ವಿಶ್ವದಲ್ಲೇ ಮೊದಲ ಪ್ರಕರಣ – ಝೂನಲ್ಲಿದ್ದ ಹುಲಿಗೂ ಕೊರೊನಾ

Public TV
2 Min Read
tiger

– 6 ಹುಲಿಗಳಲ್ಲಿ ಸೋಂಕಿನ ಲಕ್ಷಣ ಪತ್ತೆ

ನ್ಯೂಯಾರ್ಕ್: ವಿಶ್ವವ್ಯಾಪಿ ಹರಡುತ್ತಿರುವ ಕೊರೊನಾ ವೈರಸ್ ಈವರೆಗೆ ಕೇವಲ ಮನುಷ್ಯರಲ್ಲಿ ಹಾಗೂ ಸಾಕು ಪ್ರಾಣಿಗಳಲ್ಲಿ ಕಾಣಿಸಿಕೊಂಡ ಪ್ರಕರಣಗಳು ವರದಿಯಾಗಿದ್ದವು. ಆದರೆ ವಿಶ್ವದಲ್ಲೇ ಮೊದಲ ಭಾರಿಗೆ ವನ್ಯ ಜೀವಿಗೂ ಕೊರೊನಾ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ.

ನ್ಯೂಯಾರ್ಕ್‍ನಲ್ಲಿನ ಬ್ರಾನ್ಸ್ ಮೃಘಾಲಯದಲ್ಲಿನ ಹುಲಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಅಮೆರಿಕದ ಕೃಷಿ ಇಲಾಖೆಯು ಈ ಬಗ್ಗೆ ಭಾನುವಾರ ತಿಳಿಸಿದೆ. ಈ ಬಗ್ಗೆ ಬ್ರಾನ್ಸ್ ಮೃಗಾಲಯದ ಮುಖ್ಯ ಪಶುವೈದ್ಯಾಧಿಕಾರಿ ಪೌಲ್ ಅವರು ಪ್ರತಿಕ್ರಿಯಿಸಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನನಗೆ ತಿಳಿದಿರುವ ಮಟ್ಟಿಗೆ ಮನುಷ್ಯನಿಂದ ವನ್ಯ ಜೀವಿಗೆ ಕೊರೊನಾ ವೈರಸ್ ತಗುಲಿರುವುದು ಇದೇ ಮೊದಲ ಪ್ರಕರಣ ಎಂದು ಹೇಳಿದ್ದಾರೆ.

tiger corona 2

ಬ್ರಾನ್ಸ್ ಝೂನಲ್ಲಿರುವ ನಾಡಿಯಾ ಎಂಬ ಮಲಯನ್ ಹುಲಿ ಕೊರೊನಾಗೆ ತುತ್ತಾಗಿದೆ. ಬಹುಶಃ ಝೂನಲ್ಲಿ ಕೆಲಸ ಮಾಡುತ್ತಿದ್ದ ಸೋಂಕಿತ ಸಿಬ್ಬಂದಿಯಿಂದ ಹುಲಿಗೆ ಸೋಂಕು ಹರಡಿದೆ ಎಂದು ಪೌಲ್ ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಮಾರ್ಚ್ 16ರಿಂದ ಝೂಗೆ ಸಾರ್ವಜನಿಕರ ಪ್ರವೇಶವನ್ನು ರದ್ದುಗೊಳಿಸಿ, ಝೂ ಬಂದ್ ಮಾಡಲಾಗಿದೆ. ಹೀಗಾಗಿ ಝೂ ಸಿಬ್ಬಂದಿಗೆ ಸೋಂಕು ತಗುಲಿ ಅದು ಹುಲಿಗೆ ಹರಡಿರಬಹುದು ಎಂಬ ಅನುಮಾನಗಳು ಹುಟ್ಟುಕೊಂಡಿವೆ.

