ಲಕ್ನೋ: ತನ್ನ ಮನದರಸಿ ಸೇರಿ 5 ದಿನದಲ್ಲಿ ಮೂವರನ್ನು ಟಿಕ್ ಟಾಕ್ ಬಳಕೆದಾರನೊಬ್ಬ ಕೊಲೆಗೈದ ಅಮಾನವೀಯ ಘಟನೆಯೊಂದು ಉತ್ತರಪ್ರದೇಶದ ಬಿಜ್ನೋರ್ ಎಂಬಲ್ಲಿ ನಡೆದಿದೆ.
ಆರೋಪಿಯನ್ನು ಅಶ್ವನಿ ಅಲಿಯಾಸ್ ಜಾನಿ ದಾದ ಎಂದು ಗುರುತಿಸಲಾಗಿದೆ. ಆರೋಪಿ ಡ್ರಗ್ ಸೇವನೆ ಮಾಡುತ್ತಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಸದ್ಯ ಆತನ ಹುಡುಕಾಟಕ್ಕಾಗಿ ಭಾರೀ ಪ್ರಯತ್ನಗಳು ನಡೆದವು. ಕ್ಷಿಪ್ರ ಕಾರ್ಯಪಡೆ(ಆರ್‍ಎಎಫ್) ಅಧಿಕಾರಿಗಳು ಕೂಡ ಪೊಲೀಸರ ಜೊತೆ ಸೇರಿಕೊಂಡು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದರು.
5 ದಿನಗಳಲ್ಲಿ ಆರೋಪಿ ಮೂವರನ್ನು ಕೊಲೆ ಮಾಡಿದ್ದಾನೆ. ಈತ ತನ್ನ ಕ್ರಶ್ ನಿಟಿಕಾ, ರಾಹುಲ್ ಕುಮಾರ್ ಹಾಗೂ ಕೃಷ್ಣ ಕುಮಾರ್ ಎಂಬವರನ್ನು ಕೊಲೆ ಮಾಡಿದ್ದಾನೆ. ರಾಹುಲ್, ಕೃಷ್ಣ ಸಂಬಂಧಿಕರಾಗಿದ್ದು, ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.
ಅಶ್ವನಿ ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿಸುವ ಮೂಲಕ ಸಕ್ರಿಯನಾಗಿದ್ದನು. ಅಲ್ಲದೆ ಅವುಗಳಿಗೆ `ನನ್ನ ಹಾನಿ ನೋಡಿ’ ‘ಎಲ್ಲವನ್ನೂ ನಾನು ನಾಶ ಮಾಡುತ್ತೇನೆ, ವೈಟ್ ಆ್ಯಂಡ್ ಸೀ’ ಎಂದು ತಲೆ ಬರಹ ಕೊಡುತ್ತಿದ್ದನು. ಈತ ಇರುವ ಸ್ಥಳದ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಪೊಲೀಸರು ಅಶ್ವನಿಯನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಮಾಹಿತಿಗಳ ಪ್ರಕಾರ ಅಶ್ವನಿ ಸ್ಯೋಹಾರ ಪ್ರದೇಶದ ಬಿಜ್ನೋರ್ ನಿವಾಸಿಯಾಗಿದ್ದು, 3 ದಿನಗಳ ಹಿಂದೆ ಈತ ತನ್ನ ಕ್ರಶ್ ನನ್ನು ಕೊಲೆ ಮಾಡಿದ್ದನು.
2002ರಲ್ಲಿ ನಿಟಿಕ ತನ್ನ ಅಂಕಲ್ ಮನೆಗೆ ಬಂದಿದ್ದಳು. ಈ ವೇಳೆ ಅಶ್ವನಿಗೆ ಆಕೆಯ ಮೇಲೆ ಕ್ರಶ್ ಆಗಿದೆ. ಇದನ್ನು ನಿರಾಕರಿಸಿದ ನಿಟಿಕಾ ದುಬೈಗೆ ತೆರಳಿದ್ದಳು. ಅಲ್ಲಿಯೇ ಆಕೆ ಉದ್ಯೋಗ ಮಾಡಿಕೊಂಡಿದ್ದಳು. ಆದರೆ ಇತ್ತೀಚೆಗೆ ಆಕೆಗೆ ಮದುವೆ ಕೂಡ ಆಗಿದ್ದು, ಹೀಗಾಗಿ ನಿಟಿಕಾ ದೌಲತಾಬಾದ್ ಗೆ ತೆರಳಿದ್ದಳು. ಈ ವಿಚಾರ ಆರೋಪಿ ಗಮನಕ್ಕೆ ಬಂದಿದ್ದು, ಅಶ್ವಾನಿ ನೇರವಾಗಿ ಆಕೆಯ ಮನೆಗೆ ತೆರಳಿ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ನಿಟಿಕಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಈ ಕೊಲೆ ವಿಚಾರ ಬೆಳಕಿಗೆ ಬಂದ ಬಳಿಕ ಪೊಲೀಸರು ಅಶ್ವನಿಯನ್ನು ಬಂಧಿಸಲು 21 ನಿಲ್ದಾಣಗಳಲ್ಲಿ ಪೊಲೀಸರ ತಂಡವನ್ನು ನಿಯೋಜನೆ ಮಾಡಲಾಗಿದೆ. ಶೀಘ್ರವೇ ಆತನನ್ನು ಬಂಧಿಸಲಾಗುವುದು ಎಂದು ಬಿಜ್ನೋರ್ ಪೊಲೀಸ್ ಅಧೀಕ್ಷಕ ಸಂಜೀವ್ ತ್ಯಾಗಿ ತಿಳಿಸಿದ್ದಾರೆ.