ನವದೆಹಲಿ: ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಮಾಜಿ ಸಿಎಂ, ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಇಂದು ಭೇಟಿಯಾದರು.
ಡಿಕೆ ಶಿವಕುಮಾರ್ ಜೈಲಿನಲ್ಲಿ ಇರೋದರಿಂದ ಅವರಿಗೆ ಧೈರ್ಯ ಹೇಳಲು ನಾವೆಲ್ಲರು ಬಂದಿದ್ದು, ಆದ್ರೆ ಡಿಕೆಶಿಯವರು ಮಾನಸಿಕವಾಗಿ ಸದೃಢ ಮತ್ತು ಧೈರ್ಯವಾಗಿದ್ದಾರೆ. ಬಂದಿರುವ ಎಲ್ಲ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವೂ ಒಳ್ಳೆಯದಾಗಲಿದ್ದು, ಈ ವಿಷಯದಲ್ಲಿ ರಾಜಕೀಯ ಮಾಡಿದವರಿಗೆ ಜನರು ಪಾಠ ಕಲಿಸಲಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದಾಗ ನಾನು ಮತ್ತು ಡಿ.ಕೆ.ಶಿವಕುಮಾರ್ ಜೊತೆಯಾಗಿ ಕೆಲಸ ಮಾಡಿದ್ದೇವೆ. ಇಂದು ಕೆಟ್ಟ ಘಳಿಗೆಯಲ್ಲಿ ತಿಹಾರ್ ಜೈಲಿನಲ್ಲಿರುವಂತಾಗಿದೆ. ಇದು ವೈಯಕ್ತಿಕ ಭೇಟಿಯಾಗಿದ್ದು, ಪಕ್ಷಕ್ಕೆ ಸಂಬಂಧಿಸಿಲ್ಲ. ಶಿವಕುಮಾರ್ ಜೊತೆಗೆ ನಾನಿದ್ದೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಇಡಿ ಅಧಿಕಾರಿಗಳು ಕೇಳಿದ ದಾಖಲೆಗಳನ್ನು ಡಿಕೆ ಶಿವಕುಮಾರ್ ನೀಡಿದ್ದಾರೆ ಎಂಬ ಮಾಹಿತಿ ನನಗಿದೆ. ಡಿಕೆ ಶಿವಕುಮಾರ್ ವಿಚಾರಣೆಗೆ ಸಹಕರಿಸಿದ್ರೂ ಇಂದು ರಾಜಕೀಯ ಷಡ್ಯಂತ್ರಗಳಿಂದಾಗಿ ಜೈಲಿನಲ್ಲಿರುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಅವರಿಗೆ ಮಾಜಿ ಸಚಿವರಾದ ಸಾ.ರಾ.ಮಹೇಶ್, ಪುಟ್ಟರಾಜು ಮತ್ತು ಸಂಸದ ಡಿ.ಕೆ.ಸುರೇಶ್ ಸಾಥ್ ನೀಡಿದರು.