ಮಾರ್ಚ್ ಅಂತ್ಯದಲ್ಲಿ ಹುಲಿಯಲ್ಲಿ ಒಣ ಕೆಮ್ಮು ಕಾಣಿಸಿಕೊಂಡಿತ್ತು. ಈ ವೇಳೆ ವೈದ್ಯರು ಚಿಕಿತ್ಸೆ ನೀಡಿದ್ದರು. ಆದರೆ ಕೆಮ್ಮು ಮಾತ್ರ ಕಡಿಮೆ ಆಗಿರಲಿಲ್ಲ. ಹೀಗಾಗಿ ವೈದ್ಯರು ಒಮ್ಮೆ ಕೋವಿಡ್-19 ತಪಾಸಣೆ ಮಾಡೋಣ ಎಂದು ತೀರ್ಮಾನಿಸಿ ಏಪ್ರಿಲ್ 2ರಂದು ಹುಲಿಯ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದರು. ಸದ್ಯ ಹುಲಿಯ ಪರೀಕ್ಷಾ ವರದಿ ಬಂದಿದ್ದು, ಹುಲಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

Bronx Zoo 001

ಸೋಂಕಿತ ಹುಲಿಯ ಜೊತೆಗಿದ್ದ 2 ಸೈಬೇರಿಯನ್ ಹುಲಿಗಳು, ಮೂರು ಆಫ್ರಿಕನ್ ಹುಲಿಗಳಲ್ಲಿಯೂ ಸೋಂಕಿನ ಲಕ್ಷಣಗಳು ಪತ್ತೆಯಾಗಿದ್ದು, ಎಲ್ಲಾ 6 ಹುಲಿಗಳನ್ನು ಝೂ ಪಶು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಹುಲಿಗಳ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಇವುಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ.

ಯುಎಸ್‍ಡಿಎ ಮತ್ತು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಪ್ರಕಾರ, ಸಾಕು ಪ್ರಾಣಿಗಳು ಹಾಗೂ ಸೆರೆಯಲ್ಲಿರುವ ವನ್ಯ ಜೀವಿಗಳಿಂದ ಮನುಷ್ಯನಿಗೆ ಕೊರೊನಾ ಸೋಂಕು ಹರಡುತ್ತದೆ ಎನ್ನು ಬಗ್ಗೆ ಯಾವುದೇ ದಾಖಲೆಗಳಿಲ್ಲ. ಆದರೆ ಬಾವಲಿಗಳಿಂದ ಮನುಷ್ಯನಿಗೆ ಕೊರೊನಾ ಸೋಂಕು ಹರಡುತ್ತದೆ ಎಂಬ ಬಗ್ಗೆ ಮಾಹಿತಿಗಳು ಲಭ್ಯವಿದೆ.

tiger 1

ಈ ಹಿಂದೆ ಮನುಷ್ಯರಿಗೆ ವಿಪರೀತ ಕಾಟ ನೀಡುತ್ತಿರುವ ಕೊರೊನಾ ವೈರಸ್ ಬೆಕ್ಕುಗಳಿಗೂ ಹರಡಿರುವುದು ವರದಿಯಾಗಿತ್ತು. ಬೆಕ್ಕಿನ ಮಾಲೀಕನಿಗೆ ಕೊರೊನಾ ಬಂದಿದ್ದು ಆತ ಹೋಮ್ ಕ್ವಾರಂಟೈನ್‍ನಲ್ಲಿದ್ದ. ಇದರಿಂದಾಗಿ ವೈರಸ್ ಬೆಕ್ಕಿಗೂ ಬಂದಿದೆ. ಬೆಕ್ಕಿನಲ್ಲಿ ಕೊರೊನಾ ಸೋಂಕು ಬಂದಿರುವುದನ್ನು ಬೆಲ್ಜಿಯಂನ ಆರೋಗ್ಯ ಅಧಿಕಾರಿಗಳು ಖಚಿತ ಪಡಿಸಿದ್ದರು.

ಹಾಗೆಯೇ ಹಾಂಕಾಂಗ್‍ನಲ್ಲಿ ಕೊರೊನಾ ಪೀಡಿತರ ಸಂಪರ್ಕಕ್ಕೆ ಬಂದಿದ್ದ 17 ನಾಯಿ ಮತ್ತು 8 ಬೆಕ್ಕುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ 2 ನಾಯಿಗಳಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು.

CAT

ವೈರಸ್ ಮನುಷ್ಯನಿಂದ ಪ್ರಾಣಿಗಳಿಗೆ ಹೋಗಬಹುದು. ಆದರೆ ಪ್ರಾಣಿಗಳಿಂದ ಮನುಷ್ಯನಿಗೆ ಬರಬಹುದು ಎನ್ನುವುದನ್ನು ನಾನು ಒಪ್ಪುವುದಿಲ್ಲ ಎಂದು ಬೆಲ್ಜಿಯಂ ಆರೋಗ್ಯ ಅಧಿಕಾರಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *