ನವದೆಹಲಿ: ಭಾರತದಲ್ಲಿ ಚೀನಾ ಮೂಲದ ಬೈಟ್‍ಡ್ಯಾನ್ಸ್ ಕಂಪನಿಯ ಖ್ಯಾತ ವಿಡಿಯೋ ಆ್ಯಪ್ ಟಿಕ್ ಟಾಕ್ ನಿಷೇಧಿಸಲಾಗಿದ್ದು, ಇದರಿಂದ ಕಂಪನಿಗೆ ದಿನಕ್ಕೆ 4.5 ಕೋಟಿ ರೂ. ನಷ್ಟವಾಗುತ್ತಿದೆ.
ಟಿಕ್ ಟಾಕ್ ನಿಷೇಧ ಸಂಬಂಧ ಸುಪ್ರಿಂ ಕೋರ್ಟ್‍ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಈ ಕುರಿತು ವಾದ ಮಂಡಿಸಿರುವ ಬೈಟ್ ಡ್ಯಾನ್ಸ್ ಕಂಪನಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಆ್ಯಪ್ ನಿಷೇಧದ ಬಳಿಕ ಕೇವಲ ಬೈಟ್ ಡ್ಯಾನ್ಸ್ ಗೆ ಮಾತ್ರವಲ್ಲ, ಈ ಆ್ಯಪ್ ಬಳಕೆ ಮಾಡುತ್ತಿದ್ದ ಸುಮಾರು 20 ಲಕ್ಷ ಗ್ರಾಹಕರಿಗೂ ತೊಂದರೆಯಾಗುತ್ತಿದೆ. ಅಲ್ಲದೆ ಕಂಪನಿಯ 250ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
Advertisement
Advertisement
ಟಿಕ್‍ಟಾಕ್ ನಿಷೇಧ ಕುರಿತಂತೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಈ ಅರ್ಜಿಯ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟಿಗೆ ಒಪ್ಪಿಸಿತ್ತು. ಈ ವೇಳೆ ಟಿಕ್ ಟಾಕ್ ಆ್ಯಪ್ ನಿಷೇಧ ಮಾಡುವಂತೆ ಸಲ್ಲಿಸಲಾಗಿರುವ ಅರ್ಜಿಯಲ್ಲಿರುವ ತಕಾರಾರುಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಬೈಟ್ ಡ್ಯಾನ್ಸ್ ಸಂಸ್ಥೆ ಕೂಡ ಕೋರ್ಟ್ ನಲ್ಲಿ ಪ್ರಶ್ನಿಸಬಹುದು. ಒಂದು ವೇಳೆ ಏ.24ರಂದು ಈ ಕುರಿತು ನಿರ್ಧಾರ ಕೈಗೊಳ್ಳಲು ಮದ್ರಾಸ್ ಹೈಕೋರ್ಟ್ ವಿಫಲವಾದರೆ, ಆಗ ಆ್ಯಪ್ ಬ್ಯಾನ್ ಕುರಿತಂತೆ ನೀಡಿದ್ದ ಆದೇಶ ರದ್ದುಗೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
Advertisement
ಭಾರತದಲ್ಲಿ 3 ಕೋಟಿ ಜನರು ಟಿಕ್‍ಟಾಕ್ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿದ್ದರೆ, ವಿಶ್ವದಲ್ಲಿ 100 ಕೋಟಿ ಮಂದಿ ಈ ಆ್ಯಪ್ ಡೌನ್‍ಲೋಡ್ ಮಾಡಿದ್ದಾರೆ. ವಿಡಿಯೋ ಪೇಜ್‍ನಲ್ಲಿ ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ಟಿಕ್‍ಟಾಕ್ ಆದಾಯಗಳಿಸುತ್ತಿದೆ.
Advertisement
ನಿಷೇಧ ಯಾಕೆ?
ಈ ಅಪ್ಲಿಕೇಶನ್ ನಲ್ಲಿ ಜನ ಆಕ್ಷೇಪಾರ್ಹ ವಿಡಿಯೋಗಳನ್ನು ಹಂಚಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಹೀಗಾಗಿ ಈ ಆ್ಯಪನ್ನು ನಿಷೇಧಿಸಬೇಕೆಂದು ಅರ್ಜಿದಾರರು ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು. ಅರ್ಜಿದಾರರ ವಾದವನ್ನು ಪುರಸ್ಕರಿಸಿದ ಮದ್ರಾಸ್ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆ್ಯಪ್ ನಿಷೇಧಿಸುವಂತೆ ಏ.3 ರಂದು ಮಧ್ಯಂತರ ಆದೇಶ ಹೊರಡಿಸಿತ್ತು. ಟಿಕ್ ಟಾಕ್ ಆ್ಯಪನ್ನು ಅಭಿವೃದ್ಧಿಪಡಿಸಿದ ಬೈಟ್‍ಡಾನ್ಸ್ ಟೆಕ್ನಾಲಜಿ ಈ ಆದೇಶಕ್ಕೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಮದ್ರಾಸ್ ಹೈ ಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಅಪ್ಲಿಕೇಶನ್ ಕಿತ್ತು ಹಾಕುವಂತೆ ಆಪಲ್ ಮತ್ತು ಗೂಗಲ್ ಕಂಪನಿಗಳಿಗೆ ಸೂಚಿಸಿತ್ತು. ಕೇಂದ್ರದ ಸೂಚನೆಯ ಹಿನ್ನೆಲೆಯಲ್ಲಿ ಗೂಗಲ್ ಮತ್ತು ಆಪಲ್ ಕಂಪನಿ ಆ್ಯಪ್ ಸ್ಟೋರ್ ನಿಂದ ಟಿಕ್ ಟಾಕ್ ಕಿತ್ತು ಹಾಕಿತ್ತು.