ಹೈದರಾಬಾದ್: ಮಹಾಮಾರಿ ಕೊರೊನಾ ವೈರಸ್‍ಗೆ ಇನ್ನೂ ಸೂಕ್ತವಾದ ಔಷಧಿಯನ್ನು ಕಂಡುಹಿಡಿದಿಲ್ಲ. ಆದರೂ ಕೊರೊನಾದಿಂದ ನಿಮ್ಮನ್ನ ರಕ್ಷಣೆ ಮಾಡಿಕೊಳ್ಳಲು ‘ಮನೆಮದ್ದು’ ಎಂಬ ಟಿಕ್‍ಟಾಕ್ ವಿಡಿಯೋ ನೋಡಿ 10 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರಿ ಜಿಲ್ಲೆಯಲ್ಲಿ ನಡೆದಿದೆ.
ಕೋವಿಡ್-19 ವೈರಸ್‍ಗೆ ನಿಖರವಾದ ಔಷಧಿ ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಬರುವ ಮನೆಮದ್ದು, ಔಷಧಿಗಳ ವದಂತಿಯನ್ನು ಯಾರೂ ನಂಬಬೇಡಿ ಎಂದು ರಾಜ್ಯ ಮತ್ತು ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು ಸಾರ್ವಜನಿಕರ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೂ ಗ್ರಾಮೀಣ ಪ್ರದೇಶದ ಕೆಲ ಜನರು ಸೋಶಿಯಲ್ ಮೀಡಿಯಾದಲ್ಲಿ ಹೇಳುವ ಔಷಧಿಯನ್ನು ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಿಲ್ಲೆಯ ಅಲಿಪಲ್ಲಿ ಗ್ರಾಮದಲ್ಲಿ ಎರಡು ಕುಟುಂಬಗಳು ಟಿಕ್‍ಟಾಕ್ ವಿಡಿಯೋವೊಂದರಲ್ಲಿ ದತ್ತೂರಿ ಬೀಜ (ದತ್ತೂರಿ ಬೀಜ ಹಳ್ಳಿಗಳಲ್ಲಿ ಸುಲಭವಾಗಿ ಸಿಗುತ್ತದೆ) ದಿಂದ ಮಾಡಿದ ರಸವನ್ನು ಸೇವಿಸಿದರೆ ಕೊರೊನಾ ವೈರಸ್ ಬರದಂತೆ ತಡೆಯಬಹುದು ಎಂಬುದನ್ನು ನೋಡಿದೆ. ಅದರಂತೆಯೇ ವಿಡಿಯೋ ನಂಬಿಕೊಂಡು ದತ್ತೂರಿ ಬೀಜದಿಂದ ರಸವನ್ನು ತಯಾರಿಸಿದ್ದಾರೆ. ಬಳಿಕ ಅದನ್ನು ಎರಡು ಕುಟುಂಬದ 10 ಮಂದಿ ಕುಡಿದಿದ್ದಾರೆ ಎಂದು ಸಬ್ ಇನ್ಸ್‌ಪೆಕ್ಟರ್ ಮುನಿಸ್ವಾಮಿ ತಿಳಿಸಿದರು.
ರಸವನ್ನು ಕುಡಿದ ನಂತರ ಎಲ್ಲರೂ ಹೊಟ್ಟೆನೋವಿನಿಂದ ನರಳಿದ್ದಾರೆ. ಅಲ್ಲದೇ ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ. ತಕ್ಷಣ ನೆರೆಹೊರೆಯವರು ಅವರನ್ನು ನೋಡಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಾರೆ ಎಂದು ವರದಿಯಾಗಿದೆ.
ಕೊರೊನಾ ವೈರಸ್‍ಗೆ ಲಸಿಕೆ ಇಲ್ಲ. ಇನ್ನೂ ಪ್ರಯೋಗಗಳು ನಡೆಯುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಬರುವ ಔಷಧಿಯ ವದಂತಿಯನ್ನು ನಂಬಬೇಡಿ. ಎಲ್ಲರೂ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಜೊತೆಗೆ ಆರೋಗ್ಯ ಇಲಾಖೆ ನೀಡುವ ಸಲಹೆ, ಸೂಚನೆಗಳನ್ನು ಅನುಸರಿಸಿ ಎಂದು ಆರೋಗ್ಯ ಅಧಿಕಾರಿ ಡಾ.ಎಂ.ಪಂಚಲಯ್ಯ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.