ಚಿಕ್ಕಮಗಳೂರು: ಅರಣ್ಯ ಇಲಾಖೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಹುಲಿ ಸಂಚರಿಸುವ ದೃಶ್ಯಗಳು ಸೆರೆಯಾಗಿದ್ದು, ಹುಲಿರಾಯನ ಭಯದಿಂದಲೇ ಮೂಡಿಗೆರೆಯ ಉದುಸೆ ಗ್ರಾಮದ ಜನರು ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಜಿಲ್ಲೆಯ ಉದುಸೆ ಗ್ರಾಮದಲ್ಲಿ ಹುಲಿ ಬಾಯಿಗೆ ಎರಡು ಹಸು ಒಂದು ಕರು ಬಲಿಯಾಗಿದೆ. ಜೀವನಕ್ಕೆ ಆಧಾರವಾಗಿದ್ದ ಹಸು ಕಳೆದಕೊಂಡ ರೈತರ ಗೋಳು ಹೇಳತೀರಾದಾಗಿದೆ. ಇನ್ನು ಹುಲಿ ಭಯಕ್ಕೆ ತಾಲೂಕಿನ ಚಕ್ಕೊಡಿಗೆ, ಹೆಗ್ಗರವಳ್ಳಿ, ದಿಣ್ಣೆಕೆರೆಯ ಸುತ್ತ ಮುತ್ತಲಿನ ಗ್ರಾಮಸ್ಥರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.
Advertisement
Advertisement
ಅಲ್ಲದೇ ಕಳೆದ ಎರಡು ದಿನಗಳ ಹಿಂದೆ ಮತ್ತೆ ಗ್ರಾಮ ರೈತರೊಬ್ಬರ ಹಸುವನ್ನು ಹುಲಿ ಬೇಟೆಯಾಡಿದೆ. ಹುಲಿ ಕಾಣಿಸಿಕೊಂಡಿರುವ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ ಉದುಸೆ ಗ್ರಾಮದ ರವಿ ಎಂಬುವರ ತೋಟದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಇದರಲ್ಲಿ ಹುಲಿ ಸಂಚರಿಸುವ ದೃಶ್ಯಗಳು ಸೆರೆಯಾಗಿದ್ದು, ಗ್ರಾಮಸ್ಥರಲ್ಲಿ ಮತ್ತಷ್ಟು ಅತಂಕ ಹೆಚ್ಚಿಸಿದೆ.
Advertisement
ಈ ಭಾಗದಲ್ಲಿ ಎರಡರಿಂದ ಮೂರು ಹುಲಿಗಳು ಇರುವ ಕುರಿತು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದು, ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಹುಲಿಗಳನ್ನು ಸೆರೆ ಹಿಡಿಯಲು ಯಾವುದೇ ಕ್ರಮ ಕೈಗೊಳ್ಳದ ಅರಣ್ಯ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.