀಪ್ ತನ್ನ ಸ್ನೇಹಿತೆ ಜೊತೆ ಹೋಟೆಲಿಗೆ ಹೋಗಿದ್ದನು. ಈ ವಿಷಯ ತಿಳಿದ ಆತನ ಪತ್ನಿ ಸ್ಥಳಕ್ಕೆ ಬಂದು ಜಗಳವಾಡಿದ್ದಾಳೆ. ಇದರಿಂದ ಕೋಪಗೊಂಡ ಸಂದೀಪ್ ಹೋಟೆಲಿನ ಟೆರೇಸ್‍ಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.